ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಗೆ ವಿಜ್ಞಾನಗಳ ವಿಶ್ವ ವಿದ್ಯಾಲಯವು ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಮಾ.17ರಿಂದ 20ರವರೆಗೆ ನಾಲ್ಕು ದಿನಗಳ ಕೃಷಿ ಮತ್ತು ತೋಟಗಾರಿಕಾ ಮೇಳ-2023ನ್ನು ಕೃಷಿ ಮಹಾವಿದ್ಯಾಲಯದ ನವುಲೆ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ವಿವಿಯ ಕುಲಪತಿ ಡಾ.ಆರ್.ಸಿ. ಜಗದೀಶ್ ತಿಳಿಸಿದರು.
ಅವರು ಇಂದು ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಏಳು ಜಿಲ್ಲೆಗಳು ಬರಲಿದ್ದು, ಈಗ ನಡೆಯುತ್ತಿರುವ ಮೇಳ 8ನೇ ಮೇಳವಾಗಿದೆ ಎಂದರು.

ಮೇಳದಲ್ಲಿ ವಿವಿಧ ನವೀನ ತಾಂತ್ರಿಕತೆಗಳು ಮತ್ತು ವಿವಿಧ ಬೆಳೆಗಳ ಹೊಸ ಹೊಸ ತಳಿಗಳ ಬಿಡುಗಡೆ, ಅಲ್ಲದೆ ರೈತ ಸಮೂಹಕ್ಕೆ ಮಾಹಿತಿಗಾಗಿ ವಿವಿಧ ಬೆಳೆ ಮತ್ತು ತಾಂತ್ರಿಕತೆಗಳನ್ನು ಹೊತ್ತ ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡಲಾಗುತ್ತಿದೆ. ಕೃಷಿ ಪರಿಕರ ವಿತರಕರು, ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದ ಏರ್ಪಡಿಸಲಾಗಿದೆ ಎಂದರು.

Also read: ಕಾರಿನ ಟೈರ್ ಸ್ಪೋಟಗೊಂಡು ಅಪಘಾತ: ಚಾಲಕ ಸ್ಥಳದಲ್ಲೇ ಸಾವು
2023 ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿರುವುದರಿಂದ ಸಿರಿಧಾನ್ಯಗಳ ಕುರಿತು ನೀತಿಗಳು ಮತ್ತು ಕಾರ್ಯಗಳು, ಪೌಷ್ಠಿಕ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮಲ್ಲಿ ರೋಗನಿರೋಧಕ ಸಾಮರ್ಥ್ಯ ಹೆಚ್ಚಳದ ಬಗ್ಗೆ, ಸಿರಿಧಾನ್ಯಗಳ ಪ್ರಚಾರ ಮತ್ತು ಬಳಕೆಯಲ್ಲಿ ಭಾರತದ ಸಾಧನೆ, ಸಿರಿಧಾನ್ಯಗಳ ಪೌಷ್ಠಿಕಾಂಶ, ಪರಿಸರ ಮತ್ತು ಆರ್ಥಿಕ ಪ್ರಯೋಜನಗಳ ಬಗ್ಗೆ ಮೇಳದಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ ಎಂದರು.

ಕೇಂದ್ರ ಕೃಷಿ ಮತ್ತು ರೈತಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಸ್ತುಪ್ರದರ್ಶನವನ್ನು, ಶಾಸಕ ಕೆ.ಎಸ್. ಈಶ್ವರಪ್ಪ ತಂತ್ರಜ್ಞಾನ ಉದ್ಯಾನವನ ಉದ್ಘಾಟಿಸುವರು. ಸಂಸದ ಬಿ.ವೈ. ರಾಘವೇಂದ್ರ ತಾಂತ್ರಿಕತೆ ಮತ್ತು ತಳಿಗಳ ಬಿಡುಗಡೆ ಮಾಡುವರು. ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಶಾಸಕ ಕೆ.ಬಿ. ಅಶೋಕ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದ ಅವರು, ಅಂದು ಮಧ್ಯಾಹ್ನ 2-30ರಿಂದ ಅಡಿಕೆ ಕೃಷಿಯ ಸವಾಲುಗಳು ಕುರಿತು ತಾಂತ್ರಿಕ ಸಮಾವೇಶ ನಡೆಯಲಿದೆ. ಸಂಜೆ 6:30ರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾ.18ರ ಬೆಳಿಗ್ಗೆ 11 ಗಂಟೆಗೆ ನಡೆಯುವ ತಾಂತ್ರಿಕ ಸಮಾವೇಶ ಹಾಗೂ ತಾಂತ್ರಿಕ ಕೈಪಿಡಿಗಳ ಬಿಡುಗಡೆ ಸಮಾರಂಭದ ಸಾನಿಧ್ಯವನ್ನು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣ ಗೌಡ ಉದ್ಘಾಟಿಸಲಿದ್ದಾರೆ. ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಯಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು, ಏಳು ಜಿಲ್ಲೆಗಳ ಸಂಸದರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 2:30ರಿಂದ ಸೆಕೆಂಡರಿ ಕೃಷಿ ಮತ್ತು ಮೌಲ್ಯವರ್ಧನೆ ಕುರಿತು ತಾಂತ್ರಿಕ ಸಮಾವೇಶ ನಡೆಯಲಿದೆ ಎಂದರು.
ಮಾ.19ರ ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾರಂಭದ ಸಾನಿಧ್ಯವನ್ನು ನಂದವೇರಿ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ವಹಿಸಲಿದ್ದು, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಸಚಿವ ಎಸ್.ಅಂಗಾರ ಕೈಪಿಡಿಗಳ ಬಿಡುಗಡೆ ಮಾಡುವರು. ಸಚಿವ ಅರಬೈಲ್ ಶಿರಾಮ್ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮಧ್ಯಾಹ್ನ 2:30ರಿಂದ ಸಿರಿಧಾನ್ಯಗಳ ಮಹತ್ವ ಮತ್ತು ಸಮಗ್ರ ಕೃಷಿ ಪದ್ಧತಿಗಳು ಕುರಿತು ತಾಂತ್ರಿಕ ಸಮಾವೇಶ ನಡೆಯಲಿದೆ ಎಂದರು.

ಮೇಳದಲ್ಲಿ ಮಾ.19ರ ಬೆಳಿಗ್ಗೆ 9:30ರಿಂದ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನವನ್ನು ಏರ್ಪಡಿಸಿದ್ದು, ಅತ್ಯುತ್ತಮ ಶ್ವಾನಗಳಿಗೆ ನಗದು ಬಹುಮಾನ ನೀಡಲಾಗುವುದು. ಮಾ17ರ ಒಳಗೆ 100ರೂ. ಶುಲ್ಕ ನೀಡಿ ಹೆಸರು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9844014063, 9448318878ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವಿವಿಯ ಸಂಶೋಧನಾ ನಿರ್ದೇಶಕ ಡಾ. ಮೃತ್ಯುಂಜಯ ಸಿ. ವಾಲಿ, ವಿಸ್ತರಣಾ ನಿರ್ದೇಶಕ ಡಾ. ಬಿ. ಹೇಮ್ಲಾ ನಾಯಕ್, ಡೀನ್ ಡಾ. ಬಿ.ಎಂ. ದುಶ್ಯಂತ್‌ಕುಮಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post