ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೂತನ ವಿಮಾನ ನಿಲ್ದಾಣ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿಮಾನ ನಿಲ್ದಾಣ ಉದ್ಘಾಟನೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಕೆಲವು ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸುವ ಉದ್ದೇಶದಿಂದ ಪ್ರಧಾನಿಯವರು ಭೇಟಿ ನೀಡಲಿದ್ದಾರೆ ಎಂದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಹಿರಿಯರಾದ ಕೆ.ಎಸ್. ಈಶ್ವರಪ್ಪ, ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಎಲ್ಲ ಜನಪ್ರತಿನಿಧಿಗಳ ಸಹಕಾರದಲ್ಲಿ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಹೊಂದುತ್ತಿದೆÀ ಎಂಬುದಕ್ಕೆ ಈ ಬೆಳವಣಿಗೆಗಳೇ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಧಾನಿಯವರ ಭೇಟಿ ಕುರಿತಾಗಿ ಈಗಾಗಲೇ ಪಿಎಂಒ ಜೊತೆಯಲ್ಲಿ ಮಾತುಕತೆಗಳು ನಡೆದಿವೆ. ಈ ಕುರಿತಂತೆ ಜಿಲ್ಲಾಡಳಿತ ಈಗಾಗಲೇ ಸಭೆ ನಡೆಸಿ ಪ್ರಧಾನಿಯವರಿಂದ ಉದ್ಘಾಟನೆ ಮಾಡಿಸಬಹುದಾದ ಕಾಮಗಾರಿ, ಶಂಕುಸ್ಥಾಪನೆಗಳ ಪಟ್ಟಿಯನ್ನು ಈಗಾಗಲೇ ಸಿದ್ದಪಡಿಸಿದೆ. ಇದನ್ನು ಮುಖ್ಯಕಾರ್ಯದರ್ಶಿಗಳ ಮೂಲಕ ಪ್ರಧಾನಿ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಒಪ್ಪಿಗೆ ಬರುತ್ತದೆ ಎಂಬ ಭರವಸೆಯಿದೆ ಎಂದರು.
ಒಟ್ಟು 3337 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದ್ದು, 1789 ಕೋಟಿ ರೂ. ವೆಚ್ಚದ ಕಾಮಗಾರಿ ಲೋಕಾರ್ಪಣೆ ನಡೆಯಲಿದೆ.
ವಿಮಾನ ನಿಲ್ದಾಣದ ಆವರಣದಲ್ಲೇ ಎಲ್ಲಾ ಕಾರ್ಯಕ್ರಮಗಳು ನಡೆಯಲಿದ್ದು, ಸುಮಾರು 2.5 ಲಕ್ಷ ಮಂದಿ ಸಾರ್ವಜನಿಕರು ಸೇರುವ ನಿರೀಕ್ಷೆಯಿದ್ದು, ಸಿದ್ದತೆಗಳ ಕುರಿತಾಗಿ ಇನ್ನೂ ಚರ್ಚೆಯ ಹಂತದಲ್ಲಿದೆ ಎಂದಿದ್ದಾರೆ.
ಯಾವೆಲ್ಲಾ ಕಾಮಗಾರಿ ಉದ್ಘಾಟನೆ/ಶಂಕುಸ್ಥಾಪನೆ?
- ನೂತನ ವಿಮಾನ ನಿಲ್ದಾಣ ಲೋಕಾರ್ಪಣೆ
- ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಶಂಕುಸ್ಥಾಪನೆ
- ವಿವಿಧ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಚಾಲನೆ
- ವಿದ್ಯಾನಗರ ವೃತ್ತಾಕಾರದ ಮೇಲ್ಸೇತುವೆ ಉದ್ಘಾಟನೆ
- ಜಲಜೀವನ ಮಿಷನ್ ಅಡಿ ನಲ್ಲಿ ನೀರಿನ ಸಂಪರ್ಕ ಲೋಕಾರ್ಪಣೆ/ಶಂಕುಸ್ಥಾಪನೆ
- ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ/ಶಂಕುಸ್ಥಾಪನೆ
- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೆಯ ಕಂತನ್ನು ಶಿವಮೊಗ್ಗದಿಂದಲೇ ರಾಷ್ಟ್ರಕ್ಕೆ ಸಮರ್ಪಣೆ
- ಮ್ಯಾಮ್ ಕೋಸ್ ಆಡಳಿತ ಕಚೇರಿ ಉದ್ಘಾಟನೆ
- ಕೆಎಂಎಫ್ ಡೈರಿ ಪ್ಯಾಕಿಂಗ್ ಘಟಕದ ಉದ್ಘಾಟನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post