ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾರ್ವಜನಿಕರ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡದಿದ್ದರೆ ನಾವು ದಿಢೀರ್ ಭೇಟಿ ನೀಡಿದಾಗ ಅನವಶ್ಯಕ ವಿಳಂಬ ಮತ್ತು ಲೋಪಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಕೇಸ್ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಚಿತ್ರದುರ್ಗ, ಶಿವಮೊಗ್ಗ ಲೋಕಾಯುಕ್ತ ಎಸ್‌ಪಿ ವಾಸುದೇವ್ ಮಹಾನಗರ ಪಾಲಿಕೆ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅವರು ಇಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಪಾಲಿಕೆಯ ಎಲ್ಲಾ ವಿಭಾಗದ ಸಿಬ್ಬಂದಿಗಳ ಸಭೆ ನಡೆಸಿ ಮಾತನಾಡಿದರು.

ಕೆಲವು ತಿಂಗಳ ಹಿಂದೆ ಲೋಕಾಯುಕ್ತರು ಭೇಟಿ ನೀಡಿದಾಗ ಬೆಳಿಗ್ಗೆ ನಗರ ಸಂಚಾರ ಮಾಡಿ ಲೋಪದೋಷಗಳ ಪಟ್ಟಿಮಾಡಿ ಕೂಡಲೇ ಸರಿಪಡಿಸುವಂತೆ ಸಲಹೆ ನೀಡಿದ್ದರು. ಅದರ ಬಗ್ಗೆ ಕೂಡ ಪರಿಶೀಲನೆ ನಡೆಸಿದ್ದೇನೆ. ತಾಂತ್ರಿಕ ತೊಂದರೆಯಿದ್ದರೆ ಗಮನಕ್ಕೆ ತನ್ನಿ ಎಂದರು.
ಈ ಸಂದರ್ಭದಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಕೊರತೆ ಬಗ್ಗೆ ಗಮನಕ್ಕೆ ತಂದರು ಮತ್ತು ಒತ್ತಡದ ಬಗ್ಗೆಯೂ ಮಾಹಿತಿ ನೀಡಿದರು. ಆಯುಕ್ತರು ಕೂಡ ಕಂದಾಯ ವಿಭಾಗದಲ್ಲಿ 180 ಜನ ಸಿಬ್ಬಂದಿ ಇರುವ ಕಡೆ ಕೇವಲ 35 ಜನರಿದ್ದಾರೆ. ಆದರೂ ಕೂಡ ನಾವು ಸಾಧ್ಯವಾದಷ್ಟು ತುರ್ತಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಗಮನಕ್ಕೆ ತಂದರು.

ಎಸಿಬಿಯಿಂದ ಲೋಕಾಯುಕ್ತಕ್ಕೆ ಸಾವಿರಾರು ಕೇಸ್‌ಗಳು ವರ್ಗಾವಣೆಯಾದ್ದರಿಂದ ಪರಿಶೀಲನೆಗೆ ಸಮಯ ಆಗುತ್ತಿದೆ. ಆದರೂ ಕೂಡ ನಾವು ದಿಢೀರ್ ಭೇಟಿ ನೀಡುತ್ತೇವೆ. ಬಡವರ ಕೆಲಸವನ್ನು ಕೂಡಲೆ ಮಾಡಿಕೊಡಿ ಒತ್ತುವರಿ,ಆಶ್ರಯ ಮನೆ ವಿತರಣೆ ವಿಚಾರದಲ್ಲಿ ಅನೇಕ ದೂರುಗಳು ಬರುತ್ತಿದೆ. ಈ ಬಗ್ಗೆ ತಕ್ಷಣ ಗಮನಹರಿಸಿ ಇನ್ನೊಂದು ಬಾರಿ ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಎಲ್ಲಾ ಅರ್ಜಿಗಳ ಇಥ್ಯರ್ತಆಗಬೇಕು ಎಂದು ತಾಕೀತು ಮಾಡಿದರು. ನಿರ್ವಾಹಕ ಅಭಿಯಂತರರು ಕೆಲವೊಂದು ತಾಂತ್ರಿಕ ದೋಷದ ಬಗ್ಗೆ ಗಮನ ಸೆಳೆದರು.
ಈ ಸಂದರ್ಭದಲ್ಲಿ ನಾಗರೀಕ ಹಿತರಕ್ಷಣಾ ಸಮಿತಿಯ ವಸಂತ್‌ಕುಮಾರ್ ಅವರು ಕನ್ಸರ್‌ವೆನ್ಸಿಯಲ್ಲಿ ನಿರ್ಮಾಣಗೊಂಡು 30ಕ್ಕೂ ಹೆಚ್ಚು ಶೌಚಾಲಯಗಳು ಸಾರ್ವಜನಿಕ ಉಪಯೋಗಕ್ಕೆಬಾರದೆ ವ್ಯರ್ಥವಾಗಿರುವ ಬಗ್ಗೆ ಲೋಕಾಯುಕ್ತರ ಗಮನಕ್ಕೆ ತಂದರು. ಅಲ್ಲದೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಪಾಲಿಕೆ ಮುಂಭಾಗದಲ್ಲಿ ಕಲ್ಲುಗಳನ್ನು ಅಳವಡಿಸಿದ್ದು, ಈ ಕಲ್ಲುಹಾಸಿನಿಂದ ಸಾರ್ವಜನಿಕರಿಗೆ ಅನಾನುಕೂಲವೆ ಜಾಸ್ತಿಯಾಗಿದೆ ಮತ್ತು ಕಾಮಗಾರಿ ಸಂದರ್ಭದಲ್ಲಿಯೇ ನಾಗರೀಕ ವೇದಿಕೆ ಎಲ್ಲಾ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಲೋಕಾಯುಕ್ತ ಎಸ್‌ಪಿ ಅವರಿಗೆ ಲಿಖಿತ ದೂರು ನೀಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ಅನೇಕ ಸಮಸ್ಯೆಗಳ ಬಗ್ಗೆ ದೂರು ನೀಡಿದರು. ಆಯುಕ್ತರಾದ ಮಾಯಣ್ಣಗೌಡ, ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ಈಶ್ವರ್‌ನಾಯ್ಕ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.









Discussion about this post