ದಾವಣಗೆರೆ, ಅ.24: ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈತರಿಂದ ಪಡೆದ ಭೂಮಿಗೆ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಅನ್ವಯ ಇಂದು ಹುಬ್ಬಳ್ಳಿ-ಮೈಸೂರು ಇಂಟರ್‌ಸಿಟಿ ರೈಲನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ.
ಹರಿಹರದಲ್ಲಿ ಹುಬ್ಬಳ್ಳಿ-ಮೈಸೂರು ಇಂಟರ್ ಸಿಟಿ ರೈಲನ್ನು ಇಂದು ಬೆಳಗ್ಗೆ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿ, ಸುಮಾರು ೨ ಗಂಟೆಗಳ ನಂತರ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು. ಸುಮಾರು ೨ ಗಂಟೆಗಳ ಕಾಲ ರೈಲನ್ನು ತಡೆ ಹಿಡಿಯಲಾಗಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರು ತೀವ್ರವಾಗಿ ಪರದಾಡುವಂತಾಗಿತ್ತು.
ಕೊಟ್ಟೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸುಮಾರು ೧೫ ವರ್ಷಗಳ ಹಿಂದೆ ರೈತರಿಂದ ಭೂಮಿ ಪಡೆಯಲಾಗಿತ್ತು. ಆದರೆ ಇದಕ್ಕೆ ಬದಲಾಗಿ ಪರಿಹಾರ ನೀಡದ ಹಿನ್ನೆಲೆಯಲ್ಲಿ ಮೂವರು ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಬಾಕಿ ಇರುವ ೩೭ ಲಕ್ಷ ರೂಪಾಯಿಗಳನ್ನು ರೈಲ್ವೆ ಇಲಾಖೆಯಿಂದ ಕೊಡಿಸಬೇಕೆಂದು ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ ಹರಿಹರ ಪ್ರಧಾನ ಸಿವಿಲ್ ನ್ಯಾಯಾಲಯ ರೈಲು ಜಪ್ತಿಗೆ ಆದೇಶ ನೀಡಿತ್ತು. ಅದರಂತೆ ಹುಬ್ಬಳ್ಳಿ- ಮೈಸೂರು ಇಂಟರ್ ಸಿಟಿ ರೈಲನ್ನು ಜಪ್ತಿ ಮಾಡಲಾಗಿತ್ತು. ನಂತರ ಸುಮಾರು ೨ ಗಂಟೆಯ ನಂತರ ರೈಲು ಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು, ಆದರೆ ರೈತರಿಗೆ ನೀಡಬೇಕಾದ ಬಾಕಿ ಹಣವನ್ನು ಕೊಡುವ ಬಗ್ಗೆ ರೈಲ್ವೆ ಇಲಾಖೆ ಯಾವುದೇ ಭರವಸೆ ನೀಡಿಲ್ಲ.
Discussion about this post