ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೆಹರೂ ಕ್ರೀಡಾಂಗಣದ ಅವ್ಯವಸ್ಥೆಗೆ ಸಂಬಂಧಿಸಿದಂತೆ ಕಳೆದ 2 ದಿನಗಳಿಂದ ಸಹ್ಯಾದ್ರಿ ಸ್ನೇಹಸಂಘ ಮತ್ತು ನೆಹರೂ ಸ್ಟೇಡಿಯಂ ಗೆಳೆಯರ ಬಳಗ ವತಿಯಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ಎಚ್ಚೆತ್ತ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕ್ರೀಡಾಪಟುಗಳು ಪ್ರತಿನಿತ್ಯ ಕ್ರೀಡಾಂಗಣದಲ್ಲಿ ವಾಕಿಂಗ್ ಮಾಡುವ ಹಿರಿಯರು ಸೇರಿದಂತೆ ಎಲ್ಲರೂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು ಹಾಗೂ ಗುತ್ತಿಗೆದಾರರನ್ನು ಕರೆಸಿ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಮಾಡಿದ ತಪ್ಪುಗಳನ್ನು ತಿಳಿಸಿದ್ದಲ್ಲದೆ ಸ್ಟೇಡಿಯಂ ಆವರಣದಲ್ಲಿ ಕಳೆದ ಕೆಲವು ತಿಂಗಳಿಂದ ಗಬ್ಬೆಬ್ಬಿಸಿರುವ ಬಗ್ಗೆ ಮಾಹಿತಿ ನೀಡಿದರು.
ಸ್ಟೇಡಿಯಂ ಆವರಣದಲ್ಲೇ ಹೊರರಾಜ್ಯಗಳ ಕಾರ್ಮಿಕರಿಗೆ ನಿಯಮಬಾಹಿರವಾಗಿ ವಸತಿ ಕಲ್ಪಿಸಿದ್ದು, ಗರಡಿ ಮನೆಯನ್ನು ಕೂಡ ಕಾರ್ಮಿಕರು ವಸತಿಯನ್ನಾಗಿ ಪರಿವರ್ತಿಸಿದ್ದರು. ಕೂಡಲೇ ಅವರನ್ನು ತೆರವುಗೊಳಿಸುವಂತೆ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಿದ್ದು, ಅನೇಕ ದೂರುಗಳ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ. ಕೂಡಲೇ ನೆಹರೂ ಕ್ರೀಡಾಂಗಣವನ್ನು ಸ್ವಚ್ಚಗೊಳಿಸಿ ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕ್ರೀಡಾಪಟುಗಳಿಗೆ ಮತ್ತು ವಾಕಿಂಗ್ ಮಾಡುವ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ಪ್ರಮುಖರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಡಾ. ಸತೀಶ್ ಕುಮಾರ್ ಶೆಟ್ಟಿ, ಡಾ. ಧನಂಜಯ ಸರ್ಜಿ ಹಾಗೂ ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ಸ್ಮಾರ್ಟ್‌ಸಿಟಿ ಅಧಿಕಾರಿ ಕೃಷ್ಣಪ್ಪ, ಯುವ ಜನ ಸೇವಾ ಇಲಾಖೆಯ ಅಧಿಕಾರಿ ಮಂಜುನಾಥ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















