ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವ್ಯಕ್ತಿತ್ವದ ಸೌಂದರ್ಯ ಕಾಪಾಡುವಲ್ಲಿ ದಂತ ಪ್ರಮುಖವಾಗಿದ್ದು ದಂತ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡಬೇಡಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಸಲಹೆ ನೀಡಿದರು.
ಶುಕ್ರವಾರ ನಗರದ ನ್ಯಾಷನಲ್ ಫಾರ್ಮಸಿ ಕಾಲೇಜಿನಲ್ಲಿ ಸುಬ್ಬಯ್ಯ ಡೆಂಟಲ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಉಚಿತ ದಂತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜನರಲ್ಲಿ ಹಲ್ಲು ಮತ್ತು ಕಣ್ಣುಗಳ ಬಗ್ಗೆ ಮುಂಜಾಗೃತಿ ವಹಿಸುವುದು ಕಡಿಮೆ. ಆರೋಗ್ಯ ಚೆನ್ನಾಗಿ ಇರಬೇಕಾದರೆ ಹಲ್ಲಿನ ಆರೋಗ್ಯ ಮೊದಲು ಸರಿಯಿರಬೇಕು. ಹಲ್ಲುಗಳು ಸರಿಯಾಗಿದ್ದಾಗ ಎಲ್ಲ ಬಗೆಯ ಆಹಾರ ಸೇವಿಸಲು ಸಾಧ್ಯವಾಗುತ್ತದೆ. ಬಾಯಿ ಮನುಷ್ಯನ ಸೌಂದರ್ಯದ ಪ್ರಮುಖ ಸಾಧನ. ಆಹಾರ ಸೇವಿಸಲು, ಮಾತನಾಡಲು, ನಗು ಮೊಗದಿ ಎಲ್ಲರೊಂದಿಗೆ ಬೆರೆಯಲು ಬಾಯಿ ಮತ್ತು ಹಲ್ಲಿನ ಆರೋಗ್ಯ ಮುಖ್ಯ. ಕೃತಕ ಹಲ್ಲುಗಳು ನಿಜವಾದ ಹಲ್ಲಿನಷ್ಟು ಆರಾಮದಾಯಕವಾಗಿರುವುದಿಲ್ಲ ಎಂದು ಹೇಳಿದರು.
Also read: ಶೂನ್ಯ ಅಪಘಾತ ಸಾಧಿಸಲು ಸಹಕರಿಸಿ: ಪಿ. ನಾರಾಯಣ ಕರೆ
ಎನ್ಇಎಸ್ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಅನಾರೋಗ್ಯವಾಗಿ ಒದ್ದಾಡುವುದಕ್ಕಿಂತ ಆರೋಗ್ಯದ ಮುಂಜಾಗೃತೆ ವಹಿಸುವುದು ಉತ್ತಮ. ಮೊಬೈಲ್ ವ್ಯಸನದಿಂದಾಗಿ ಮಕ್ಕಳಲ್ಲಿನ ಏಕಾಗ್ರತೆಯ ಶಕ್ತಿ ಕಡಿಮೆಯಾಗುತ್ತಿದೆ. ಆಧುನಿಕತೆ ಬೆಳೆದಂತೆ ಮನುಷ್ಯನಲ್ಲಿ ಆರೋಗ್ಯದ ಶಕ್ತಿಯು ಕುಂದುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಮಾತನಾಡಿ, ಹಿರಿಯರು ಹೇಳಿಕೊಟ್ಟ ಸ್ವಚ್ಚತಾ ಪ್ರಕ್ರಿಯೆ ಬಗ್ಗೆ ಅಲಕ್ಷಿಸಿದ್ದೇವೆ. ಅಂತಹ ಅಲಕ್ಷತೆಯ ಪರಿಣಾಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾವು ತಿನ್ನುವ ಜಂಕ್ ಫುಡ್ ಆರೋಗ್ಯದ ಮೇಲೆ ಬೀರುವ ತೊಂದರೆಗಳ ಕುರಿತು ಅರಿವು ನಮಗಿರಬೇಕು ಎಂದು ಹೇಳಿದರು.
ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ.ಅನಿಲ್ ಬಾಬು ದಂತ ಆರೋಗ್ಯದ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಸಿದ್ದಲಿಂಗಸ್ವಾಮಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post