ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಳೆಹೊನ್ನೂರು ಸಂಪರ್ಕಿಸುವ ವಿದ್ಯಾನಗರದಲ್ಲಿ ನಿಮಾರ್ಣವಾಗುತ್ತಿರುವ ವೃತ್ತಾಕಾರದ ಫ್ಲೈಓವರ್ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
ಎರಡು ಹೊಸ ದಾಖಲೆಗಳು
ದಾಖಲೆ-1:
ಸಾಮಾನ್ಯವಾಗಿ ಸರ್ಕಾರ ಯಾವುದೇ ಇಂತಹ ಬೃಹತ್ ಯೋಜನೆಗಳಲ್ಲಿ ಭೂಸ್ವಾಧೀನದ ಹಂತವೇ ಮಹತ್ವದ್ದು ಹಾಗೂ ಸವಾಲಿನ ಕೆಲಸ. ಯೋಜನೆಗಾಗಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದೇ ಅತ್ಯಂತ ದೊಡ್ಡ ಕೆಲಸವಾಗಿರುತ್ತದೆ. ಎಷ್ಟೋ ಕಾಮಗಾರಿಗಳು ಈ ಹಂತದಲ್ಲೇ ವರ್ಷಗಟ್ಟಲೆ ಸ್ಥಗಿತಗೊಳ್ಳುತ್ತದೆ.
ಆದರೆ, ವಿದ್ಯಾನಗರದಲ್ಲಿ ನಿರ್ಮಾಣವಾಗುತ್ತಿರುವ ಈ ಫ್ಲೈಓವರ್ ಕಾಮಗಾರಿಯಲ್ಲಿ ಭೂ ಸ್ವಾಧೀನವೇ ಇಲ್ಲದಂತ ಅತ್ಯಂತ ಬುದ್ದಿವಂತಿಕೆಯಿಂದ ಸಂಸದ ಬಿ.ವೈ. ರಾಘವೇಂದ್ರ ಕೆಲಸ ಸಾಧಿಸಿದ್ದಾರೆ.
ಫ್ಲೈಓವರನ್ನು ಬಹುತೇಕ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿಯೇ ನಿರ್ಮಾಣವಾಗಲು ಯಾವುದೇ ಅಡೆತಡೆ ಬಾರದಂತೆ ಆಡಳಿತಾತ್ಮಕವಾಗಿ ಅನುಮೋದನೆಗಳನ್ನು ಅತ್ಯಂತ ಜಾಣ್ಮೆಯಿಂದ ಪಡೆಯಲಾಗಿದೆ. ಈ ಕಾರಣದಿಂದಾಗಿಯೇ ಇಲ್ಲಿ ಭೂಸ್ವಾಧೀನ ಪ್ರಕ್ರಿಯೆ ಎಂಬುದೇ ಪ್ರಸ್ತಾಪವಾಗಿಲ್ಲ.
ಮಹತ್ವದ ವಿಚಾರವೆಂದರೆ ಇಡಿಯ ದೇಶದಲ್ಲಿ ಭೂಸ್ವಾಧೀನ ಪ್ರಕ್ರಿಯೆಯೇ ಇಲ್ಲದೇ ರೈಲ್ವೆ ಇಲಾಖೆಯ ಜಾಗದಲ್ಲಿ ವೃತ್ತಾಕಾರದಲ್ಲಿ ನಿಮಾರ್ಣವಾದ ಮೊಟ್ಟ ಮೊದಲ ಫ್ಲೈಓವರ್ ಹೊಂದಿರುವ ನಗರ ಎಂಬ ಖ್ಯಾತಿಗೆ ನಮ್ಮ ಶಿವಮೊಗ್ಗ ಪಾತ್ರವಾಗಲಿದೆ.
ದಾಖಲೆ-2:
ರಾಜ್ಯದಲ್ಲಿ ಬಹಳಷ್ಟು ರೈಲ್ವೆ ಓವರ್ ಬ್ರಿಡ್ಜ್’ಗಳಿವೆ. ಆದರೆ ಅವೆಲ್ಲವೂ ಬಹುತೇಕ ನೇರ ಮಾರ್ಗದಲ್ಲಿಯೇ ನಿರ್ಮಾಣವಾಗಿದೆ. ಆದರೆ, ಇಡಿಯ ರಾಜ್ಯದಲ್ಲಿ ವೃತ್ತಾಕಾರದಲ್ಲಿ ನಿರ್ಮಾಣವಾಗುತ್ತಿರುವ ಮೊಟ್ಟ ಮೊದಲ ಫ್ಲೈಓವರ್ ಇದಾಗಿದೆ.
ತುಂಗಾ ನದಿಯ ಪಕ್ಕದಲ್ಲೇ ರೈಲ್ವೆ ಲೆವೆಲ್ ಕ್ರಾಸಿಂಗ್ ಇದ್ದು, ಇದರ ಬದಿಯಲ್ಲೇ ವಿದ್ಯಾನಗರ ರೈಲ್ವೆ ನಿಲ್ದಾಣವೂ ಸಹ ಇದೆ. ಹೀಗಾಗಿ, ಇಲ್ಲಿ ಫ್ಲೈಓವರ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡುವುದು ಅತ್ಯಂತ ಕಷ್ಟವಾಗಿದ್ದು, ಈ ಕಾರಣಕ್ಕಾಗಿಯೇ ಇದು ವರ್ಷಗಳ ಕಾಲ ಸಮಸ್ಯೆಯಾಗಿ ಕಾಡಿತ್ತು.
ಆದರೆ, ಇವೆಲ್ಲವನ್ನೂ ಮೀರಿ ಅತ್ಯಂತ ಚಾಣಾಕ್ಷತನದಿಂದ ಇಂತಹ ಒಂದು ಮೇಲ್ಸೇತುವೆಯನ್ನು ನಿರ್ಮಿಸುವ ಮೂಲಕ ಸಂಸದ ರಾಘವೇಂದ್ರ ಅವರು ಮತ್ತೊಂದು ದಾಖಲೆ ಬರೆದಿದ್ದಾರೆ.
ಕಾಮಗಾರಿ ವೆಚ್ಚ ಎಷ್ಟು?
ಹಲವು ದಾಖಲೆಗಳನ್ನು ನಿರ್ಮಿಸುತ್ತಿರುವ ಈ ವಿಭಿನ್ನ ಸೇತುವೆ ನಿರ್ಮಾಣಕ್ಕೆ ಒಟ್ಟು 43.9 ಕೋಟಿ ರೂ. ಹಣವನ್ನು ವೆಚ್ಚ ಮಾಡಲಾಗುತ್ತಿದೆ.
ನಿಗದಿಗಿಂತಲೂ ಆರು ತಿಂಗಳು ಮೊದಲೇ ಮುಕ್ತಾಯ
ಈ ಕಾಮಗಾರಿಯನ್ನು 2021ರ ನವೆಂಬರ್ ತಿಂಗಳಿನಲ್ಲಿ ಆರಂಭಿಸಲಾಗಿದ್ದು, 2023ರ ನವೆಂಬರ್’ವರೆಗೂ ಮುಕ್ತಾಯಕ್ಕೆ ಸಮಯ ನಿಗದಿಪಡಿಸಲಾಗಿದೆ. ಆದರೆ, ಈ ಕಾಮಗಾರಿ ಈಗಾಗಲೇ ಮುಕ್ತಾಯದ ಹಂತಕ್ಕೆ ತಲುಪಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ರೈಲ್ವೆ ಇಲಾಖೆ ಅನುಮೋದನೆಗೆ ಸಂಬಂಧಿಸಿದ ಭಾಗದ ಕಾಮಗಾರಿ ಮಾತ್ರ ಬಾಕಿದೆ.
ಸಂಸದರ ಮಾಹಿತಿಯಂತೆ ಒಂದು ತಿಂಗಳಲ್ಲಿ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡು ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಸಾರ್ವಜನಿಕರ ಬಳಕೆಗೆ ಈ ಫ್ಲೈಓವರ್ ಮುಕ್ತವಾಗಲಿದೆ.
ಡ್ರೋಣ್ ಫೋಟೋಗಳು ವೈರಲ್
ಕಾಮಗಾರಿ ಮುಕ್ತಾಯದ ಹಂತದಲ್ಲಿರುವ ಫ್ಲೈಓವರ್’ನ ಡ್ರೋಣ್ ಫೋಟೋಗಳನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಸಖತ್ ವೈರಲ್ ಆಗಿದೆ.
ದಶಕಗಳಿಂದ ಇದ್ದ ಬೇಡಿಕೆ ಹಾಗೂ ಸಮಸ್ಯೆಯನ್ನು ಅತ್ಯಂತ ಜಾಣ್ಮೆಯಿಂದ ಪರಿಹರಿಸಿ ರಾಜ್ಯ ಹಾಗೂ ದೇಶದಲ್ಲಿಯೇ ದಾಖಲೆಗಳನ್ನು ಬರೆಯುವಂತಹ ಈ ಫ್ಲೈ ಓವರ್ ನಿರ್ಮಾಣಕ್ಕೆ ಕಾರಣಕರ್ತರಾದ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post