ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಎಂಜಿ ಕಾಲೋನಿ ರೈಲ್ವೆ ಮೈದಾನದಲ್ಲಿ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವತಿಯಿಂದ 77 ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬೆಂಗಳೂರು #Bengaluru ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಆಶುತೋಷ್ ಕುಮಾರ್ ಸಿಂಗ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ರೈಲ್ವೆ ರಕ್ಷಣಾ ಪಡೆ, ವಿದ್ಯಾರ್ಥಿಗಳು ಮತ್ತು ಸ್ಕೌಟ್ಸ್ ಗೈಡ್ಸ್ ತುಕಡಿಗಳನ್ನು ಒಳಗೊಂಡ ಪರೇಡ್ ಅನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, 2025 ರ ಏಪ್ರಿಲ್’ನಿಂದ ಡಿಸೆಂಬರ್’ವರೆಗೆ, ನೈಋತ್ಯ ರೈಲ್ವೆಯ #SouthWesternRailway ಒಟ್ಟು ಆದಾಯ 6,939 ಕೋಟಿಗಳಾಗಿದ್ದು, ಇದು ಕಳೆದ ವರ್ಷಕ್ಕಿಂತ 16% ಹೆಚ್ಚಾಗಿದೆ. ಪ್ರಯಾಣಿಕರ ಆದಾಯ 2,543 ಕೋಟಿ ಹಾಗೂ ಸರಕು ಸಾಗಣೆ ಆದಾಯವು 3,976 ಕೋಟಿಗಳಾಗಿದೆ ಎಂದರು.
ಹಬ್ಬದ ಋತುಗಳಲ್ಲಿ, ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ವಿವಿದ ರೈಲುಗಳಿಗೆ 614 ಹೆಚ್ಚುವರಿ ಬೋಗಿಗಳನ್ನು ಅಳವಡಿಸಿತು, ಹಾಗೆಯೇ 481 ವಿಶೇಷ ರೈಲುಗಳನ್ನು ಓಡಿಸಿತು. ಇದರಿಂದ ನೈರುತ್ಯ ರೈಲ್ವೆಯು 232 ಕೋಟಿ ಹೆಚ್ಚುವರಿ ಆದಾಯ ಗಳಿಸಿತು ಎಂದು ತಿಳಿಸಿದರು.
ಕೆರೈಡ್’ನ 3.5 ಕಿಮೀ ಜೋಡಿ ಮಾರ್ಗ ಕಾಮಗಾರಿಯೂ ಸೇರಿದಂತೆ ಒಟ್ಟು 26 ಕಿಮೀ ಜೋಡಿಮಾರ್ಗವನ್ನು ಕಾರ್ಯ ನಿಯೋಜನೆಗೊಳಿಸಲಾಗಿದೆ. ಮಕ್ಕಾಜಿಪಲ್ಲಿ-ಧರ್ಮಾವರಂ ಜೋಡಿ ಮಾರ್ಗದಲ್ಲಿ ಲೋಕೋಮೋಟಿವ್’ನ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಒಟ್ಟು 360 ಟ್ರ್ಯಾಕ್ ಕಿಲೋಮೀಟರ್’ಗಳಲ್ಲಿ ಸೆಕ್ಷನಲ್ ವೇಗವನ್ನು 110 ಕಿಮೀಗೆ ಹೆಚ್ಚಿಸಲಾಗಿದ್ದು, 15 ನಿಲ್ದಾಣಗಳಲ್ಲಿ ಲೂಪ್ ಲೈನ್ ವೇಗವನ್ನು 30 ಕಿಮೀಗೆ ಹೆಚ್ಚಿಸಲಾಗಿದೆ ಎಂದರು.
4 ರಸ್ತೆ ಮೇಲ್ಸೇತುವೆ, 5 ರಸ್ತೆ ಕೆಳಸೇತುವೆಗಳು, 7 ಪಾದಚಾರಿ ಮೇಲ್ಸೇತುವೆಗಳು, 1 ಸಬ್’ವೇ ಮತ್ತು 15 ಉನ್ನತ ಎತ್ತರದ ಪ್ಲಾಟ್’ಫಾರಂಳನ್ನು ಪೂರ್ಣಗೊಳಿಸಲಾಗಿದೆ. 126 ನಿಲ್ದಾಣಗಳಲ್ಲಿ ದಿವ್ಯಾಂಗಜನ ಸ್ನೇಹಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಡಿಸೆಂಬರ್ 2025 ರ ವರೆಗೆ 78 ಲಿಫ್ಟ್’ಗಳು ಮತ್ತು 62 ಎಸ್ಕಲೇಟರ್’ಗಳನ್ನು ಕಾರ್ಯನಿಯೋಜನೆಗೊಳಿಸಲಾಗಿದೆ ಎಂದರು.
ರೈಲ್ವೆ ರಕ್ಷಣಾ ದಳವು ಆಪರೇಷನ್ ನನ್ಹೆ ಫರಿಶ್ತೆ ಅಡಿಯಲ್ಲಿ, 487 ಮಕ್ಕಳು ಮತ್ತು 54 ಅಸಹಾಯಕ ವಯಸ್ಕರನ್ನು ರಕ್ಷಿಸಿದೆ. ಟಿಕೆಟ್ ದಲ್ಲಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ 206 ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು 5.7 ಲಕ್ಷ ರೂಪಾಯಿಗಳ ಮೌಲ್ಯದ ಟಿಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. 15 ಲಕ್ಷ ಮೌಲ್ಯದ ಕಳುವಾದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನೈಋತ್ಯ ರೈಲ್ವೆಯ 164 ನಿಲ್ದಾಣಗಳಲ್ಲಿ 2,179 ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯ ಮೂಲಕ ಕಣ್ಗಾವಲು ಹೆಚ್ಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರೈಲ್ವೆ ರಕ್ಷಣಾ ಪಡೆಯಿಂದ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರೀಕ್ಷಿತ್ ಮೋಹನ್ ಪೂರಿಯಾ ಮತ್ತು ಪ್ರವೀಣ್ ಕಾತರಕಿ, ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಶ್ರೇಯಾನ್ಸ್ ಚಿಂಚ್ವಾಡೆ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಉಮಾ ಶರ್ಮಾ, ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಬೆಂಗಳೂರು ವಿಭಾಗದ ಅಧ್ಯಕ್ಷೆ ರೀನಾ ಸಿಂಗ್, ಇತರ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಕುಟುಂಬ ಸದಸ್ಯರು ಮತ್ತು ಮಾನ್ಯತೆ ಪಡೆದ ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















