ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೋರಾಟಕ್ಕೆ ಮೊದಲೇ ಶಿಕ್ಷಕರ ಬಹುತೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಾ ಬಂದಿದೆ. ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸುವಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದ್ದಾರೆ.
ಅವರು ಇಂದು ನಗರದ ಫೇಸ್ ಕಾಲೇಜ್ ಆವರಣದಲ್ಲಿರುವ ಜಯಲಕ್ಷ್ಮೀ ಈಶ್ವರಪ್ಪ ಕನ್ವೆನ್ಷನ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇದರ ಶಿವಮೊಗ್ಗ ತಾಲ್ಲೂಕು ಶಾಖಾ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಹಾಲ್‌ನಲ್ಲಿ ಮೊದಲ ಸಮಾರಂಭವಾಗಿ ಶಿಕ್ಷಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರ ಆಶೀರ್ವಾದ ಮಕ್ಕಳ ಮೇಲೆ ಸದಾ ಇರಲಿ ಎಂದು ಶುಭಾಶಯ ಕೋರಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿ ಅವರ ನೇತೃತ್ವದಲ್ಲಿ ಶಿಕ್ಷಕರ ಅನೇಕ ಬೇಡಿಕೆಗಳು ಶಿಕ್ಷಕರು ಹೇಳುವ ಮುನ್ನವೇ ಕ್ಯಾಬಿನೇಟ್‌ನಲ್ಲಿ ತೀರ್ಮಾನವಾಗಿ ಜಾರಿಗೆ ಬಂದಿದೆ. ಪ್ರಾಥಮಿಕ ಶಾಲಾ ಶಿಕ್ಷಕರು ದೇಶದ ಭವಿಷ್ಯವನ್ನು ಸೃಷ್ಟಿಸುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ಮಾಡುತ್ತಿದ್ದಾರೆ. ಹಿಂದೆ ಶಿಕ್ಷಕರು ತಮ್ಮ ಬೇಡಿಕೆ ಈಡೇರಿಸಲು ಅನೇಕ ಹೋರಾಟ ಮಾಡಬೇಕಾಗುತ್ತಿತ್ತು. ಈಗ ಆ ರೀತಿ ಇಲ್ಲ. ನಗರದ ಡಿಡಿಪಿಐ ಕಚೇರಿ ಆವರಣದಲ್ಲಿ ರೂ.2ಕೋಟಿ ವೆಚ್ಚದಲ್ಲಿ ಗುರುಭವನ ನಿರ್ಮಾಣವಾಗುತ್ತಿದೆ. ಶಿಕ್ಷಕರ ಬೇಡಿಕೆಯಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿ ಕೂಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಹಿಂಭಾಗ ನಿರ್ಮಾಣವಾಗಲಿದೆ. ಇನ್ನು ಅನೇಕ ಬೇಡಿಕೆಗಳಿವೆ ಅದನ್ನು ಕೂಡ ನಾವೆಲ್ಲರೂ ಸೇರಿ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ರಾಜ್ಯದಲ್ಲೇ ಮೊದಲ ಬಾರಿಗೆ ಮೂಲಭೂತ ಸೌಲಭ್ಯ ಕೊರತೆ ಇರುವ 87 ಶಾಲೆಗಳಿಗೆ ಅಗತ್ಯ ಸೌಕರ್ಯ ಒದಗಿಸಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಪೀಠೋಪಕರಣಗಳ ಕೊರತೆ ಇದ್ದರೆ ಡಿಡಿಪಿಐ ಅವರು ಪಟ್ಟಿಮಾಡಿ ಕೊಟ್ಟಲ್ಲಿ ಅದನ್ನು ಕೂಡ ಸರ್ಕಾರದಿಂದ ಪೂರೈಸಲಾಗುವುದು. ತಪ್ಪಿದರೆ ನಮ್ಮ ಸ್ವಂತ ವೆಚ್ಚದಲ್ಲಾದರೂ ಒದಗಿಸಲು ಸಿದ್ಧ ಎಂದರು.
ಸರ್ಕಾರಿ ಶಾಲೆಗೆ ಬಡವರ ಮಕ್ಕಳು ಬರುತ್ತಾರೆ. ಅವರಿಗೆ ಉತ್ತಮ ಶಿಕ್ಷಣ ನೀಡುವುದು ಎಲ್ಲರ ಹೊಣೆಯಾಗಿದೆ. ಸುಸಜ್ಜಿತ ಸರ್ಕಾರಿ ಶಾಲೆಗಳಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷರಾದ ರವಿ ಎಂ. ಅವರು ಅನೇಕ ಎನ್‌ಪಿಎಸ್ ರದ್ಧತಿ ಸೇರಿದಂತೆ ಅನೇಕ ಬೇಡಿಕೆಗಳ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
Also read: ನಿರಂತರ ಸಾಧನೆ ಮೂಲಕ ಎಜುಕೇಟೆಡ್ ಕ್ಲಾಸ್ ನಿರ್ಮಾಣವಾಗಬೇಕು: ಪ್ರೊ. ವೀರಭದ್ರಪ್ಪ
ವೇದಿಕೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಸಂಘದ ರಾಜ್ಯ ಸಹಕಾರ್ಯದರ್ಶಿ ಜಿ. ಸುಮತಿ, ಡಿಡಿಪಿಐ ಪರಮೇಶ್ವರಪ್ಪ, ಆರ್.ಮೋಹನ್ ಕುಮಾರ್, ಬಿಇಒ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ. ಜಯ, ಮಂಜುನಾಥ್ ಬಿ, ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post