ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ಪುರದೈವ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ #Rathotsava ಶುಕ್ರವಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಹಾಗೂ ಪಟ್ಟಣದ ಪ್ರಮುಖ ಬೀದಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್ ಮರಾಠೆ ಅವರು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು. ರಥೋತ್ಸವಕ್ಕೆ ತಹಶೀಲ್ದಾರ್ ಹುಸೇನ್ ಸರಕಾವಸ್ ಚಾಲನೆ ನೀಡಿದರು. ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ಉತ್ತುತ್ತು, ಕಾಳು ಮೆಣಸು ಬೀರುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ರಥವು ಶಿಥಿಲಗೊಂಡಿರುವುದರಿಂದ ತಜ್ಞರ ಸಲಹೆಯಂತೆ ದೇವಸ್ಥಾನದ ಮುಂಭಾಗದಿಂದ ಕೇವಲ ಒಂದು ನೂರು ಅಡಿಯಷ್ಟು ಮಾತ್ರ ರಥವನ್ನು ಎಳೆಯಲಾಯಿತು. ನೂತನ ರಥ ಈ ಬಾರಿಯ ರಥೋತ್ಸವಕ್ಕೆ ನಿರ್ಮಾಣವಾಗಬಹುದು ಎಂಬ ಆಶಾಭಾವನೆ ಹೊಂದಿದ್ದ ಭಕ್ತರಿಗೆ ನಿರಾಶೆಯಾಯಿತು. ರಥ ಹಾದು ಹೋಗುವ ಮಾರ್ಗದಲ್ಲಿ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಿಕ್ಕಪೇಟೆ ಮಾರ್ಗದಲ್ಲಿ ಏಕ ಮುಖ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದ್ದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಲಿಲ್ಲ.
ಭಕ್ತರಿಂದ ವಿಹಿಂಪ- ಬಜರಂಗದಳ ಕಾರ್ಯಕರ್ತರಿಗೆ ಅಭಿನಂದನೆ
ದೇವಸ್ಥಾನವು ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಭಕ್ತರಿಗಾಗಿ ಪ್ರತಿ ವರ್ಷ ಆಯೋಜಿಸುತಿದ್ದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಸ್ಥಗಿತ ಗೊಳಿಸಿದ್ದು ಜನರಲ್ಲಿ ಬೇಸರ ತರಿಸಿತು, ದೇವಸ್ಥಾನದ ಪಕ್ಕದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಪಾನಕ ಪ್ರಸಾದ ವಿತರಣೆ ಮಾಡುವ ಮೂಲಕ ಬಿಸಿಲಿನ ಬೇಗೆ ಇಂದ ಬಳಲಿದ್ದ ಭಕ್ತಾದಿಗಳ ಬಾಯಾರಿಕೆ ನೀಗಿಸಿದರು. ಇದು ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರವಾಯಿತು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post