ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2023ನೆಯ ರಾಜ್ಯ ವಿಧಾನಸಭಾ ಚುನಾವಣೆಗೆ #AssemblyElection ಮತದಾನ ಮುಕ್ತಾಯವಾಗಿದ್ದು, ಮೇ 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಇದರ ನಡುವೆಯೇ ಯಾರು ಎಷ್ಟು ಮತ ಪಡೆಯುತ್ತಾರೆ ಎಂಬುದು ಸೇರಿದಂತೆ ಸೋಲು ಗೆಲುವಿನ ಲೆಕ್ಕಾಚಾರ ಭರ್ಜರಿಯಾಗಿಯೇ ಸಾಗಿದೆ. ಈ ಸಂದರ್ಭದಲ್ಲಿ ಶಿವಮೊಗ್ಗ #Shivamogga ಜಿಲ್ಲೆಯಲ್ಲಿ ಮೊಟ್ಟ ಮೊದಲ ಚುನಾವಣೆ ನಡೆದಿದ್ದು ಯಾವಾಗ? ಗೆಲುವು ಸಾಧಿಸಿ, ಅಂದು ಜಿಲ್ಲೆಯಲ್ಲಿ ಎಷ್ಟು ವಿಧಾನಸಭಾ ಕ್ಷೇತ್ರಗಳಿತ್ತು? ಯಾರೆಲ್ಲಾ ಮೊದಲ ಶಾಸಕರಾಗಿದ್ದು ಯಾರು? ಎಷ್ಟು ಮತ ಪಡೆದಿದ್ದರು ಎಂಬ ಕುತೂಹಲಕಾರಿ ಮಾಹಿತಿಯನ್ನು ಕಲ್ಪ ನ್ಯೂಸ್ ಓದುಗರಿಗಾಗಿ ಪ್ರಕಟಿಸುತ್ತಿದ್ದೇವೆ.
ಯಾವಾಗ ನಡೆದಿತ್ತು ಮೊದಲ ಚುನಾವಣೆ?
ಆಗಿನ್ನೂ ಕರ್ನಾಟಕ ರಾಜ್ಯ ಎಂಬುದು ಉದಯವಾಗಿರಲಿಲ್ಲ. ಆಗ ಮೈಸೂರು ರಾಜ್ಯ#MysoreState ಎಂಬುದಾಗಿತ್ತು. 1951ಕ್ಕೆ ಅನ್ವಯವಾಗುವಂತೆ 27-03-1952ರಂದು ಮೊಟ್ಟ ಮೊದಲ ವಿಧಾನಸಭಾ ಚುನಾವಣೆ ನಡೆದಿತ್ತು.
ಆ ಸಮಯದಲ್ಲಿ ಇಂದಿನ ಶಿವಮೊಗ್ಗದ ವ್ಯಾಪ್ತಿಗೆ ಶಿವಮೊಗ್ಗ, ಭದ್ರಾವತಿ, ಚನ್ನಗಿರಿ, ಹೊನ್ನಾಳಿ, ಸಾಗರ-ಹೊಸನಗರ, ಸೊರಬ-ಶಿಕಾರಿಪುರ, ತೀರ್ಥಹಳ್ಳಿ-ಕೊಪ್ಪ, ಸೇರಿತ್ತು. ಈ ಎಲ್ಲ ಕ್ಷೇತ್ರಗಳಲ್ಲಿ 1951ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಮತ ಚಲಾವಣೆಯಾಗಿತ್ತು? ಯಾರು ಗೆದ್ದಿದ್ದರು ಎಂಬ ಮಾಹಿತಿ ಇಲ್ಲಿದೆ.
ಶಿವಮೊಗ್ಗ
1952ರಲ್ಲಿ ಶಿವಮೊಗ್ಗ #Shivamogga ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 40,541 ಮತದಾರರಿದ್ದು, ಅಂದಿನ ಚುನಾವಣೆಯಲ್ಲಿ ಒಟ್ಟು 21,711(ಶೇ.53.55) ಮತ ಚಲಾವಣೆಯಾಗಿತ್ತು.
ಐಎನ್’ಸಿಯಿಂದ ಸ್ಪರ್ಧಿಸಿದ್ದ ಎಸ್.ಆರ್. ನಾಗಪ್ಪ ಶೆಟ್ಟಿ ಅವರು 10,069 ಮತಗಳನ್ನು ಪಡೆದು ಗೆಲುವು ಸಾಧಿಸಿ, ಶಿವಮೊಗ್ಗ ಮೊಟ್ಟ ಮೊದಲ ಶಾಸಕರು ಎಂಬ ಗರಿಯನ್ನು ಮುಡಿಗೇರಿಸಿಕೊಂಡಿದ್ದರು. ಎಸ್’ಪಿ ಯಿಂದ ಸ್ಪರ್ಧಿಸಿದ್ದ ಎಂ.ಸಿ. ಮಹೇಶ್ವರಪ್ಪ ಅವರು 4,203 ಮತಗಳನ್ನು ಪಡೆದಿದ್ದರು. ನಾಗಪ್ಪ ಶೆಟ್ಟಿ ಅವರು 5,866 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಭದ್ರಾವತಿ
1952ರಲ್ಲಿ ಭದ್ರಾವತಿ #Bhadravathi ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 40,674 ಮತದಾರರಿದ್ದು, ಅಂದಿನ ಚುನಾವಣೆಯಲ್ಲಿ 20,203 ಮತಗಳು ಚಲಾವಣೆಯಾಗಿದ್ದವು.
ಐಎನ್’ಸಿಯಿಂದ ಸ್ಪರ್ಧಿಸಿದ್ದ ಬಿ. ಮಾಧವಾಚಾರ್ ಅವರು 10,241 ಮತಗಳನ್ನು ಪಡೆಯುವ ಮೂಲಕ ಕ್ಷೇತ್ರದ ಮೊದಲ ಶಾಸಕರಾದರು. ಎಸ್’ಪಿಯಿಂದ ಸ್ಪರ್ಧಿಸಿದ್ದ ಕೆ.ಎಸ್. ರಾಮಚಂದ್ರ ಶೆಟ್ಟಿ ಅವರು 5119 ಮತಗಳನ್ನು ಪಡೆದಿದ್ದರು. ಮಾಧವಾಚಾರ್ ಅವರ ಗೆಲುವಿನ ಅಂತರ 5122 ಮತಗಳಾಗಿತ್ತು.
ತೀರ್ಥಹಳ್ಳಿ-ಕೊಪ್ಪ
ಇಂದು ಚಿಕ್ಕಮಗಳೂರು #Chikkamagalur ಜಿಲ್ಲೆಗೆ ಸೇರಿರುವ ಕೊಪ್ಪ #Koppa ಅಂದು ತೀರ್ಥಹಳ್ಳಿ #Thirthahalli ವಿಧಾನಸಭಾ ಕ್ಷೇತ್ರದೊಂದಿಗೆ ಸೇರಿಕೊಂಡಿತ್ತು. ಆಗ ಒಟ್ಟು 39,480 ಮತದಾರರಿದ್ದು, ಆ ಚುನಾವಣೆಯಲ್ಲಿ 27,827(ಶೇ.70.48) ಮತಗಳು ಚಲಾವಣೆಯಾಗಿತ್ತು.
ಐಎನ್’ಸಿಯಿಂದ ಸ್ಪರ್ಧಿಸಿದ್ದ ಕಡಿದಾಳ್ ಮಂಜಪ್ಪ ಅವರು 16,570 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಬಿಜೆಎಸ್’ನಿಂದ ಸ್ಪರ್ಧಿಸಿದ್ದ ಕೆ. ರಾಮಕೃಷ್ಣರಾವ್ ಅವರು 7,552 ಮತಗಳನ್ನು ಪಡೆದಿದ್ದರು. ಮಂಜಪ್ಪ ಅವರ ಗೆಲುವಿನ ಅಂತರ 9018 ಮತಗಳಾಗಿತ್ತು.
ಚನ್ನಗಿರಿ
ಇಂದು ದಾವಣಗೆರೆ #Davanagere ಜಿಲ್ಲೆಗೆ ಸೇರಿರುವ ಚನ್ನಗಿರಿ #Channagiri ಅಂದು ಶಿವಮೊಗ್ಗ ವ್ಯಾಪ್ತಿಯಲ್ಲಿತ್ತು. ಆಗ ಕ್ಷೇತ್ರದಲ್ಲಿ ಒಟ್ಟು 42,991 ಮತಗಳಿದ್ದು, 33,727(ಶೇ.78.45) ಮತಗಳು ಚಲಾವಣೆಯಾಗಿದ್ದವು.
ಕೆಎಂಪಿಪಿಯಿಂದ ಸ್ಪರ್ಧಿಸಿದ್ದ ಎಲ್. ಸಿದ್ದಪ್ಪ ಅವರು 17,297 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಐಎನ್’ಸಿಯಿಂದ ಸ್ಪರ್ಧಿಸಿದ್ದ ಕುಂದರ್ ರುದ್ರಪ್ಪ ಅವರು 16,430 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಸಿದ್ದಪ್ಪ ಅವರ ಗೆಲುವಿನ ಅಂತರ ಕೇವಲ 867 ಮತಗಳಾಗಿತ್ತು.
ಹೊನ್ನಾಳಿ
ಇಂದು ದಾವಣಗೆರೆ ಜಿಲ್ಲೆಗೆ ಸೇರಿರುವ ಹೊನ್ನಾಳಿಯೂ #Honnali ಸಹ ಅಂದು ಶಿವಮೊಗ್ಗ ವ್ಯಾಪ್ತಿಯಲ್ಲಿತ್ತು. ಆಗ ಕ್ಷೇತ್ರದಲ್ಲಿ ಒಟ್ಟು 39,175 ಮತಗಳಿದ್ದು, ಅಂದಿನ ಚುನಾವಣೆಯಲ್ಲಿ 29,012(ಶೇ.74.06) ಮತಗಳು ಚಲಾವಣೆಯಾಗಿದ್ದವು.
ಐಎನ್’ಸಿಯಿಂದ ಸ್ಪರ್ಧಿಸಿದ್ದ ಎಚ್.ಎಸ್. ರುದ್ರಪ್ಪ ಅವರು 16,848 ಮತಗಳನ್ನು ಪಡೆದು ಜಯಶಾಲಿಯಾಗಿದ್ದರೆ, ಸ್ವತಂತ್ರವಾಗಿ ಸ್ಪರ್ಧಿಸಿದ್ದ ಪಟ್ಣಶೆಟ್ರ ಮುರಿಗೆಪ್ಪ ಅವರು 12,164 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ರುದ್ರಪ್ಪ ಅವರ ಗೆಲುವಿನ ಅಂತರ 4684 ಮತಗಳಾಗಿತ್ತು.
ಸೊರಬ-ಶಿಕಾರಿಪುರ
ಆಗ ಸೊರಬ-ಶಿಕಾರಿಪುರ #Shikaripura ಕ್ಷೇತ್ರ ಒಟ್ಟು ಎರಡು ಸ್ಥಾನಗಳನ್ನು ಹೊಂದಿತ್ತು. ಈ ಕ್ಷೇತ್ರಕ್ಕೆ ಸಂಬಂಧಿಸಿದ ಮತದಾರರ ಸಂಖ್ಯೆಯ ವಿವರ ಅಷ್ಟೊಂದು ಸ್ಪಷ್ಟವಾಗಿ ಲಭ್ಯವಿಲ್ಲ. ಆದರೆ, ಒಟ್ಟು 74,314 ಮತದಾರರಿದ್ದರು ಎನ್ನಲಾಗಿದೆ.
ಅಂದಿನ ಚುನಾವಣೆಯಲ್ಲಿ ಐಎನ್’ಸಿಯಿಂದ ಸ್ಪರ್ಧಿಸಿದ್ದ ಎಚ್. ಸಿದ್ಧಯ್ಯ ಅವರು 20, 737 ಹಾಗೂ ಇನ್ನೊಂದು ಸ್ಥಾನಕ್ಕೆ ಐಎನ್’ಸಿಯಿಂದ ಸ್ಪರ್ಧಿಸಿದ್ದ ಗಂಗಾ ನಾಯಕ್ ಅವರು 19,519 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
ಸಾಗರ-ಹೊಸನಗರ
ಒಟ್ಟು 38,527 ಮತಗಳನ್ನು ಹೊಂದಿದ್ದ ಈ ಕ್ಷೇತ್ರದಲ್ಲಿ ಅಂದಿನ ಚುನಾವಣೆಯಲ್ಲಿ 25,207(ಶೇ.65.43) ಮತ ಚಲಾವಣೆಯಾಗಿತ್ತು.
ಎಸ್’ಪಿಯಿಂದ ಸ್ಪರ್ಧಿಸಿದ್ದ ಎಸ್. ಗೋಪಾಲಗೌಡ ಅವರು 13,722 ಮತಗಳನ್ನು ಪಡೆದು ಗೆಲುವು ಸಾಧಿಸಿ, ಕ್ಷೇತ್ರದ ಮೊದಲ ಶಾಸಕರು ಎನಿಸಿಕೊಂಡರೆ, ಐಎನ್’ಸಿಯಿಂದ ಸ್ಪರ್ಧಿಸಿದ್ದ ಎ.ಆರ್. ಬದ್ರಿ ನಾರಾಯಣ ಅವರು 11,485 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಗೆಲುವಿನ ಅಂತರ 2237 ಮತಗಳಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post