ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಮತದಾನ ಎಲ್ಲರಿಗೂ ದೊರೆತಿರುವ ಸಾಂವಿಧಾನಿಕ ಹಕ್ಕಾಗಿದ್ದು, ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಹೇಳಿದರು.
ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಹಾಗೂ ತಾಲೂಕು ಆಡಳಿತ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಸೋಮವಾರ ಮತದಾನ ಜಾಗೃತಿ ಮೂಡಿಸುವ ಅಂಗವಾಗಿ ನಗರದ ಬೆಳಗಲ್ ಕ್ರಾಸ್‍ನಿಂದ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಹಬ್ಬವಾದ ಮತದಾನದಲ್ಲಿ ಎಲ್ಲರೂ ಭಾಗಿಯಾಗಬೇಕು. ಯಾವುದೇ ಆಮಿಷಕ್ಕೆ ಒಳಗಾಗದೇ ಎಲ್ಲರೂ ಮತ ಚಲಾಯಿಸಬೇಕು. ಯಾರೂ ಮತದಾನದಿಂದ ತಪ್ಪಿಸಬಾರದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮತದಾನ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
Also read: ಅಬಕಾರಿ ಇಲಾಖೆ ಕಾರ್ಯಾಚರಣೆ: 31ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ
ಮತದಾನ ಜಾಗೃತಿ ಮೂಡಿಸುವ ಅಂಗವಾಗಿ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯು ನಗರದ ಬೆಳಗಲ್ ಕ್ರಾಸ್‍ನಿಂದ ಆರಂಭವಾಗಿ ಕೌಲ್‍ಬಜಾರ್ ಮೂಲಕ ಮೊದಲನೇ ರೈಲ್ವೇ ಗೇಟ್ ಬಳಿ ಮುಕ್ತಾಯವಾಗಿತು.
ಪಂಜಿನ ಮೆರವಣಿಗೆಯಲ್ಲಿ ಓಟ್ ಮಾಡಿದವನೇ ಹೀರೋ, ನಿಮ್ಮ ಮತ – ನಿಮ್ಮ ಭವಿಷ್ಯ, ಜನ ಸಾಮಾನ್ಯರ ಶಕ್ತಿ ಮತ ಚಲಾವಣೆ, ಮತದಾನ ಮಾಡಿದವನೇ ಶೂರ, ಪ್ರಜಾಪ್ರಭುತ್ವ ನಮ್ಮಿಂದ ಮತದಾನ ಹೆಮ್ಮೆಯಿಂದ ಎನ್ನುವ ಮತದಾನ ಜಾಗೃತಿ ಮೂಡಿಸುವ ಮಾಹಿತಿ ಫಲಕಗಳು ಸಾರ್ವಜನಿಕರ ಗಮನ ಸೆಳೆದವು.
ಈ ಸಂದರ್ಭದಲ್ಲಿ ಜಿಪಂ ಯೋಜನಾ ನಿರ್ದೇಶಕ ಪ್ರಮೋದ್ ಸೇರಿದಂತೆ ಬಳ್ಳಾರಿ ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post