ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ನಡೆಯುವ ಕಾರ್ಯಾಗಾರಗಳಲ್ಲಿ ಅಧ್ಯಾಪಕರು ಭಾಗವಹಿಸದಿರುವುದು ಅತ್ಯಂತ ದುರದೃಷ್ಟಕರ ಎಂದು ಭದ್ರಾವತಿಯ ಸರ್‌ಎಂವಿವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎನ್. ಶಿವಮೂರ್ತಿ ನಾಯ್ಕ್ ವಿಷಾದಿಸಿದರು.
ಅವರು ಇಂದು ಕುವೆಂಪು ವಿವಿಯ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘ ಹಾಗೂ ಸಹ್ಯಾದ್ರಿ ಕಲಾಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯ ಎರಡು ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸ್ವಾಗತಿಸುವುದು ಅನಿವಾರ್ಯವಾಗಿದೆ. ಆದರೆ ಈ ನೀತಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಈ ಗೊಂದಲ ನಿವಾರಿಸಲು ಕಾರ್ಯಾಗಾರಗಳು ಅತ್ಯಂತ ಅವಶ್ಯಕ. ಆದರೆ ಪ್ರಾಧ್ಯಾಪಕರುಗಳೀಗಾಗಿಯೇ ಆಯೋಜಿಸಿದ್ದ ಈ ಕಾರ್ಯಾಗಾರದಲ್ಲಿ ಪ್ರಾಧ್ಯಾಪಕರು ಭಾಗವಹಿಸದಿರುವುದು ವಿಷಾದನೀಯ. ಬಹುಶಃ ವಿದ್ಯಾರ್ಥಿಗಳೇ ಹೆಚ್ಚಾಗಿ ಭಾಗವಹಿಸಿದ್ದರು ಎಂದರು.
ವಿದ್ಯಾರ್ಥಿಗಳೇ ನಮ್ಮ ಆಸ್ತಿ. ಅವರನ್ನು ಸಮಾಜಮುಖಿಯಾಗಿ ಬೆಳೆಯಲು ಶಿಕ್ಷಕರು ಪ್ರಯತ್ನಿಸಬೇಕು. ಹೊಸ ಹೊಸ ಆಲೋಚನೆಗಳು ಶಿಕ್ಷಣದಲ್ಲಿ ಸೇರಿಕೊಳ್ಳುವುದು ಅನಿವಾರ್ಯ. ಇಂತಹ ಸಂದರ್ಭದಲ್ಲಿ ಅಧ್ಯಾಪಕರು ಹೊಸ ಆಲೋಚನೆಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಅವರು ತಮ್ಮ ಬೋಧನಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಾಗಾರಗಳು ಅತ್ಯಂತ ಅವಶ್ಯಕ. ಶೈಕ್ಷಣಿಕವಾಗಿ ಬೆಳೆಯಲು ಇದು ಪೂರಕ ವಾತಾವರಣ ಕಲ್ಪಿಸುತ್ತದೆ ಎಂದರು.
ತುಂಗಾ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕುಮಾರಸ್ವಾಮಿ ಮಾತನಾಡಿ, ಹಲವು ವಿಷಯಗಳಲ್ಲಿ ಪ್ರಾಧ್ಯಾಪಕರು ಮೌನವಹಿಸುತ್ತಾರೆ. ಇದು ಸರಿಯಲ್ಲ. ಅದರಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮಾತನಾಡಲು, ಚರ್ಚೆ ಮಾಡಲು ಕೂಡ ಅದೇಕೊ ನಮ್ಮ ಪ್ರಾಧ್ಯಾಪಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾದರೆ ಹೊಸ ಶೈಕ್ಷಣಿಕ ಪದ್ಧತಿಯಲ್ಲಿ ಹಲವು ತಪ್ಪುಗಳು ಆಗಬಹುದು. ಚರ್ಚೆ ಮಾಡುವುದರಿಂದ ಇಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಇತಿಹಾಸ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ.ಕೆ.ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಅದರಲ್ಲಿರುವ ಅನೇಕ ಗೊಂದಲಗಳು ಬಗೆಹರಿಯಬೇಕು. ಈ ನಿಟ್ಟಿನಲ್ಲಿ ಕುವೆಂಪು ವಿವಿ ವ್ಯಾಪ್ತಿಯಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಸ್ವಾಗತದ ವಿಷಯ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಇಂತಹ ಕಾರ್ಯಾಗಾರಗಳು ಅಗತ್ಯವಾಗುತ್ತವೆ. ಇದನ್ನು ಆಯೋಜಿಸಿದ ಎಲ್ಲರಿಗೂ ಅಭಿನಂದನೆ ಎಂದರು.
ಇದಕ್ಕೂ ಮುನ್ನ ನಡೆದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಪ್ರಾಧ್ಯಾಪಕಿ ಶ್ರೀದೇವಿ, ಶಿಕ್ಷಣದಿಂದ ಜ್ಞಾನ ಮಾತ್ರ ಸಂಪಾದನೆ ಮಾಡುವುದಲ್ಲ. ಉದ್ಯೋಗ ಸೇರಿದಂತೆ ಬದುಕಿನ ಎಲ್ಲಾ ಸ್ತರಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿಯೂ ಇದೇ ಆಗಿದೆ. ಹೊಸದು ಬಂದಾಗ ಅದನ್ನು ಸ್ವೀಕರಿಸುವುದು ಕಷ್ಟಸಾಧ್ಯ. ಆದರೆ ಅದಕ್ಕೆ ಹೆದರದೆ ಎದುರಿಸಿದರೆ ಹೊಂದಿಕೊಳ್ಳಬಹುದು. ಬದಲಾವಣೆ ಜಗದ ನಿಯಮ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಾವು ಸ್ವೀಕರಿಸುವುದು ಅನಿವಾರ್ಯ ಮತ್ತು ಅಗತ್ಯ ಎಂದರು.
ಪ್ರತಿಕ್ರಿಯೆ ನೀಡಿದ ಸಹಾಯಕ ಪ್ರಾಧ್ಯಾಪಕ ಪ್ರಕಾಶ್ ಮರ್‍ಗನಳ್ಳಿ ಮಾತನಾಡಿ, ಎನ್‌ಇಪಿಗೆ ಸಂಬಂಧಿಸಿದಂತೆ ಪ್ರಾಧ್ಯಾಪಕರುಗಳ ಅಭಿಪ್ರಾಯ ಮತ್ತು ಹೊಂದಾಣಿಕೆ ತುಂಬಾ ಕಡಿಮೆಯಾಗುತ್ತಿದೆ. ಅದಕ್ಕೆ ತಕ್ಕಂತೆ ಪಠ್ಯ ಪುಸ್ತಕ ಸಮಿತಿ ರಚನೆಗೂ ಕೂಡ ಹಿರಿಯ ಪ್ರಾಧ್ಯಾಪಕರು ಸ್ಪಂದಿಸುತ್ತಿಲ್ಲ. ಅನೇಕ ಹೊಸ ವಿಷಯಗಳು, ಅದರಲ್ಲೂ ಅಧ್ಯಾಪಕರಿಗೇ ಗೊತ್ತಿಲ್ಲದ ವಿಷಯಗಳು ಈ ನೀತಿಯಲ್ಲಿ ಸೇರಿಕೊಂಡಿವೆ. ಅವುಗಳ ಗೊಂದಲಗಳು ಪರಿಹಾರವಾಗಬೇಕು. ಅಧ್ಯಾಪಕರ ಸಂಘಗಳ ಸಹಕಾರ ಇಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಎಲ್ಲ ವಿಷಯಗಳ ಅಧ್ಯಾಪಕರ ಸಂಘಗಳು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಇಂಗ್ಲಿಷ್ ವಿಭಾಗದ ಸಹಸಂಚಾಲಕ ಪ್ರೊ..ಟಿ. ಅವಿನಾಶ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















