ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಗೆ ಭದ್ರ ಬುನಾದಿ ನೀಡಿದ ಜಿಲ್ಲೆ ಶಿವಮೊಗ್ಗವಾಗಿದ್ದು, ಶ್ರೇಷ್ಠ ನಾಯಕರನ್ನು ನೀಡಿದೆ. ಇಲ್ಲಿ ಏಳೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಪಕ್ಷದ ನಾಯಕಿ ತೇಜಸ್ವಿನಿ ಅನಂತಕುಮಾರ್ Thejaswini Ananthakumar ಹೇಳಿದ್ದಾರೆ.
ಅವರು ಇಂದು ನಗರದ ಹೊರವಲಯದ ಶುಭಶ್ರೀ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಪಕ್ಷಕ್ಕೆ ಕೇವಲ ಒಂದೇ ಸ್ಥಾನ ಇತ್ತು. ಅದು ಶಿವಮೊಗ್ಗದಿಂದ ಸಿಕ್ಕಿತ್ತು. ಪಕ್ಷಕ್ಕೆ ಕಚೇರಿ ಇರಲಿಲ್ಲ, ವಾಹನ ಇರಲಿಲ್ಲ, ಯಾವುದೇ ಸೌಲಭ್ಯಗಳು ಇಲ್ಲದಿದ್ದಾಗ ನಮ್ಮ ಪಕ್ಷದ ಹಿರಿಯರು ಸಂಘಟನಾ ಚಾತುರ್ಯದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಇದು ಕೇವಲ ಅದೃಷ್ಟದಿಂದ ಆಗಿದ್ದಲ್ಲ. ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಹೆಮ್ಮರವಾಗಿ ಬೆಳೆದಿದೆ ಎಂದರು.
Also read: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿದರೆ ಬೀಳತ್ತೆ ಈ ಕಾಯ್ದೆಯಡಿ ಕೇಸ್: ಡಿಸಿ ಸೆಲ್ವಮಣಿ ಹೇಳಿದ್ದೇನು?
ಚುನಾವಣೆ ಎಂದರೆ ಯುದ್ಧದ ಮಾದರಿ ಎಂದೇ ಎಲ್ಲರೂ ಕೆಲಸ ಮಾಡಬೇಕಿದೆ. ಪಕ್ಷ 34 ವಿಭಾಗಗಳನ್ನು ಗುರುತಿಸಿದ್ದು, ಸಣ್ಣ ಸಣ್ಣ ವಿಷಯಗಳನ್ನು ಕೂಡ ಗಮನಿಸಿ ನಿರ್ಲಕ್ಷ್ಯ ಮಾಡದೆ ಜವಾಬ್ದಾರಿಯುತವಾಗಿ ಪಕ್ಷದ ಕಾರ್ಯವನ್ನು ಶ್ರದ್ಧೆಯಿಂದ ಎಲ್ಲರೂ ಮಾಡಿದಾಗ ಗೆಲವು ಅಸಾಧ್ಯವಲ್ಲ. ನಿರ್ದಿಷ್ಟ ಗುರಿ ಇರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ಹಾಗೂ ಪ್ರತಿಯೊಬ್ಬರ ಮನಮನಗಳಿಗೆ ತಲುಪಿಸಬೇಕು. ಸರಿಯಾದ ಯೋಜನೆ ರೂಪಿಸಿ ಮತದಾರರನ್ನು ತಲುಪಬೇಕು. ಯುದ್ಧಕ್ಕೆ ಮೊದಲೇ ತಯಾರಿ ಮಾಡಿ ಹೋದಾಗ ಮಾತ್ರ ಗೆಲುವು ಸಾಧ್ಯ. ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವ ರೀತಿಯಲ್ಲಿ ಆಗದೆ ಇತ್ತೀಚಿನ ತಾಂತ್ರಿಕತೆಯ ನೆರವು ಪಡೆದು ಮತದಾರರ ಮನ ಗೆಲ್ಲಬೇಕು. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಜ್ಞಾನವನ್ನು ಕಾರ್ಯಕರ್ತರು ಬೆಳಸಿಕೊಳ್ಳಬೇಕು ಎಂದರು.
ವಿಪಕ್ಷಗಳು ಕಡ್ಡಿಯನ್ನು ಗುಡ್ಡ ಮಾಡಿ ನಿರಂತರ ಅಪಪ್ರಚಾರ ಮಾಡುತ್ತಾ ಇರುತ್ತಾರೆ. ಐರಾವತ ಕೂಡ ಅಡಿ ಇಡುವಾಗ ತಪ್ಪುತ್ತದೆ. ಹಾಗೆಯೇ ಅತಿಯಾದ ವಿಶ್ವಾಸದಿಂದ ತಪ್ಪು ಆಗದ ರೀತಿಯಲ್ಲಿ ಗಮನ ಕೊಡಬೇಕು ಎಂದರು.
ಮತದಾರರಿಗೆ ಅನುಕೂಲವಾಗುವ ಪ್ರಣಾಳಿಕೆಯನ್ನು ಸಿದ್ಧಪಡಿಸಬೇಕು. ಪ್ರತಿಯೊಂದು ಅಂಕಿ-ಅಂಶಗಳು, ಪಾರದರ್ಶಕತೆ, ನಾವೀನ್ಯ ಸಂಗತಿಗಳ ಅಳವಡಿಕೆ, ಪ್ರಧಾನಿ ಮೋದಿಯವರ ಕಾರ್ಯವೈಖರಿ, ಡಬಲ್ ಇಂಜಿನ್ ಸರ್ಕಾರದಿಂದ ಆಗುವ ಲಾಭ ಎಲ್ಲವನ್ನೂ ಜನರಿಗೆ ತಿಳಿಸಬೇಕು ಎಂದರು.
ಆರ್.ಕೆ. ಸಿದ್ದರಾಮಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷ ಬೆಳೆದು ಬಂದ ರೀತಿಯನ್ನು ಮತ್ತು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಗಿರೀಶ್ ಪಟೇಲ್, ಭಾನುಪ್ರಕಾಶ್, ಶಾಸಕರಾದ ಕುಮಾರ್ ಬಂಗಾರಪ್ಪ, ಅಶೋಕ್ ನಾಯ್ಕ, ಡಿ.ಎಸ್. ಅರುಣ್, ಜಿಲ್ಲ ಉಸ್ತುವಾರಿ ಮೋನಪ್ಪ ಭಂಡಾರಿ, ಹಾಗೂ ಪಕ್ಷದ ಎಲ್ಲಾ ಮಂಡಲಗಳ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post