ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿಯಲ್ಲಿ ಅವ್ಯವಹಾರ ನಡೆಸಿರುವ 7 ನ್ಯಾಯಬೆಲೆ ಅಂಗಡಿಗಳನ್ನು ಕಾಯಂ ರದ್ದು ಮಾಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂಯುಕ್ತ್ರ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದರು.
ಭದ್ರಾವತಿ ತಾಲೂಕಿನಲ್ಲಿ 7 ನ್ಯಾಯಬೆಲೆ ಅಂಗಡಿಗಳು ಭ್ರಷ್ಟಾಚಾರ ನಡೆಸಿವೆ. ಈ ಅಂಗಡಿಗಳ ಮೇಲೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ ಇವುಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಆದರೆ, ಈ ಅಂಗಡಿ ಮಾಲೀಕರು ರಾಜಕೀಯ ಪ್ರಭಾವಿಗಳು. ಪುನಃ ನ್ಯಾಯಬೆಲೆ ಅಂಗಡಿ ತೆರೆಯಲು ಲಾಬಿ ನಡೆಸುತ್ತಿದ್ದಾರೆ. ಆದ್ದರಿಂದ ಇವುಗಳನ್ನು ಕಾಯಂ ಆಗಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಇದರ ಜೊತೆಗೆ ಭದ್ರಾವತಿ ತಾಲೂಕು ಎರೆಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸಿಬ್ಬಂದಿಗಳು 2022ರ ನವೆಂಬರ್ ತಿಂಗಳಲ್ಲಿ ಕನಕದಾಸರ ಜಯಂತಿ ಆಚರಣೆ ಮಾಡದೇ ಕರ್ತವ್ಯಲೋಪ ಎಸಗಿದ್ದಾರೆ. ಪಿಡಿಒ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.
ಕಾಗೋಡು ತಿಮ್ಮಪ್ಪ ಕಡೆಗಣನೆ ಆರೋಪ ಹುನಗೋಡು ರತ್ನಾಕರ್ ಅಸಮಾಧಾನ
ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ವಿರುದ್ಧ ಬಂಡಾಯದ ಬಾವುಟವನ್ನು ಹಾರಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಸಿದ್ಧವಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುವಾಗ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಕಾಗೋಡು ತಿಮ್ಮಪ್ಪ ಅವರನ್ನು ಕಡೆಗಣಿಸಿದ್ದಾರೆ. ಜೊತೆಗೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳ ಹತ್ತಿರವೂ ಚರ್ಚೆ ಮಾಡದೆ ಏಕಪಕ್ಷೀಯವಾಗಿ ಪಕ್ಷಾಂತರಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಿದ್ದಾರೆ ಎಂದು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಬಂಡಾಯ ಎದ್ದಿರುವ ಕಾಂಗ್ರೆಸ್ ಮುಖಂಡ ಹುನಗೋಡು ರತ್ನಾಕರ್ ತಿಳಿಸಿದರು.
ಕಾಗೋಡು ತಿಮ್ಮಪ್ಪ ಅವರು ಕಾಂಗ್ರೆಸ್‌ನ ಹಿರಿಯ ಮುಖಂಡರು. ಆದರೆ ಅವರನ್ನು ಕಡೆಗಣಿಸಲಾಗುತ್ತಿದೆ. ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರ ಅಭಿಪ್ರಾಯವನ್ನು ಕೇಳಬೇಕಿತ್ತು. ಅವರಿಗೇ ಟಿಕೆಟ್ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ ಮೇಲೆ ಅವರು ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕಿತ್ತು. ಆದರೆ ಬಿಜೆಪಿಯಲ್ಲಿದ್ದು, ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಾಗಿದ್ದ ಪಕ್ಷಾಂತರಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಿರುವುದು ನಮಗೆ ಅಸಮಾಧಾನ ತಂದಿದೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಬೇಳೂರು ಅವರ ಹೆಸರನ್ನು ಪ್ರಕಟಿಸಿದೆ. ಆದರೆ ಇದನ್ನು ಮರು ಪರಿಶೀಲನೆ ಮಾಡಬೇಕು. ಅರ್ಜಿ ಹಾಕಲು ನಾವೆಲ್ಲ 2ಲಕ್ಷ ಹಣ ಕಟ್ಟಿದ್ದೇವೆ. ಕನಿಷ್ಠಪಕ್ಷ ಅಭಿಪ್ರಾಯ ಕೇಳಬಹುದಿತ್ತು. ಆದರೆ ಅದಕ್ಕೂ ಅವಕಾಶ ನೀಡಿಲ್ಲ. ಸಾಗರದಲ್ಲಿ ಈ ಬಾರಿ ಕಾಂಗ್ರೆಸ್‌ಗೊಂದು ಉತ್ತಮ ವಾತಾವರಣವಿದೆ. ಗೆಲ್ಲುವ ಅವಕಾಶ ಕೂಡ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯ ಗಂಭೀರತೆ ಅರಿತುಕೊಂಡು ಕಾಂಗ್ರೆಸ್ ಮುಖಂಡರು ಬೇಳೂರು ಗೋಪಾಲಕೃಷ್ಣ ಅವರನ್ನು ಬಿಟ್ಟು ಕಾಗೋಡು ಅವರು ಹೇಳಿದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ನಾನೂ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಸಾಗರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ನಾವೆಲ್ಲ ಮೂಲ ಕಾಂಗ್ರೆಸ್ಸಿಗರು. ಕಾಗೋಡು ತಿಮ್ಮಪ್ಪ ಅವರ ಜೊತೆಗಿದ್ದವರು. ಅವರನ್ನು ಕಡೆಗಣಿಸಬೇಡಿ ಎಂದು ರಾಜ್ಯ ನಾಯಕರುಗಳ ಬಳಿ ಹೋಗಿದ್ದೆವು ಕೂಡ. ನಿಮ್ಮೆಲ್ಲರೊಂದಿಗೆ ಚರ್ಚಿಸಿ ಟಿಕೆಟ್ ನೀಡುವುದಾಗಿ ಹೇಳಿದ್ದರು. ಆದರೆ ಈಗ ತರಾತುರಿಯಲ್ಲಿ ಬೇಳುರಿಗೆ ಟಿಕೆಟ್ ನೀಡಿದ್ದಾರೆ. ಇದರಿಂದ ಮೂಲ ಕಾಂಗ್ರೆಸ್ಸಿಗರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದಾರೆ ಎಂದರು.
ಮತ್ತೋರ್ವ ಮುಖಂಡ ರವಿ ಕುಗ್ವೆ ಮಾತನಾಡಿ, ಬೇಳೂರು ಗೋಪಾಕೃಷ್ಣರಂತಹ ಪಕ್ಷಾಂತರಿ ಮತ್ತೊಬ್ಬನಿಲ್ಲ. ಆತ ಜನರ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಪಕ್ಷಾಂತರಿಗಳೀಗೆಲ್ಲ ಟಿಕೆಟ್ ನೀಡಿದರೆ ಪಕ್ಷಕ್ಕಾಗಿ ದುಡಿದವರು ಎಲ್ಲಿಗೆ ಹೋಗಬೇಕು ತೀರ್ಥಹಳ್ಳಿಯಲ್ಲಿ ಕೂಡ ಮೊದಲ ಪಟ್ಟಿಯಲ್ಲಿಯೇ ಕಿಮ್ಮನೆ ರತ್ನಾಕರ್ ಅವರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಟಿಕೆಟ್ ನೀಡದೆ ಆ ಕ್ಷೇತ್ರವನ್ನು ಏಕೆ ಕಾಯ್ದಿಟ್ಟಿದ್ದಾರೆ? ಅಲ್ಲಿಯೂ ಕೂಡ ಸಾಗರದ ಸ್ಥಿತಿಯೇ ಬರಬಹುದು. ಕಾಂಗ್ರೆಸ್ ಪಕ್ಷದ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಕಾಂಗ್ರೆಸ್ಸಿನ ಎರಡನೇ ಪಟ್ಟಿ ಬಿಡುಗಡೆಯಾಗುವುದರೊಳಗೆ ಸಾಗರ ಕ್ಷೇತ್ರದಲ್ಲಿ ಈಗ ಘೋಷಿಸಿರುವ ಅಭ್ಯರ್ಥಿಯನ್ನು ಬಿಟ್ಟು ಬೇರೆ ಅಭ್ಯರ್ಥಿಯನ್ನು ಎಲ್ಲರೊಡನೆ ಕುಳಿತು ಚರ್ಚಿಸಿ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಸಾಗರದಲ್ಲಿ ಕಾಂಗ್ರೆಸ್ ಬಂಡಾಯದ ಬಾವುಟ ಹಾರಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದು ನಿಜವಾದ ಕಾಂಗ್ರೆಸ್ ಕಾರ್ಯಕರ್ತರ ಎಚ್ಚರಿಕೆಯೂ ಆಗಿದೆ. ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ರಮೇಶ್ ಗಾಳಿಪುರ, ಪ್ರಕಾಶ್, ಮೋಹನ್‌ಕುಮಾರ್, ಶಿವಪ್ಪ, ಭಾಸ್ಕರ್, ಭರಮ್ಪಪ್ಪ, ಭೈರಪ್ಪ ಸೇರಿದಂತೆ ಹಲವರಿದ್ದರು.
2ಬಿ ಮೀಸಲಾತಿ ರದ್ಧತಿ ವಾಪಸ್ ಪಡೆಯಲು ಒತ್ತಾಯ
ಶಿವಮೊಗ್ಗ: ರಾಜ್ಯ ಸರ್ಕಾರ 2ಬಿ ಮೀಸಲಾತಿ ರದ್ದುಗೊಳಿಸಿರುವ ನಿರ್ಧಾರವನ್ನು 2ಬಿ ಮೀಸಲಾತಿ ಸಂರಕ್ಷಣಾ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ವೇದಿಕೆಯ ಮುಖಂಡ ಹಾಗೂ ವಕೀಲ ಶಹರಾಜ್ ಮುಜಾಹಿದ್ ಸಿದ್ದಿಖಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶದಿಂದ ಯಾವುದೇ ಸಾಂವಿಧಾನಿಕ ತಳಹದಿ ಇಲ್ಲದೇ ಈ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿದೆ. ತಕ್ಷಣವೇ ಇದನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದರು.
ರಾಜ್ಯ ಸರ್ಕಾರ ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ನಿಲ್ಲಿಸುತ್ತೇವೆ ಎಂದು ಹೇಳಿದೆ. ಆದರೆ, ಮುಸ್ಲಿಂ ಎನ್ನುವುದು ಒಂದು ಧರ್ಮವಲ್ಲ, ಅದೊಂದು ಇಸ್ಲಾಂ ಧರ್ಮದ ಸಮುದಾಯ ಸೂಚಕದ ಪದ. ಪರಿಶಿಷ್ಟರಲ್ಲಿ ಹಿಂದುಳಿದ ವರ್ಗಗಳಲ್ಲಿ ಹೇಗೆ ಸಮುದಾಯಗಳು ಬರುತ್ತವೆಯೋ ಹಾಗೆಯೇ ಇಸ್ಲಾಂ ಧರ್ಮದಲ್ಲೂ ಕೂಡ ಮುಸ್ಲಿಂ ಅನ್ನುವುದು ಒಂದು ಸಮುದಾಯ ಪ್ರತಿಬಿಂಬಿಸುತ್ತದೆಯೇ ಹೊರತೂ ಅದು ಧರ್ಮವಲ್ಲ. ಆದರೆ ಸರ್ಕಾರ ಇದನ್ನು ಧರ್ಮವಾಗಿ ಪ್ರತಿಬಿಂಬಿಸುತ್ತದೆ ಎಂದರು.
ನಾವು ಮೀಸಲಾತಿಯ ವಿರೋಧಿಗಳಲ್ಲ, ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯದವರಿಗೆ ಮೀಸಲಾತಿ ನೀಡಿರುವುದನ್ನು ನಮ್ರತೆಯಿಂದ ಸ್ವಾಗತಿಸುತ್ತೇವೆ. ಆದರೆ, ಮುಸ್ಲಿಂ ಸಮುದಾಯದ 2ಬಿ ಮೀಸಲಾತಿ ರದ್ದುಗೊಳಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಮತ್ತು ಇದರ ಹಿಂದೆ ರಾಜಕೀಯ ಉದ್ದೇಶವಿದೆಯೇ ಹೊರತೂ ಬೇರೆ ಏನೂ ಇಲ್ಲ. ಮುಸ್ಲಿಂ ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದೆ ಉಳಿದಿದೆ. ದಲಿತ ವರ್ಗದವರಿಗಿಂತ ಕೆಳಮಟ್ಟದಲ್ಲಿ ಇದ್ದೇವೆ. ಆದರೆ, ಸರ್ಕಾರ ನಮ್ಮ ಮೀಸಲಾತಿಯನ್ನು ಕಸಿದುಕೊಂಡು ಮೂಗಿಗೆ ತುಪ್ಪ ಹಚ್ಚುವಂತೆ ನಿಮಗೆ ಆರ್ಥಿಕ ದುರ್ಬಲ ವರ್ಗದಲ್ಲಿ ಮೀಸಲಾತಿ ನೀಡುತ್ತೇವೆ ಎಂದು ಹೇಳುತ್ತಿದೆ. ಮುಂದುವರೆದ ಸಮುದಾಯಕ್ಕೆ ಮಾತ್ರ ಅದು ತಲುಪುತ್ತದೆಯೇ ಹೊರತು ನಮಗೆ ತಲುಪುವುದಿಲ್ಲ. ನಾವು ಎಲ್ಲವನ್ನು ಸಹಿಸಿಕೊಂಡಿದ್ದೇವೆ. ಈ ಹಿಂದೆ ನಮಗೆ ನಮ್ಮ ಹೋರಾಟದ ಫಲವಾಗಿ ಪ್ರವರ್ಗ ೨ಬಿ ಅಡಿಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಿತ್ತು. ನಾವು ಕೇಳಿದ್ದು ಶೇ. 8ರಷ್ಟು ಮೀಸಲಾತಿಯನ್ನು. ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ಕೂಡ ನಮ್ಮ ಮಾತನ್ನು ಕೇಳದೇ ಶೇ. 4ರಷ್ಟು ಮೀಸಲಾತಿ ನೀಡಿತ್ತು. ಅದು ನ್ಯಾಯಾಲಯದ ಮಧ್ಯ ಪ್ರವೇಶದಿಂದ. ಆದರೆ, ಈಗ ಬಿಜೆಪಿ ಸರ್ಕಾರ ಆ ಮೀಸಲಾತಿಯನ್ನು ಕೂಡ ಕಸಿದುಕೊಂಡಿದೆ. ಹಾಗಾಗಿ ಎಲ್ಲ ಸರ್ಕಾರಗಳು ಅಲ್ಪಸಂಖ್ಯಾತರ ಕಲ್ಯಾಣ ಮರೆತು ಮತ ಬ್ಯಾಂಕ್ ಆಗಿ ಮಾಡಿಕೊಂಡಿವೆ ಎಂದರು.
ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೂಡಲೇ ಮರುಪರಿಶೀಲನೆ ಮಾಡಿ ರದ್ದುಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ. ನಮ್ಮ ಹೋರಾಟಕ್ಕೆ ಎಲ್ಲಾ ಸಮಾಜದ ಮುಖಂಡರು, ಸ್ವಾಮೀಜಿಗಳು, ಮಠಾಧಿಪತಿಗಳು ಧ್ವನಿಗೂಡಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುಹೇಲ್ ಅಹ್ಮದ್, ಸೈಯದ್ ಲಿಯಾಖತ್, ಡಾ. ಹಬೀಬುರ್ ರೆಹಮಾನ್, ರಹೀಂ, ಮೊಹಮ್ಮದ್ ನೋಮಾನ್ ಮುಂತಾದವರಿದ್ದರು.
ಮನವಿ:
2ಬಿ ಮೀಸಲಾತಿ ಸಂರಕ್ಷಣಾ ವೇದಿಕೆ ಪತ್ರಿಕಾಗೋಷ್ಠಿಯ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ 2ಬಿ ಮೀಸಲಾತಿ ರದ್ದುಗೊಳಿಸಿರುವುದನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಎಂ. ಶ್ರೀಕಾಂತ್‌ಗೆ ಟಿಕೇಟ್ ನೀಡಿ: ಸಮೀವುಲ್ಲಾ ಆಗ್ರಹ
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಎಂ. ಶ್ರೀಕಾಂತ್ ಅವರಿಗೆ ಟಿಕೆಟ್ ನೀಡಬೇಕೆಂದು ಕರ್ನಾಟಕ ರಾಜ್ಯ ನಿಸ್ವಾರ್ಥ ಜನಶಕ್ತಿ ವೇದಿಕೆ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಎಂ. ಸಮೀವುಲ್ಲಾ ಆಗ್ರಹಿಸಿದ್ದಾರೆ.
ಎಂ. ಶ್ರೀಕಾಂತ್ ಅವರು ಜಾತ್ಯತೀತ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು. ಶಿವಮೊಗ್ಗದಲ್ಲಿ ಅವರ ಅಭಿಮಾನಿಗಳು ಸಾಕಷ್ಟು ಜನ ಇದ್ದಾರೆ. ಅವರಲ್ಲಿರುವ ಒಳ್ಳೆಯ ಗುಣದಿಂದ ಜನಾನುರಾಗಿಯಾಗಿದ್ದಾರೆ. ಅವರಿಗೆ ತಮ್ಮ ಸ್ವಂತ ಶಕ್ತಿಯ ಮೇಲೆ ಚುನಾವಣೆ ಎದುರಿಸುವ ಶಕ್ತಿಯೂ ಇದೆ. ಇದಕ್ಕೆ ಜೆಡಿಎಸ್ ಪಕ್ಷದ ಬೆಂಬಲ ಬೇಕು ಅಷ್ಟೇ. ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರು ಶ್ರೀಕಾಂತ್ ಅವರ ಸಂಘಟನೆ ಕಾರ್‍ಯ ಗುರುತಿಸಿ ಶ್ರೀಕಾಂತ್ ಅವರು ಬೇಡ ಎಂದರೂ ಕೂಡ ಒತ್ತಾಯ ಮಾಡಿ ಅವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲು ಪ್ರಯತ್ನಿಸಬೇಕು ಎಂದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ರಾಜಕೀಯ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಸುಮಾರು 15 ವರ್ಷಗಳ ಕಾಲ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬಿಜೆಪಿ ಸೋಲಿಸಲು ಕಾರಣವೂ ಆಗಿದ್ದಾರೆ. ಹಲವೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಿಂತರೂ ಹಲವು ಕಾರಣಗಳಿಂದ ಸೋಲು ಕಂಡಿದ್ದಾರೆ. ಈ ಬಾರಿಯಾದರೂ ಅವರು ಗೆಲ್ಲಬೇಕು. ಆದ್ದರಿಂದ ಅವರಿಗೆ ಅವಕಾಶ ನೀಡಬೇಕು ಎಂದು ಎಂ. ಸಮೀವುಲ್ಲಾ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ಅನರ್ಹ ವಿರೋಧಿಸಿ: ಪ್ರತಿಭಟನೆ
ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಂಡಂತಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಸಂಸತ್ ಪಾವಿತ್ರ್ಯತೆಯನ್ನೇ ಬಿಜೆಪಿ ಹಾಳು ಮಾಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಧರ್ಮಗಳ ನಡುವೆ ಕಂದಕ ತೋಡುತ್ತಿರುವ ಬಿಜೆಪಿ ಸರ್ಕಾರ ಕೋಮು ಗಲಭೆಗಳನ್ನು ಸೃಷ್ಠಿಸಿ ಚುನಾವಣೆಯ ಲಾಭ ಪಡೆಯಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ಅವರದು ಹಿಟ್ಲರ್ ಸಂಸ್ಕೃತಿಯಾಗಿದೆ. ಬ್ರಿಟಿಷ್ ಸರ್ಕಾರದಲ್ಲೂ ಕೂಡ ಇಂತಹ ವಾತಾವರಣ ಇರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶಾದ್ಯಂತ ಕಸಿದುಕೊಳ್ಳುವ ಹುನ್ನಾರವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಗೋ ಬ್ಯಾಕ್ ಮೋದಿ, ತೊಲಗಲಿ ತೊಲಗಲಿ ಮೋದಿ ತೊಲಗಲಿ, ದ್ವೇಷ ರಾಜಕಾರಣ ತೊಲಗಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಉಸಿರಾಡಲಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ರಮೇಶ್ ಹೆಗ್ಡೆ, ಕೆ.ಬಿ. ಪ್ರಸನ್ನಕುಮಾರ್, ಇಸ್ಮಾಯಿಲ್ ಖಾನ್, ಎಲ್. ಸತ್ಯನಾರಾಯಣ್, ಚಂದ್ರಭೂಪಾಲ್, ಹೆಚ್.ಪಿ. ಗಿರೀಶ್, ರಂಗನಾಥ್, ಸುವರ್ಣಾ ನಾಗರಾಜ್, ಶಶಿಧರ್, ನೇತಾಜಿ, ಯು. ಶಿವಾನಂದ್, ಚಂದನ್, ಚಿನ್ನಪ್ಪ, ರಘು ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post