ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಪೊಲೀಸ್ ಮತ್ತು ಶಿವಮೊಗ್ಗ ಸೈಕಲ್ ಕ್ಲಬ್ ಸಂಯೋಜನೆಯಲ್ಲಿ ಭಾನುವಾರ ಬೆಳಿಗ್ಗೆ 7 ಗಂಟೆ ಗೆ ಜನ ಜಾಗೃತಿ ಸೈಕಲ್ ಜಾಥಾ ನಡೆಸಲಾಯಿತು.
ಜಿಲ್ಲಾ ಅಧಿಕಾರಿಗಳಾದ ಡಾಕ್ಟರ್ ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಾಥಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮತದಾನ ಜಾಗೃತಿಯ ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸಿ ಮತದಾನದ ಅನಿವಾರ್ಯತೆ ಮತ್ತು ಅವಶ್ಯಕತೆಯ ಹಾಡುಗಳನ್ನು ಬಿತ್ತರಿಸಲಾಯಿತು. ನೂರಾರು ಪೊಲೀಸ್ ಸಿಬ್ಬಂದಿಗಳು ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳು ಸೈಕಲ್ ಕ್ಲಬ್‌ನ ಸದಸ್ಯರು ಹಾಗೂ ಸಾರ್ವಜನಿಕರು ಈ ಸೈಕಲ್ ಜಾಥದಲ್ಲಿ ಪಾಲ್ಗೊಂಡರು.
ಹೆಚ್ಚುವರಿ ವರಿ?ಧಿಕಾರಿ ಅನಿಲ್ ಕುಮಾರ್ ರೆಡ್ಡಿ ಮತ್ತು ಜಿಲ್ಲಾ ಪಂಚಾಯಿತ್ ಚುನಾವಣಾ ಅರಿವು ವಿಭಾಗದ ನವೀದ್ ಅಹ್ಮದ್ ಪರ್ವೀಜ್ ಮತ್ತು ಡಿವೈಎಸ್‌ಪಿಗಳಾದ ಬಾಲರಾಜ್, ಸುರೇಶ್, ಗಜಾನನ, ವೃತ್ತ ನಿರೀಕ್ಷಕ ಆಂಜನ್ ಕುಮಾರ್, ಪಿಎಸ್‌ಐ ಶೈಲಜ ಹಾಗೂ ಇತರೆ ಹಲವಾರು ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್‌ನ ಎಲ್ಲ ಸದಸ್ಯರು ಸಾರ್ವಜನಿಕರು ಭಾಗವಹಿಸಿದ್ದರು.
ನೈತಿಕ ಮತ್ತು ಕಡ್ಡಾಯ ಮತದಾನ ಮಾಡಲು ಪ್ರೇರೇಪಿಸಲಾಯಿತು. ಮತದಾರರ ಪಟ್ಟಿಯಲ್ಲಿ ಪರಿಶೀಲಿಸಲು ತಿಳಿಸಲಾಯಿತು.
ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಆದೇಶ ಹಿನ್ನೆಲೆ ಸಿಎಂಗೆ ಅಭಿನಂದನೆ
ಬಲಿಜ ಸಮಾಜದ 27 ಉಪಜಾತಿಗಳನ್ನೊಳಗೊಂಡಂತೆ ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಲು ಆದೇಶಿಸಿದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಜಿಲ್ಲಾ ಬಲಿಜ ಸೇವಾ ಸಂಘ ಅಭಿನಂದಿಸಿದೆ.
ಅಭಿವೃದ್ಧಿ ನಿಗಮವು ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ 500 ಕೋಟಿ ರೂ,.ಅನುದಾನ ಬಿಡುಗಡೆ ಮಾಡಿ ಸೂಕ್ತ ಕಟ್ಟಡ, ಕಚೇರಿ, ಸಿಬ್ಬಂದಿ ಮತ್ತು ಅಧ್ಯಕ್ಷರನ್ನು ನೇಮಕ ಮಾಡುವಂತೆ ಜಿಲ್ಲಾಧ್ಯಕ್ಷ ಜಿ.ರಾಘವೇಂದ್ರ ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಔದ್ಯೋಗಿಕವಾಗಿ, ರಾಜಕೀಯವಾಗಿ ಈ ಹಿಂದೆ ಭರವಸೆ ನೀಡಿದಂತೆ ಪೂರ್ಣ ಪ್ರಮಾಣದ ಪ್ರವರ್ಗ೨ಎಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಸಂಸದ ಪಿ.ಸಿ.ಮೋಹನ್‌ರವರ ಸತತ ಪ್ರಯತ್ನದಿಂದಾಗಿ ನಿಗಮ ಸ್ಥಾಪನೆಯಾಗಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎಂ.ವೆಂಕಟೇಶ್, ವಿ.ಕೃಷ್ಣಮೂರ್ತಿ, ಡಾ.ಬಿ.ಆರ್. ಶಿವಕುಮಾರ್,ಎನ್. ವೆಂಕಟೇಶ್ ನಾಯ್ಡು, ಎನ್.ರಾಮಾಂಜನೇಯ, ಬಿ.ಎಸ್.ರಮೇಶ್ ಇನ್ನಿತರರು ಉಪಸ್ಥಿತರಿದ್ದರು.
ಶಾಸಕ ಈಶ್ವರಪ್ಪ ವಿರುದ್ಧ ಸುಂದರೇಶ್ ವಾಗ್ಧಾಳಿ
ಕೆ.ಎಸ್. ಈಶ್ವರಪ್ಪನವರಿಗೆ ನೈತಿಕತೆ ಇದ್ದರೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಶಿವಮೊಗ್ಗ ನಗರ ಅಶಾಂತಿಯಿಂದ ಭುಗಿಲೆದ್ದಿದೆ. ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತಲಾಗಿದೆ. ಕೋಮು ಗಲಭೆಗಳು ಸರಣಿಯಂತೆ ನಡೆದಿವೆ. ಭ್ರಷ್ಟಾಚಾರ ಮಿತಿ ಮೀರಿದೆ. ಈ ಎಲ್ಲದಕ್ಕೂ ಈಶ್ವರಪ್ಪ ಪ್ರಮುಖ ಕಾರಣ. ಶವಗಳ ಮೇಲೆ ಚುನಾವಣೆ ಮಾಡಲು ಅವರು ಹೊರಟಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಚುನಾವಣೆಯಿಂದ ಮಾತ್ರವಲ್ಲ, ರಾಜಕಾರಣದಿಂದಲೇ ದೂರ ಇರಬೇಕು ಎಂದರು.
ಬಿಜೆಪಿಯವರು ಕಾಂಗ್ರೆಸ್ ನ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ನಮ್ಮಲ್ಲಿ ಬೇಕಾದಷ್ಟು ಸಂಘಟನೆಗಳಿವೆ. ಯಾವ ಯಾವ ಸಂಘಟನೆಗಳು ಏನೇನೋ ತಪ್ಪು ಮಾಡಿದರೆ ಕಾಂಗ್ರೆಸ್ ಪಕ್ಷವನ್ನು ಮಧ್ಯ ಎಳೆದು ತರುತ್ತಾರೆ. ಯಾರೇ ತಪ್ಪು ಮಾಡಲಿ ಅವರಿಗೆ ಶಿಕ್ಷೆ ಕೊಡಲಿ. ಅದನ್ನು ಬಿಟ್ಟು ಇದಕ್ಕೆ ಕಾಂಗ್ರೆಸ್ಸೇ ಕಾರಣ ಎಂದು ಹೇಳುವ ಪ್ರವೃತ್ತಿಯನ್ನು ಬಿಜೆಪಿ ಬಿಡಬೇಕು ಎಂದರು.
ಈಶ್ವರಪ್ಪನವರಿಗೆ ಕೋಮು ವಿಷಯ ಬಿಟ್ಟು ಬೇರೆ ಬಂಡವಾಳವೇ ಇಲ್ಲ. ಧರ್ಮಗಳನ್ನು ಎಳೆದು ತಂದು ಯುವಕರ ಮನಸ್ಸನ್ನು ಹದಗೆಡಿಸಿ ಅಶಾಂತಿಯನ್ನು ಮೂಡಿಸಿ ಚುನಾವಣೆಗೆ ನಿಲ್ಲಲು ಹೊರಟಿದ್ದಾರೆ. ಅವರಿಗೆ ಚುನಾವಣೆಗೆ ನಿಲ್ಲಲು ಯಾವ ಯೋಗ್ಯತೆಯೂ ಇಲ್ಲ. ಶೇ. 40ರಷ್ಟು ಭ್ರಷ್ಟಚಾರದ ಆರೋಪ ಹೊತ್ತು ಗುತ್ತಿಗೆದಾರನ ಸಾವಿಗೆ ಕಾರಣವಾಗಿ ಸಚಿವ ಸ್ಥಾನ ಕಳೆದುಕೊಂಡ ಈಶ್ವರಪ್ಪನವರಿಗೆ ನಾಚಿಕೆಯಾಗಬೇಕು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶೇ. 60 ರಷ್ಟು ಅವ್ಯವಹಾರ ನಡೆದರೂ ಕೂಡ ಎಲ್ಲವೂ ಸುಗಮವಾಗಿದೆ ಎಂದು ಹೇಳುವ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕುಟುಕಿದರು.
ದೇಶ ಪ್ರೇಮ ಯಾವುದು ದೇಶ ದ್ರೋಹ ಯಾವುದು ಎಂಬ ವ್ಯತ್ಯಾಸವೇ ಅವರಿಗೆ ಗೊತ್ತಿಲ್ಲ. ವಿನಾಕಾರಣ ಕಾಂಗ್ರೆಸ್ ಬಗ್ಗೆ ಗೂಬೆ ಕೂರಿಸುವ ಅವರು ತಾವೇನು ಮಾಡಿದ್ದೇವೆ ಎಂದು ಯೋಚಿಸಲಿ. ಶಿವಮೊಗ್ಗ ನಗರದಲ್ಲಿ ಬರಿ ಗಲಾಟೆ, ದೊಂಬಿ, ಭ್ರಷ್ಟಚಾರ, ಅವ್ಯಹಾರಗಳನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿರುವ ಅವರಿಗೆ ಚುನಾವಣೆಗೆ ಸ್ಪರ್ಧಿಸುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಬಿ.ಎಸ್. ಯಡಿಯೂರಪ್ಪನವರು ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಸ್ವಾಭಿಮಾನಿಯಾಗಿದ್ದವರು. ಅವರನ್ನು ಯಾವ್ಯಾವುದೋ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾನವನ್ನು ಕಸಿದುಕೊಂಡವರು. ಅಂತಹ ಮಹಾನ್ ವ್ಯಕ್ತಿಗೆ ಬಿಜೆಪಿ ಅವಮಾನ ಮಾಡಿದೆ. ನಿಜವಾಗಿಯೂ ಯಡಿಯೂರಪ್ಪನವರಿಗೆ ಸ್ವಾಭಿಮಾನವಿದ್ದರೆ ಹಠವಾದಿಯೇ ಆಗಿದ್ದರೆ ಅವರು ಬಿಜೆಪಿ ಪರ ಭಾಷಣ ಮಾಡಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಪ್ರಮುಖರಾದ ಎಸ್.ಕೆ. ಮರಿಯಪ್ಪ, ಎಲ್. ಸತ್ಯನಾರಾಯಣ, ಎಸ್.ಪಿ. ದಿನೇಶ್, ರವಿಕುಮಾರ್, ಚಂದ್ರಶೇಖರ್, ಚಂದನ್, ಕಲೀಂ, ದೀಪಕ್ ಸಿಂಗ್, ನೇತಾಜಿ, ಶಿವಾನಂದ್, ಎನ್.ಡಿ. ಪ್ರವೀಣ್ ಮೊದಲಾದವರಿದ್ದರು.
ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ರೈತ ಹೋರಾಟ ಸಮಿತಿ ಖಂಡನೆ
ಸೊರಬ ತಾಲ್ಲೂಕು ಕುಪ್ಪಗಡ್ಡೆ ತಾಳಗುಪ್ಪ ಗ್ರಾಮದ ಸರ್ವೇ ನಂ. 20ರಲ್ಲಿ 6 ಕುಟುಂಬಗಳನ್ನು ಅರಣ್ಯಾಧಿಗಳು ಒಕ್ಕಲೆಬ್ಬಿಸಲು ಹೊರಟಿದ್ದು ಸುಮಾರು 20 ಎಕರೆ ಫಸಲು ಬಂದ ತೋಟವನ್ನು ನಾಶ ಮಾಡಲು ಹೊರಟಿದ್ದಾರೆ. ಇದನ್ನು ಮಲೆನಾಡು ರೈತ ಹೋರಾಟ ಸಮಿತಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಳಗುಪ್ಪದ ಸರ್ವೇ ನಂ. 20ರಲ್ಲಿ ಸುಮಾರು 6 ಕುಟುಂಬಗಳು ತೋಟ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಇವರ ಹೆಸರಿನಲ್ಲಿ ದಾಖಲೆಗಳೂ ಇವೆ. ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಸುಮಾರು 8 ಕಾಯ್ದೆಗಳು ಜೀವಂತವಾಗಿವೆ. ಅದರಲ್ಲಿ 1963 ರ ಕಾಯ್ದೆ ಪ್ರಕಾರ ಇಬ್ಬರು ರೈತರನ್ನು ಒಕ್ಕಲೆಬ್ಬಿಸುವ ಹಾಗೆಯೇ ಇಲ್ಲ. ಇನ್ನುಳಿದ ನಾಲ್ಕು ರೈತರು ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ. ಇವರ ಜೊತೆಗೆ 80 ಸಾವಿರ ಅರ್ಜಿಗಳಿವೆ. ಅವರೆಲ್ಲರನ್ನೂ ಬಿಟ್ಟು ಇವರಿಗೆ ಮಾತ್ರ ನೋಟಿಸ್ ನೀಡಿದ್ದಾರೆ ಎಂದು ದೂರಿದರು.
ಈ ಹಿಂದೆಯೂ ಸುಮಾರು 41 ರೈತರನ್ನು ಒಕ್ಕಲೆಬ್ಬಿಸಿದ್ದರು. 110ಕ್ಕೂ ಹೆಚ್ಚು ಕೇಸ್ ಗಳನ್ನು ಅರಣ್ಯ ಅಧಿಕಾರಿಗಳು ದಾಖಲಿಸಿದ್ದರು. ಸರ್ಕಾರದ ಮಾತನ್ನೇ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ನನ್ನ ಜೀವ ಇರುವತನಕ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದರು. ಆದರೆ, ಆ ಶಪಥ ಈಗ ಸುಳ್ಳಾಗಿದೆ ಎಂದರು.
ದಿ. ಬಂಗಾರಪ್ಪನವರ ಕ್ರಿಯಾಶೀಲತೆ ಈಗಿರುವ ಅವರ ಮಕ್ಕಳಾದ ಇಬ್ಬರಿಗೂ ಬರುವುದಿಲ್ಲ. ಒಬ್ಬರ ಮೇಲೊಬ್ಬರು ಹೇಳುತ್ತಾರೆ. ಆಡಳಿತ ಪಕ್ಷ ಬಗರ್ ಹುಕುಂ ಸಾಗುವಳಿದಾರರ ವಿರುದ್ಧವಾಗಿ ಕೆಲಸ ಮಾಡಿದರೆ ವಿರೋಧ ಪಕ್ಷ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ ರೈತರ ನೋವು ಹೆಚ್ಚಾಗಿದೆ. ಇರುವ ತೋಟವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ರೈತರಿದ್ದಾರೆ. ಈಗಾಗಲೇ ರೈತರ ತೋಟಕ್ಕೆ ಜೆಸಿಬಿಗಳು ಬಂದು ನಿಂತಿವೆ. ತೋಟ ಉಳಿಸಿಕೊಳ್ಳಲು ಆ 6 ಕುಟುಂಬಗಳು ಹೆಣಗಾಡುತ್ತಿವೆ ಎಂದು ಹೇಳಿದರು.
ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ತಡೆಯಲು ಹಲವು ಕಾನೂನಿಗಳಿದ್ದರೂ ಅಧಿಕಾರಿಗಳು ಕೇಳುತ್ತಿಲ್ಲ. ಅದರಲ್ಲೂ ಅರಣ್ಯಾಧಿಕಾರಿಗಳ ದೌರ್ಜನ್ಯ ಹೆಚ್ಚಾಗಿದೆ. ಅವರ ನೋವು ತಟ್ಟದೇ ಇರುವುದಿಲ್ಲ. ಆಡಳಿತ ಪಕ್ಷಕ್ಕೂ ಕೂಡ ರೈತರ ಶಾಪ ತಟ್ಟುತ್ತದೆ. ಕೂಡಲೇ ಸರ್ಕಾರ ಮಧ್ಯಪ್ರವೇಶ ಮಾಡಿ 6 ಕುಟುಂಬದ ರೈತರ 20 ಎಕರೆ ಅಡಿಕೆ ತೋಟವನ್ನು ನಾಶ ಮಾಡದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾ ಎಲ್.ವಿ. ಸುಭಾಷ್, ಕೃಷ್ಣಮೂರ್ತಿ ಹೆಗ್ಗೋಡು, ಲೋಕೇಶ್ ಇದ್ದರು.
ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದಲ್ಲಿ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ನಗರದ ಕೋಟೆ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಬಾಲಕಿಯರ ವಸತಿ ನಿಲಯದಲ್ಲಿ ಸರಿಯಾದ ಊಟದ ವ್ಯವಸ್ಥೆ, ಶುದ್ಧ ನೀರು, ಶೌಚಾಲಯ ವ್ಯವಸ್ಥೆ ಸರಿ ಇಲ್ಲ. ವಿದ್ಯಾರ್ಥಿನಿಯರಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ವಸತಿ ನಿಲಯದಿಂದ ಮನೆ, ಮನೆಯಿಂದ ವಸತಿ ನಿಲಯಕ್ಕೆ ಅಲೆದಾಡುವಂತಹ ಪರಿಸ್ಥಿತಿ ಬಂದಿದೆ. ಸಂಬಂಧಪಟ್ಟವರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ವಸತಿ ನಿಲಯಕ್ಕೆ ಪೋ?ಕರು ಹೋದರೂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಇಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಉತ್ತಮ ಗುಣಮಟ್ಟದ ಆಹಾರ, ಕುಡಿಯಲು ಶುದ್ಧ ನೀರು, ಶೌಚಾಲಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ವಾಟಾಳ್ ಮಂಜುನಾಥ್, ಪ್ರಮುಖರಾದ ಪ್ರಶಾಂತ್, ರವಿ ಸಾಧುಶೆಟ್ಟಿ, ಅರ್ಚನಾ, ಸಂತೋಷ್, ರಮೇಶ್, ಲೋಕೇಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post