ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ 1.22 ಕೋಟಿ ರೂ. ಉಳಿತಾಯ ಬಜೆಟ್ ಬುಧವಾರ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಮಂಡಿಸಿದರು.
ಬಜೆಟ್ ಮಂಡಿಸಿ ಮಾತನಾಡಿದ ಅವರು, ಪ್ರಾರಂಭರಂಭ ಶಿಲ್ಕು-4345.51 ಲಕ್ಷ, ಒಟ್ಟು ಜಮಾ-10122.26 ಲಕ್ಷ, ಒಟ್ಟು ಖರ್ಚು- 9999.50 ಲಕ್ಷ ಹಾಗೂ ಅಖೈರು ಶಿಲ್ಕು-122.76 ಲಕ್ಷ ರೂ. ನಿರೀಕ್ಷಿಸಲಾಗಿದೆ ಎಂದರು.
ನ್ಯೂ ಟೌನ್ ಭಾಗದ ಎನ್’ಟಿಬಿ ಕಚೇರಿಯಲ್ಲಿ ಶಾಖೆಯ ಪ್ರಾರಂಭ
ನ್ಯೂ ಟೌನ್ ಭಾಗದ ಎನ್’ಟಿಬಿ ಕಚೇರಿ ಕಾರ್ಯ ನಿರ್ವಹಣೆಯನ್ನು ಜನ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಹಾಗೂ ನ್ಯೂ ಟೌನ್ ಭಾಗದ ನಾಗರೀಕರ ಬಹುದಿನಗಳ ಬೇಡಿಕೆಯಾಗಿತ್ತು. ಇದರಂತೆ ಕೇಂದ್ರಿಕೃತ ಆಡಳಿತ ವ್ಯವಸ್ಥೆಯನ್ನು ವಿಕೇಂದ್ರಿಕರಣಗೊಳಿಸಿ ಸುಗಮ ಆಡಳಿತ ನಿರ್ವಹಣೆಗೆ ಅನುವಾಗುವಂತೆ ನಗರಸಭೆ ಕಚೇರಿಯ ವಿವಿಧ ಅಗತ್ಯ ಸೇವೆಗಳಾದ ಆಸ್ತಿ ತೆರಿಗೆ ಪಾವತಿ, ನೀರಿನ ಶುಲ್ಕ ಪಾವತಿ, ಮತ್ತು ನ್ಯೂ ಟೌನ್ ಭಾಗದ ಸ್ವಚ್ಛತೆಯನ್ನು ವ್ಯವಸ್ಥಿತವಾಗಿ ಮತ್ತು ತ್ವರಿತಗತಿಯಲ್ಲಿ ಕೈಗೊಳ್ಳಲನುವಾಗುವಂತೆ ಎನ್’ಟಿಬಿ ಕಚೇರಿ ಕಟ್ಟಡದಲ್ಲಿ ಶಾಖೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಕಂದಾಯ ವಿಭಾಗ
2023-24 ನೇ ಸಾಲಿನಲ್ಲಿ ತೆರಿಗೆಗಳಾದ ಆಸ್ತಿ ತೆರಿಗೆ, ಕುಡಿಯುವ ನೀರಿನ ಶುಲ್ಕ, ಉದ್ದಿಮೆ ಪರವಾನಿಗೆ ಶುಲ್ಕ, ಕಟ್ಟಡ ಪರವಾನಿಗೆ ಶುಲ್ಕ ಹಾಗೂ ಇತರೆ ಜಮೆಗಳನ್ನು ಸರ್ಕಾರದಿಂದ ಅಭಿವೃದ್ಧಿ ಪಡಿಸಿರುವ ತಂತ್ರಾಂಶಗಳ ಮೂಲಕ ಚಲನ್’ಗಳನ್ನು ಸಿದ್ಧಪಡಿಸಿ ನಗರಸಭೆ ಆವರಣದಲ್ಲಿರುವ ಬ್ಯಾಂಕ್ ಕೌಂಟರ್ನಲ್ಲಿ ಜಮೆ ಮಾಡಬಹುದಾಗಿದ್ದು, ಪ್ರಸ್ತುತ Google pay/Phone pay/Ptym/Bhim ಇತರೆ ಬಿಬಿಪಿಎಸ್ ಪಾವತಿ ವ್ಯವಸ್ಥೆಗಳ ಮೂಲಕ ಪಾರದರ್ಶಕ ಪಾವತಿಗೆ ಕ್ರಮವಹಿಸಿ ನಗದು ರಹಿತ ವ್ಯವಸ್ಥೆ ಅನುಷ್ಠಾನಗೊಳಿಸಲಾಗುವುದು.
ನಗರದ ನಾಗರೀಕರ ಆಸ್ತಿ ಮಾಹಿತಿಗಳ ದಾಖಲೆಗಳನ್ನು ಗಣಕೀಕರಣಗೊಳಿಸಿ ಆನ್’ಲೈನ್ ತಂತ್ರಾಂಶದ ಮೂಲಕ ಕೆಎಂಎಫ್-24 ರನ್ನು ಡಿಜಿಟಲೀಕರಣಗೊಳಿಸಿ ಆಸ್ತಿ ಮಾಹಿತಿಯು ಸಂಬಂಧಿತ ಆಸ್ತಿ ಮಾಲೀಕರುಗಳಿಗೆ ಸರಳ ರೀತಿಯಲ್ಲಿ ಸಿಗುವ ವ್ಯವಸ್ಥೆ ಕೈಗೊಂಡಿದೆ. ಆ ಮೂಲಕ ಆಸ್ತಿ ತೆರಿಗೆ ಪಾವತಿಯನ್ನು ಆನ್’ಲೈನ್ ಮೂಲಕ ಪಾವತಿಸಲು, ಆಸ್ತಿ ವಿವರಗಳನ್ನು ತಮ್ಮ ಹಂತದಲ್ಲಿಯೇ ಪರಿಶೀಲಿಸಿಕೊಳ್ಳಲು ಅನುಕೂಲವಾಗುವುದರ ಜೊತೆಗೆ ಕಂದಾಯ ಶಾಖೆಯಲ್ಲಿ ನಿರ್ವಹಿಸುತ್ತಿರುವ ನಾಗರೀಕರ ಎಲ್ಲಾ ಆಸ್ತಿ ಮಾಹಿತಿಗಳು ಸುಲಭವಾಗಿ ಮತ್ತು ಸರಳವಾಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಅರ್ಜಿ ವಿಲೇಪಡಿಸುವಲ್ಲಿ ಅನವಶ್ಯಕವಾಗಿ ವಿಳಂಬವಾಗುವುದನ್ನು ತಪ್ಪಿಸಬಹುದಾಗಿದೆ ಮತ್ತು ನಗರ ವ್ಯಾಪ್ತಿಯ ಸಮಗ್ರ ಆಸ್ತಿಗಳ ಸಮೀಕ್ಷೆ ನಡೆಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ನಗರಸಭೆಯ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯನುಸಾರ ಕ್ರಮವಹಿಸಲಾಗುವುದು ಎಂದರು.
ಆರೋಗ್ಯ ವಿಭಾಗ
ಹಿರಿಯೂರು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸಿ ವಿಲೇವಾರಿ ಮಾಡಲು ಅಂದಾಜು ರೂ 100.00 ಲಕ್ಷ ಅನುದಾನದಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ. ಸದರಿ ಘಟಕದಲ್ಲಿ ಉತ್ಪತ್ತಿಯಾಗುವ ಸಾವಯವ ಗೊಬ್ಬರವನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು.
ನಗರದ ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟೀನ್’ಗೆ ಆಹಾರ ತಯಾರಿಕೆಗೆ ಎಲ್’ಪಿಜಿ ಗ್ಯಾಸ್ ಬದಲಾಗಿ ನಗರದಲ್ಲಿ ಉತ್ಪತ್ತಿಯಾಗುವ ಹಸಿ ಕಸದಿಂದ ಬಯೋ ಗ್ಯಾಸ್ ಉತ್ಪಾದಿಸಲು ಬಯೋ ಮಿಥನೈಜಶನ್ ಪ್ಲಾಂಟ್ ಅಳವಡಿಸಲು ಹಾಗೂ ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ವಿಶ್ರಾಂತಿ ತೆಗೆದುಕೊಳ್ಳಲು 02 ಸಂಖ್ಯೆಯ ಫ್ಯಾಬ್ರಿಕೇಟೆಡ್ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲು ಕ್ರಮವಹಿಸಲಾಗುವುದು ಎಂದರು.
ಕಾಮಗಾರಿ ವಿಭಾಗ
ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ-4ರಡಿ ಭದ್ರಾವತಿ ನಗರಸಭೆಗೆ ರೂ 3400.00 ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆ ಮಂಜೂರಾಗಿದ್ದು, ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರೂ 163.88 ಲಕ್ಷ, ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮಗಳಿಗೆ ರೂ 466.48 ಲಕ್ಷ, ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮಗಳಿಗೆ ರೂ 189,04 ಲಕ್ಷ ಇತರೆ ಬಡವರ್ಗದವರ ಕಲ್ಯಾಣ ಕಾರ್ಯಕ್ರಮಗಳಿಗೆ ರೂ. 246.50 ಲಕ್ಷ, ದಿವ್ಯಾಂಗ ಕಲ್ಯಾಣ ಕಾರ್ಯಕ್ರಮಗಳಿಗೆ ರೂ 170.00 ಲಕ್ಷ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ರೂ 2164.10 ಲಕ್ಷಗಳನ್ನು ಮೀಸಲಿರಿಸಲಾಗಿದ್ದು, ವೈಯಕ್ತಿಕ ಕಾರ್ಯಕ್ರಮಗಳ ಸೌಲಭ್ಯಕ್ಕಾಗಿ ಫಲಾನುಭವಿಗಳ ಆಯ್ಕೆಗೆ ಕ್ರಮವಹಿಸಲಾಗಿದೆ. ಒಟ್ಟಾರೆಯಾಗಿ ರಸ್ತೆ, ಚರಂಡಿ, ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ರೂ. 2148 ಲಕ್ಷಗಳ ಕಾಮಗಾರಿಗಳಿಗೆ ಹಾಗೂ ನಗರದ ಪ್ರಮುಖ ರಸ್ತೆಗಳಿಗೆ Decorative Conical Electrical Pole ಅಳವಡಿಸಿ ಬೀದಿ ದೀಪಗಳನ್ನು ಅಳವಡಿಸುವ ರೂ 447.90 ಲಕ್ಷದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
2023-24 ನೆಯ ಸಾಲಿಗೆ ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಯಾದ ಅಮೃತ್-2 ಯೋಜನೆಯಡಿ ಕೆರೆ ಅಭಿವೃದ್ಧಿ ಮತ್ತು ಉದ್ಯಾನವನ ಅಭಿವೃದ್ಧಿಗಾಗಿ 18.00 ಕೋಟಿ ಅನುದಾನ ಮಂಜೂರಾತಿ ನಿರೀಕ್ಷಣೆಯಲ್ಲಿದೆ. ನಗರದ ಹಳೇನಗರ ಭಾಗದಲ್ಲಿ ಈ ಹಿಂದೆ ಕೆಎಂಆರ್’ಪಿ ಯೋಜನೆಯಡಿ ಕೈಗೊಂಡ ಒಳಚರಂಡಿ ಕಾಮಗಾರಿ ಅಪೂರ್ಣಗೊಂಡಿದ್ದು, ಬಾಕಿ ಇರುವ ಒಳಚರಂಡಿ ಕಾಮಗಾರಿ ಒಳಗೊಂಡಂತೆ ಹಳೇನಗರ ವ್ಯಾಪ್ತಿಯ ಪೂರ್ಣ ಬಡಾವಣೆಗಳಿಗೆ ರೂ 30.00 ಕೋಟಿ ಅನುದಾನದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದ್ದು, ಪ್ರಸ್ತಾವನೆ ಚಾಲನೆಯಲ್ಲಿರುತ್ತದೆ ಎಂದರು.
ನಗರಸಭೆಯಿಂದ 2022-23ನೇ ಸಾಲಿನಲ್ಲಿ ಬಿಎಚ್ ರಸ್ತೆಯಲ್ಲಿ ನಗರ ಭೂ ಸಾರಿಗೆ ಅನುದಾನದಡಿ ರೂ. 217.00 ಲಕ್ಷಗಳಲ್ಲಿ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಮತ್ತು ನಗರಸಭೆಯಿಂದ 2022-23ನೇ ಸಾಲಿನಲ್ಲಿ ಎಸ್’ಎಫ್’ಸಿ ನಿಧಿಯಡಿ ರೂ 180.23 ಲಕ್ಷಗಳಲ್ಲಿ ಕನಕ ಮಂಟಪ ಸಮೀಪ ನಗರಸಭಾ ಅಧಿಕಾರಿ ಮತ್ತು ನೌಕರರಿಗೆ ಜಿ+3 ಮಾದರಿಯಲ್ಲಿ 12 ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದರು.
ನಗರಸಭೆಯಿಂದ ಜೈಭೀಮ್ ನಗರದಲ್ಲಿ ಖಾಯಂ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಜಿ+3 ಮಾದರಿಯಲ್ಲಿ 05 ಬ್ಲಾಕ್ ಗಳಲ್ಲಿ ಒಟ್ಟು 14 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮುಕ್ತಾಯದ ಹಂತದಲ್ಲಿರುತ್ತದೆ. ಹಾಗೂ ನಗರದ ಬಿಎಚ್ ರಸ್ತೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಹಾಲಿ ಇರುವ 8 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ಬದಲಾಯಿಸಿ 12 ಅಡಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ರವರ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಎಚ್.ಎಂ. ಮನುಕುಮಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post