ಮಕರ ಸಂಕ್ರಾಂತಿಯ ದಿನದಂದು ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ‘ಮಕರ ಸಂಕ್ರಾಂತಿ’ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಇದರೊಂದಿಗೆ ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನನ್ನು ವಧಿಸಿದ್ದಳು ಎಂಬ ಕಥೆಯೂ ಇದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿಪಡಿಸಲು ಪ್ರತಿ 80 ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ. 2023ರಲ್ಲಿ ಮಕರ ಸಂಕ್ರಾಂತಿಯು 15 ಜನವರಿ 2023, ರವಿವಾರದಂದು ಆಚರಿಸಲಾಗುವುದು. ಸಂಕ್ರಾಂತಿಯಂದು ಒಬ್ಬರಿಗೊಬ್ಬರು ಎಳ್ಳು-ಬೆಲ ಹಂಚುತ್ತಾರೆ. ಇದು ಪ್ರೀತಿ ಮತ್ತು ಸೌಹಾರ್ದತೆ ಹೆಚ್ಚಿಸುವ ಹಬ್ಬವಾಗಿದೆ.
ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಸಮಯ ಚೈತನ್ಯದ ಲಾಭವಾಗುತ್ತದೆ.
ಎಳ್ಳು ಮತ್ತು ಸಂಕ್ರಾಂತಿಯ ಸಂಬಂಧ
ಸಂಕ್ರಾಂತಿಯಲ್ಲಿ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಎಳ್ಳು ಸತ್ತ್ವಲಹರಿಗಳನ್ನು ಗ್ರಹಿಸಿ ಪ್ರಕ್ಷೇಪಿಸುತ್ತದೆ. ಎಳ್ಳು ಸೇವಿಸುವುದರಿಂದ ಆಂತರಿಕ ಶುದ್ಧಿಯಾಗುತ್ತದೆ. ಎಳ್ಳು-ಬೆಲ್ಲವನ್ನು ದೇವರಿಗೆ ನೈವೇದ್ಯವೆಂದು ಅರ್ಪಿಸಿ ಇತರರಿಗೆ ಹಂಚುವುದರಿಂದ ಅವರಲ್ಲಿಯೂ ಪ್ರೇಮಭಾವ ಮತ್ತು ಸಕಾರಾತ್ಮಕತೆ ಹೆಚ್ಚುತ್ತದೆ.
ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ. ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ಅಪಹರಿಸುತ್ತಾರೆ ಮತ್ತು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ.’
ಮಕರ ಸಂಕ್ರಾಂತಿಯಂದು ಬಾಗಿನ ನೀಡುವುದು
‘ಬಾಗಿನ ನೀಡುವುದೆಂದರೆ’ ಇನ್ನೊಂದು ಜೀವದಲ್ಲಿರುವ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ. ಇತ್ತೀಚೆಗೆ ಸಾಬೂನು ಇಡುವ ಡಬ್ಬಿ, ಸ್ಟೀಲ್ ಪಾತ್ರೆ, ಪ್ಲಾಸ್ಟಿಕ್‌ನ ವಸ್ತುಗಳಂತಹ ವಸ್ತುಗಳನ್ನು ಬಾಗಿನವೆಂದು ಕೊಡುವ ಅಯೋಗ್ಯ ಪದ್ಧತಿಯು ರೂಢಿಯಲ್ಲಿದೆ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಸಾಧನೆಗೆ ಪೂರಕ ಹಾಗೂ ಮಾರ್ಗದರ್ಶಕವಾಗಿರುವ ವಸ್ತುಗಳನ್ನು ಕೊಡಬೇಕು.
ಸಂಕ್ರಾಂತಿಯ ಹಬ್ಬಕ್ಕೆ ಮುತ್ತೈದೆಯರು ಸಣ್ಣ ಮಣ್ಣಿನ ಮಡಕೆಗಳನ್ನು ಹಂಚುತ್ತಾರೆ. ಅವುಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ ದಾರವನ್ನು ಸುತ್ತುತ್ತಾರೆ. ಮಡಕೆಗಳಲ್ಲಿ ಗಜ್ಜರಿ, ಬೋರೇಹಣ್ಣು, ಕಬ್ಬಿನ ತುಂಡು, ನೆಲಗಡಲೆ, ಹತ್ತಿ, ಕಡಲೆಕಾಳು, ಎಳ್ಳುಬೆಲ್ಲ, ಅರಿಶಿನ-ಕುಂಕುಮ ಮುಂತಾದವುಗಳನ್ನು ತುಂಬಿಸುತ್ತಾರೆ. ರಂಗೋಲಿಯನ್ನು ಬಿಡಿಸಿ ಮಣೆ ಹಾಕಿ ಅದರ ಮೇಲೆ ಐದು ಮಡಕೆಗಳನ್ನಿಟ್ಟು ಅವುಗಳ ಪೂಜೆಯನ್ನು ಮಾಡುತ್ತಾರೆ. ಮೂರು ಮಡಕೆಗಳನ್ನು ಸೌಭಾಗ್ಯವತಿಯರಿಗೆ ದಾನ ನೀಡುತ್ತಾರೆ, ಒಂದು ಮಡಕೆಯನ್ನು ತುಳಸಿಗೆ ಮತ್ತು ಇನ್ನೊಂದನ್ನು ತಮಗಾಗಿ ಇಟ್ಟುಕೊಳ್ಳುತ್ತಾರೆ.
ಪವಿತ್ರ ನದಿಗಳಲ್ಲಿ ತೀರ್ಥಸ್ನಾನ, ಗಂಗಾ ಸ್ನಾನ
ಮಕರಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ತೀರ್ಥಸ್ನಾನಕ್ಕೆ ವಿಶೇಷ ಮಹತ್ವವಿದೆ. ಗಂಗಾ, ಯಮುನಾ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿಗಳ ದಡದಲ್ಲಿರುವ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯವು ಲಭಿಸುತ್ತದೆ.
ಈ ದಿನ ಮಹಾದೇವನಿಗೆ ಎಳ್ಳು-ಅಕ್ಕಿಯನ್ನು ಅರ್ಪಣೆ ಮಾಡುವ ಅಥವಾ ಎಳ್ಳು-ಅಕ್ಕಿ ಮಿಶ್ರಿತ ಅರ್ಘ್ಯವನ್ನು ಅರ್ಪಣೆ ಮಾಡುತ್ತಾರೆ. ಪರ್ವದ ಈ ದಿನದಂದು ಎಳ್ಳಿಗೆ ವಿಶೇಷ ಮಹತ್ವವಿದೆ ಎಂದು ಪರಿಗಣಿಸಲಾಗಿದೆ. ಎಳ್ಳಿನ ಉಟಣೆ, ಎಳ್ಳುಮಿಶ್ರಿತ ನೀರಿನಿಂದ ಸ್ನಾನ, ಎಳ್ಳುಮಿಶ್ರಿತ ನೀರನ್ನು ಕುಡಿಯುವುದು, ಎಳ್ಳಿನಿಂದ ಹವನ ಮಾಡುವುದು, ಅಡುಗೆಯಲ್ಲಿ ಎಳ್ಳನ್ನು ಉಪಯೋಗಿಸುವುದು ಹಾಗೂ ಎಳ್ಳನ್ನು ದಾನ ಮಾಡುವುದು ಇವೆಲ್ಲ ಪಾಪನಾಶಕ ಕೃತಿಗಳಾಗಿವೆ.
ಆಧಾರ: ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ !’
ಸಂಗ್ರಹ : ಶ್ರೀ. ವಿನೋದ್ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ, (ಸಂಪರ್ಕ : 9342599299)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post