ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಆಸಕ್ತಿ ಹೊಂದಿದ ತಾಂತ್ರಿಕ ಕಾಲೇಜುಗಳ ಸಹಕಾರದೊಂದಿಗೆ ಜಿಲ್ಲೆಗೊಂದರಂತೆ ರಾಜ್ಯದ ಪ್ರತಿಜಿಲ್ಲೆಯಲ್ಲೂ ಐಡಿಯಲ್ ಲ್ಯಾಬ್ ಆರಂಭಿಸಲು ಉದ್ದೇಶಿಸಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಹೇಳಿದರು.
ನಗರದ ಜೆ.ಎನ್.ಎನ್.ಸಿ. ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂತ್ರಿಕ ಶಿಕ್ಷಣ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಒಂದೊಂದು ಬಗೆಯ ಪ್ರತಿಭೆ ಅಡಗಿರುತ್ತದೆ. ಆದರೆ ಆ ಬಗ್ಗೆ ಅವರು ಅಗತ್ಯ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಲಿ, ಅದನ್ನು ಪ್ರದರ್ಶನ ಮಾಡುವುದಕ್ಕಾಗಲಿ ಸೂಕ್ತ ವೇದಿಕೆ ಇಲ್ಲ. ಅಂತಹ ಪ್ರಯೋಗಾಲಯಗಳ ಕೊರತೆ ಈಗ ಎಲ್ಲ ಕಡೆಗೂ ಇದೆ ಎಂದರು.
ಬೆಂಗಳೂರಿನಲ್ಲಿ ಪ್ರಯೋಗಾಲಯ ಇದ್ದರೂ ಅಲ್ಲಿಗೆ ಹೋಗಿ ಬರುವುದಕ್ಕೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಷ್ಟ. ಹಾಗಾಗಿ ಭಾರತೀಯ ತಾಂತ್ರಿಕ ಸಂಶೋಧನಾ ಕೇಂದ್ರದ ನೆರವಿನೊಂದಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಐಡಿಯಲ್ ಲ್ಯಾಬ್ ಆರಂಭಿಸಲು ಉದ್ದೇಶಿಸಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯ ಆಸಕ್ತ ಆಯ್ದ ಒಂದು ತಾಂತ್ರಿಕ ಕಾಲೇಜಿನಲ್ಲಿ ಐಡಿಯಲ್ ಲ್ಯಾಬ್ ಶುರು ಮಾಡುವ ಉದ್ದೇಶ ಹೊಂದಲಾಗಿದೆ. ಐಡಿಯಲ್ ಲ್ಯಾಬ್ ಸ್ಥಾಪನೆಗೆ ಬೇಕಾಗುವ ವೆಚ್ಚದಲ್ಲಿ ಅರ್ಧದಷ್ಟನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವೇ ಭರಿಸಲಿದೆ. ಉಳಿದಿದ್ದನ್ನು ಆಯಾ ಕಾಲೇಜು ವೆಚ್ಚ ಮಾಡಬೇಕಾಗುತ್ತದೆ. ಇದರ ಮುಖ್ಯ ಉದ್ದೇಶ ತಾಂತ್ರಿಕ ಶಿಕ್ಷಣ ಪಡೆಯುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಂಶೋಧನಾ ಪ್ರತಿಭೆಗೆ ಪ್ರೋತ್ಸಾಹಿಸುವುದೇ ಆಗಿದೆ. ಇದರಿಂದ ಅವರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಸದ್ಯಕ್ಕೆ ಐಡಿಯಲ್ ಲ್ಯಾಬ್ ಸ್ಥಾಪನೆಯ ಯೋಜನೆಯ ಅನು಼ಷ್ಠಾನ ಈಗಷ್ಟೇ ಆರಂಭಗೊಂಡಿದೆ. ಉಳಿದಂತೆ ರಾಜ್ಯದಲ್ಲಿನ ಪ್ರತಿ ಜಿಲ್ಲೆಯಲ್ಲೂ ಆಸಕ್ತಿ ಹೊಂದಿದ ಕಾಲೇಜುಗಳ ಆಯ್ಕೆ ನಡೆದ ನಂತರ ಅದು ಕಾರ್ಯಗತಕ್ಕೆ ಬರಲಿದೆ ಎಂದು ಹೇಳಿದರು.
Also read: ಉಜ್ಜಯಿನಿ ಮಹಾಕಾಳೇಶ್ವರ ದೇಗುಲದಲ್ಲಿ ಅನುಷ್ಕಾ-ವಿರಾಟ್ ಕೋಹ್ಲಿ ವಿಶೇಷ ಪೂಜೆ
ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಅನುಕೂಲಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯವು ತನ್ನೆಲ್ಲ ಕಾಲೇಜುಗಳಲ್ಲೂ ಗ್ಲೋಬಲ್ ಕ್ಯಾಂಪಸ್ ಗಳನ್ನು ತೆರೆದಿದೆ. ವಿದೇಶಗಳಲ್ಲಿ ತಾಂತ್ರಿಕ ಕಾಲೇಜುಗಳ ಮಾಹಿತಿ, ಅಲ್ಲಿನ ಪಠ್ಯಗಳ ಜತೆಗೆ ವಿವಿಧ ಮಾಹಿತಿ ಪಡೆದುಕೊಳ್ಳುವುದಕ್ಕೆ ಇದು ಅನುಕೂಲವಾಗಲಿ ಎನ್ನುವುದು ಇದರ ಉದ್ದೇಶವಾಗಿದೆ. ಹಾಗೆಯೇ ಬೇರೆ ದೇಶಗಳಲ್ಲಿ ತಾಂತ್ರಿಕ ಶಿಕ್ಷಣ ಬಯಸಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಆವರಣದಲ್ಲಿಯೇ ಶಿಕ್ಷಣ ಸಿಗುವಂತಹ ವ್ಯವಸ್ಥೆಗೂ ವಿವಿಯು ವಿದೇಶದ ಆರು ವಿಶ್ವ ವಿದ್ಯಾಲಯಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದರು.
ಇದೇ ವೇಳೆ ಹೊಸ ಶಿಕ್ಷಣನೀತಿಯನ್ನು ಪ್ರಸ್ತಕ್ತ ವರ್ಷದಿಂದಲೇ ತಮ್ಮ ವಿಶ್ವ ವಿದ್ಯಾಲಯದಲ್ಲಿ ಜಾರಿಗೆ ತಂದಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೂ ವ್ಯಕ್ತವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಸಹ ಕಾರ್ಯದರ್ಶಿ ಡಾ. ಪಿ ನಾರಾಯಣ್, ಖಜಾಂಚಿ ಡಿ.ಸಿ. ರಮೇಶ್, ನಿರ್ದೇಶಕ ಅಶ್ವತ್ಥನಾರಾಯಣ ಶೆಟ್ಟಿ, ಪ್ರಾಂಶುಪಾಲ ಡಾ.ಕೆ ನಾಗೇಂದ್ರ ಪ್ರಸಾದ್, ಡೀನ್ ಮಂಜುನಾಥ್ ಮೊದಲಾದವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















