ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಾಸಕ ಎಂಬ ಹೆಸರು ನಿಮಿತ್ತ ಮಾತ್ರ. ಸೇವಕ ಎಂಬುದೇ ನಿಜವಾದ ಅರ್ಥ. ನಾನು ಜನಸೇವಕನಾಗಿ ಮತದಾರರ ಋಣ ತೀರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದ ನೂತನ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) MLA Channabasappa ಹೇಳಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನನ್ನು ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ, ಹಗಲಿರುಳು ಕೆಲಸ ಮಾಡಿದ ಕಾರ್ಯಕರ್ತರಿಗೆ, ನನಗೆ ಮಾರ್ಗದರ್ಶನ ಮಾಡಿದ ಪಕ್ಷದ ಹಿರಿಯರಿಗೆ, ಸಂಘ ಪರಿವಾರದವರಿಗೆ, ರಾಜ್ಯ, ರಾಷ್ಟ್ರದ ನಾಯಕರಿಗೆ ನನ್ನ ಅಭಿನಂದನೆಗಳು ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿಲ್ಲ ನಿಜ. ಬಿಜೆಪಿಗೆ ಸೋಲು ಇದೇ ಮೊದಲಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ ನಮ್ಮ ನಾಯಕರು ಈಗ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಕಾರ್ಯಕರ್ತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಈಗಾಗಲೇ ಶಿವಮೊಗ್ಗ ನಗರದ ಅಭಿವೃದ್ಧಿ ಆಗಿದೆ. ಇನ್ನೂ ಆಗಬೇಕಾದದ್ದಿದೆ. ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಯ ಕಡೆ ಗಮನಹರಿಸುತ್ತೇನೆ. ಹಿಂದುತ್ತ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೇ ತೆಗೆದುಕೊಂಡು ಹೋಗುವೆ. ಶಿವಮೊಗ್ಗಕ್ಕೆ ಶಾಂತಿ ಬೇಕು ಎಂಬುದು ನಿಜ. ಆದರೆ ಅದು ಎಲ್ಲಾ ಸಮುದಾಯದ ಕಡೆಯಿಂದ ಬರಬೇಕು. ನಾವು ಯಾವತ್ತೂ ಶಾಂತಿಯನ್ನು ಕದಡಲು ಹೋಗಲ್ಲ. ಹೋಗುವುದೂ ಇಲ್ಲ. ಒಟ್ಟಾರೆ ಮತದರರ ಋಣ ತೀರಿಸುವಂತಹ ಕೆಲಸ ಮಾಡುತ್ತೇನೆ. ಅವರು ನನಗೆ ಮತದಾನ ಮಾಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ. ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲಿ ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ಸಂತೋಷ್ ಜಿ. ಅವರು ಪಕ್ಷವನ್ನು ಕಟ್ಟಿ ಬೆಳೆಸಿದವರು. ಸಂಘಟನೆಯ ಹರಿಕಾರರು, ರಾಷ್ಟ್ರ ಭಕ್ತರು. ಇಂತಹವರಿಗೆ ಅವಹೇಳನ ಮಾಡುತ್ತಿರುವುದು ಸರಿಯಲ್ಲ. ಬಿಜೆಪಿ ನಾಯಕರೂ ಕೂಡ ಅವರ ಬಗ್ಗೆ ಮಾತನಾಡಿದರೆ ಅದೂ ತಪ್ಪಾಗುತ್ತದೆ. ಸಂತೋಷ್ ಜಿ. ಅವರನ್ನು ಪ್ರಶ್ನೆ ಮಾಡುವವರು ಬಿಜೆಪಿಯಲ್ಲಿ ಇರಬಾರದು ಎಂದ ಅವರು, ಟೀಕೆ ಮಾಡುವವರು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದೆ ಹೋದಲ್ಲಿ ಅವರ ಬಗ್ಗೆ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ನಾಗರಾಜ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ,. ಬಾಲು, ಮೋಹನ್ ರೆಡ್ಡಿ, ಮಂಜುನಾಥ್ ಇದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post