ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಎಸ್.ಎ. ರಾಮದಾಸ್ ಅವರಿಗೆ ಬಿಜೆಪಿ ಟಿಕೇಟ್ ಕೈತಪ್ಪಿದ್ದು, ಅವರ ಮುಂದಿನ ನಡೆ ಏನು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಮೊದಲ ಎರಡು ಪಟ್ಟಿಯಲ್ಲಿ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗಿರಲಿಲ್ಲ. ಹೀಗಾಗಿ, ಮೂರನೆಯ ಪಟ್ಟಿಯ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಆದರೆ, ಇಂದು ಸಂಜೆ ಪ್ರಕಟಗೊಂಡಿರುವ ಮೂರನೆಯ ಪಟ್ಟಿಯಲ್ಲಿ ಕೃಷ್ಣರಾಜ ಕ್ಷೇತ್ರದಿಂದ ಶ್ರೀವತ್ಸ ಅವರಿಗೆ ಟಿಕೇಟ್ ಘೋಷಣೆ ಮಾಡಲಾಗಿದ್ದು, ರಾಮದಾಸ್ ಅವರಿಗೆ ನಿರಾಸೆ ಉಂಟಾಗಿದೆ.
ಇನ್ನು, ಬಿಜೆಪಿ ಟಿಕೇಟ್ ದೊರೆಯದ ಹಿನ್ನೆಲೆಯಲ್ಲಿ ರಾಮದಾಸ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ ಎಂದು ಹಲವು ದಿನಗಳಿಂದ ಇದ್ದ ಪ್ರಶ್ನೆಯ ಕುತೂಹಲ ಈಗ ಮತ್ತಷ್ಟು ಹೆಚ್ಚಾಗಿದೆ.
ಮೊನ್ನೆಯ ಸಭೆಯಲ್ಲೂ ಸಹ ಒತ್ತಡ
ಟಿಕೇಟ್ ದೊರೆಯುವ ಸಾಧ್ಯತೆ ಕಡಿಮೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆಯಲ್ಲಿ ರಾಮದಾಸ್ ಮಾತುಕತೆ ನಡೆಸಿದ್ದರು. ಒಂದು ವೇಳೆ ಟಿಕೇಟ್ ದೊರೆಯದೇ ಇದ್ದರೆ ಪಕ್ಷೇತರರಾಗಿ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ಆ ವೇಳೆ ಕೇಳಿ ಬಂದಿತ್ತು.
ಆ ಸಂದರ್ಭದಲ್ಲಿ ಮಾತನಾಡಿದ್ದ ರಾಮದಾಸ್, ಇದು ನನ್ನ ಕೊನೆಯ ಚುನಾವಣೆಯಾಗಿದ್ದು ಇದರಲ್ಲಿ ಗೆದ್ದು ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದೇನೆ. ಈ ಎಲ್ಲಾ ಬೆಳವಣಿಗೆಯ ನಡುವೆಯೂ ಟಿಕೆಟ್ ನೀಡದಿದ್ದರೆ ಪಕ್ಷದ ಕಾರ್ಯಕರ್ತರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗುತ್ತೇನೆ. ಆದರೆ ನಾನು ಯಾವ ಪಕ್ಷಕ್ಕೂ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇನ್ನು ಇಲ್ಲಿಗೆ ಬರುವಾಗ ದೊಡ್ಡ ಪಕ್ಷದ ನಾಯಕರು ಕರೆ ಮಾಡಿ ಅವರ ಪಕ್ಷಕ್ಕೆ ಬರುವಂತೆ ಮನವಿ ಮಾಡಿದರು. ಆದರೆ, ಎಂತಹುದ್ದೇ ಪರಿಸ್ಥಿತಿಯಲ್ಲೂ ನಾನು ಪಕ್ಷ ಬಿಡುವುದಿಲ್ಲ ಎಂದು ತಿಳಿಸಿದ್ದೇನೆ. ಕಾರ್ಯಕರ್ತರ ಜೊತೆಯಲ್ಲಿ ಮಾತನಾಡಬೇಕಿದೆ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೆ ಚರ್ಚೆ ಮಾಡಬೇಕು. ನಾನು ಮುಂದೆ ಚುನಾವಣೆ ನಿಲ್ಲುವುದಿಲ್ಲ. ಟಿಕೆಟ್ ನೀಡಲಿ ಬಿಡಿ. ಟಿಕೆಟ್ ನೀಡದಿದ್ದರೆ ಕಾರ್ಯಕರ್ತರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದವಾಗುತ್ತೇನೆ ಎಂದಿದ್ದರು.
ಇನ್ನು, ಟಿಕೇಟ್ ದೊರೆಯದೇ ಇದ್ದರೆ ಪಕ್ಷೇತರರಾಗಿ ಕಣಕ್ಕಿಳಿಯಬೇಕು ಎಂದು ನೆರೆದಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮದಾಸ್ ಅವರು ನಿಮ್ಮನ್ನು ಕೇಳಿಯೇ ಎಲ್ಲ ನಿರ್ಧಾರ ಕೈಗೊಳ್ಳುತ್ತೇನೆ. ವರಿಷ್ಠರಿಗೆ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟಿದ್ದೇನೆ. ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಅವರ ಮಾತಿಗೆ ಬೆಲೆ ನೀಡಿ ಸ್ವಲ್ಪ ಕಾಯೋಣ. ಟಿಕೇಟ್ ಘೋಷಣೆಯಾಗದೇ ಇದ್ದರೆ ಆನಂತರ ಎಲ್ಲರೂ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದು ಹೇಳುವ ಮೂಲಕ ಪಕ್ಷೇತರರಾಗಿ ಕಣಕ್ಕಿಳಿಯುವ ಸೂಚನೆಯನ್ನು ಪರೋಕ್ಷವಾಗಿ ನೀಡಿದ್ದರು.
ಆದರೆ, ಈಗ ಟಿಕೇಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ? ಅಥವಾ ಅವರ ಮುಂದಿನ ನಡೆಯೇನು ಎಂಬ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post