ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ವಿಧಾನಸಭೆ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ ಹಾಗೂ ಕಂಪ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಗಟ್ಟೆ ಸಿಬ್ಬಂದಿಗಳಿಗೆ ಮತ ಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಬಳ್ಳಾರಿ ನಗರದ ವಿವಿಧೆಡೆ ಮಂಗಳವಾರದಂದು ಅಚ್ಚುಕಟ್ಟಾಗಿ ನೆರವೇರಿದ್ದು, ಮತದಾನ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿ, ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದರು.
91-ಕಂಪ್ಲಿ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಕಾರ್ಯ ನಗರದ ಸುಧಾಕ್ರಾಸ್‍ನ ಸೆಂಟ್ ಫಿಲೊಮೀನಾಸ್ ಹೈಸ್ಕೂಲ್ ಆವರಣದಲ್ಲಿ ನಡೆಯಿತು, ಚುನಾವಣಾಧಿಕಾರಿ ಡಾ. ನಯನ ಅವರು ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಮಸ್ಟರಿಂಗ್ ಕಾರ್ಯ ಸುಗಮವಾಗಿ ನಡೆಯಲು ವ್ಯವಸ್ಥೆಗೊಳಿಸಿದ್ದರು. 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಕಾರ್ಯ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಆವರಣದಲ್ಲಿ ನೆರವೇರಿತು, ಚುನಾವಣಾಧಿಕಾರಿ ಹೇಮಂತ್ ಅವರು ಸ್ಥಳದಲ್ಲಿಯೇ ಹಾಜರಿದ್ದು, ಮಸ್ಟರಿಂಗ್ ಕಾರ್ಯ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಂಡರು. ಇನ್ನು 94-ಬಳ್ಳಾರಿ ನಗರ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಕಾರ್ಯ ನಗರದ ಕೋಟೆ ಪ್ರದೇಶದ ಸೆಂಟ್ ಜಾನ್ಸ್ ಕಂಪೋಸಿಟ್ ಜ್ಯೂನಿಯರ್ ಕಾಲೇಜ್‍ನಲ್ಲಿ ಮಂಗಳವಾರ ಅಚ್ಚುಕಟ್ಟಾಗಿ ಜರುಗಿತು. ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಚುನಾವಣಾಧಿಕಾರಿ ರುದ್ರೇಶ್ ಅವರು ಬೆಳಿಗ್ಗೆಯಿಂದಲೇ ಹಾಜರಿದ್ದು, ಮಸ್ಟರಿಂಗ್ ಕಾರ್ಯ ಪೂರ್ಣಗೊಳ್ಳುವವರೆಗೂ ಮೇಲುಸ್ತುವಾರಿ ವಹಿಸಿದ್ದರು.

ಮಾರ್ಗದರ್ಶನ ಮಾಡಿದ ಡಿಸಿ: ಮಸ್ಟರಿಂಗ್ ಕಾರ್ಯ ಜರುಗಿದ ಕಾಲೇಜುಗಳ ಆವರಣಕ್ಕೆ ಬೆಳಿಗ್ಗೆಯೇ ಆಗಮಿಸಿದ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು, ಮಸ್ಟರಿಂಗ್ ಕಾರ್ಯದ ಸಮಗ್ರ ವಿವರವನ್ನು ಪಡೆದುಕೊಂಡರು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಯಾವುದೇ ಆತಂಕವಿಲ್ಲದೆ, ಧೈರ್ಯದಿಂದ ಹಾಗೂ ಪ್ರಾಮಾಣಿಕತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸುವಂತೆ ನೈತಿಕ ಸ್ಥೈರ್ಯ ತುಂಬಿದರು.

Also read: ಮೇ 13ರಂದು ಶಿವಮೊಗ್ಗದ ಈ ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧ: ಹೀಗಿದೆ ಬದಲಿ ಮಾರ್ಗ
1222 ಮತಗಟ್ಟೆಗಳು: ಜಿಲ್ಲೆಯಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ 676 ಮತಗಟ್ಟೆ ಕೇಂದ್ರ, ನಗರ, ಪಟ್ಟಣ ಪ್ರದೇಶದಲ್ಲಿ 515 ಮತಗಟ್ಟೆ ಕೇಂದ್ರಗಳು ಸೇರಿ ಒಟ್ಟು 1,222 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಂಪ್ಲಿ-240, ಸಿರಗುಪ್ಪ-227, ಬಳ್ಳಾರಿ ಗ್ರಾಮೀಣ-242, ಬಳ್ಳಾರಿ ನಗರ-262 ಹಾಗೂ ಸಂಡೂರು ಕ್ಷೇತ್ರದಲ್ಲಿ 251 ಮತಗಟ್ಟೆಗಳಿವೆ. ಜಿಲ್ಲೆಯ 5 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 295 ಸೂಕ್ಷ್ಮ ಹಾಗೂ 73 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ 1,222 ಮತಗಟ್ಟೆಗಳಿಗೆ 2445 (ಬ್ಯಾಲೆಟ್ ಯುನಿಟ್), 1716 (ಕಂಟ್ರೋಲ್ ಯುನಿಟ್) ಮತ್ತು 1857 (ವಿ.ವಿ.ಪ್ಯಾಟ್)ಗಳನ್ನು ಬಳಸಲಾಗುತ್ತಿದೆ. ಜಿಲ್ಲೆಯ ಒಟ್ಟು 1,222 ಮತಗಟ್ಟೆಗಳ ಪೈಕಿ 700 ಮತಗಟ್ಟೆಗಳಿಗೆ ಅಂದರೆ ಶೇ. 50 ಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಿ, ಸಿಸಿ ಟಿವಿ ಕ್ಯಾಮೆರಾ ಮೂಲಕ ನೇರವಾಗಿ ಲೈವ್ ವಿಡಿಯೋ ನೋಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಭದ್ರತೆಗೆ ವ್ಯವಸ್ಥೆ: ಮತದಾನ ದಿನದಂದು ಮತಗಟ್ಟೆಗಳಿಗೆ ಭದ್ರತೆಯನ್ನು ಒದಗಿಸಲು, 1 ಎಸ್‍ಪಿ, 1 ಡಿವೈಎಸ್‍ಪಿ, 22 ಸಿಪಿಐ/ಪಿಐ, 44 ಪಿಎಸ್‍ಐ, 116 ಎಎಸ್‍ಐ, 952 ಹೆಚ್‍ಸಿ ಮತ್ತು ಪಿಸಿ, 591 ಗೃಹ ರಕ್ಷಕ ದಳ ಸಿಬ್ಬಂದಿ, 4 ಜನ ಅರಣ್ಯ ಸಿಬ್ಬಂದಿ ಸೇರಿ ಒಟ್ಟು 1,738 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅದರಲ್ಲಿ ಜಿಲ್ಲೆಯವರು 741, ಹೊರಗಿನವರು 922, ಡಿಎಆರ್ ಸಿಬ್ಬಂದಿ 75, ಸಿಎಪಿಎಫ್ 12, ಕೆಎಸ್‍ಆರ್‍ಪಿ 5 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
11,52,411 ಮತದಾರರು: ಜಿಲ್ಲೆಯಲ್ಲಿ 5,67,319 ಪುರುಷ ಮತದಾರರು ಮತ್ತು 5,84,920 ಮಹಿಳಾ ಮತದಾರರು, 172 ತೃತೀಯ ಲಿಂಗಿ ಮತದಾರರು ಸೇರಿ ಒಟ್ಟು 11,52,411 ಮತದಾರರು ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 39,359 ಯುವ ಮತದಾರರು ಪ್ರಥಮ ಬಾರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.
ಮತದಾನ ಕಾರ್ಯ ಮೇ. 10 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಡೆಯಲಿದ್ದು, ಸುಗಮ ಮತದಾನಕ್ಕೆ ಅಗತ್ಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. ಮತದಾರರು ತಪ್ಪದೆ ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತಾಗಲಿ ಎಂಬುದು ಜಿಲ್ಲಾಡಳಿತದ ಆಶಯವಾಗಿದೆ.










Discussion about this post