ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಶ್ರೀ ಸತ್ಯಸಂಧ ತೀರ್ಥ ಗುರುಗಳ ಆರಾಧನೆಯು ಮೇ 21ರ ಭಾನುವಾರ ಮಹಿಷಿ ಕ್ಷೇತ್ರದಲ್ಲಿ ನಡೆಯಲಿದ್ದು, ಇಂದು ಪೂರ್ವಾರಾಧನೆಯ ನಿಮಿತ್ತ ಭಕ್ತಿಯ ಚಿಂತನೆ.
ಶ್ರೀಶ್ರೀಸತ್ಯಸಂಧ ತೀರ್ಥ ಗುರುಗಳ ಮಹಿಮೆಗಳು:
ಶ್ರೀಸತ್ಯಸಂಧ ತೀರ್ಥ ಗುರುಗಳವರು ಸಂಚಾರ ಮಾಡುತ್ತಾ ಪಂಢರಾಪುರಕ್ಕೆ ಬಂದಾಗ ಪಾಂಡುರಂಗ ವಿಠಲನು ಸ್ವತಃ ವೃದ್ಧ ಬ್ರಾಹ್ಮಣನ ವೇಷದಲ್ಲಿ ಬಂದು ಶ್ರೀಸತ್ಯಸಂಧ ತೀರ್ಥರಿಂದ ತಪ್ತಮುದ್ರೆಯನ್ನು ಧಾರಣೆ ಮಾಡಿಸಿಕೊಂಡನೆಂದು ಶ್ರೀಗಳವರ ಚರಿತ್ರೆಯಿಂದ ತಿಳಿದು ಬರುತ್ತದೆ.
ಆಂಧ್ರದ ವಿಜಯವಾಡದಲ್ಲಿ ಬಹುದೊಡ್ಡ ಮಠದ ಕಟ್ಟಡವನ್ನು ಸಂಪಾದಿಸಿದ್ದಾರೆ. ಅಲ್ಲಿ ಶ್ರೀ ಪ್ರಾಣದೇವರನ್ನು ಪ್ರತಿಷ್ಠಾಪಿಸಿದ್ದಾರೆ. ರಾಜಮಹೇಂದ್ರಿಯಲ್ಲಿ ಶ್ರೀನರಸಿಂಹದೇವರ, ಶ್ರೀ ಪ್ರಾಣದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ.
ಆಂಧ್ರದ ಪೂರ್ವ ಕರಾವಳಿ ಉದ್ದಕ್ಕೆ ಬಹಳಷ್ಟು ಪ್ರಾಣ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ಕೀರ್ತಿ ಇವರದು. ಶ್ರೀಗಳವರ ಕಾಲದಲ್ಲೇ ಗೋಹತ್ಯೆಶಾಸ್ತ್ರ ನಿಷಿದ್ಧವೆಂದೂ, ಸಕಲ ದೇವತೆಗಳ ಆವಾಸ ಸ್ಥಾನವಾದ ಗೋಮಾತೆಯ ಹತ್ಯೆ ಪಾಪಕರವಾದದ್ದೆಂದೂ ಪ್ರತಿಪಾದಿಸಿದ ಮಹಾನುಭಾವರು. ಇದನ್ನುಪಿಷ್ಟ ಮೀಮಾಂಸಾ ಎಂಬ ಗ್ರಂಥದಲ್ಲಿ ತಿಳಿಸಿದ್ದಾರೆ.
ಶ್ರೀಗಳವರಿಗೆ ತುಳಜಾ ಭವಾನಿ ದೇವಿಯವರ ದರ್ಶನವಾದ ಮಹಿಮೆ. ಒಮ್ಮೆ ಒಬ್ಬ ಶಿಷ್ಯ ಶ್ರೀಗಳವರಲ್ಲಿ ಬಂದು ತಾನು ತುಳಜಾ ಭವಾನಿ ಅಮ್ಮನವರು ದರ್ಶನಕ್ಕೆ ಹೋಗಬೇಕೆಂದು ಅನುಗ್ರಹ ಮಂತ್ರಾಕ್ಷತೆ ಕೇಳುತ್ತಾನೆ. ಶ್ರೀಸತ್ಯಸಂಧತೀರ್ಥರು ತುಳಜಾಪುರಕ್ಕೆ ತುಳಜಾಭವಾನಿಯ ದರ್ಶನಕ್ಕೆ ಚಾತುರ್ಮಾಸ್ಯ ವ್ರತ ಮುಗಿದ ಮೇಲೆ ನಾವೂ ಬರುತ್ತೇವೆ ಹೋಗೋಣ ಎಂತ ಹೇಳುತ್ತಾರೆ. ಏಕೆಂದರೆ ಶ್ರೀಮೂಲರಾಮಚಂದ್ರ ದೇವರು ಸೊಲ್ಲಾಪುರದಲ್ಲೇ ಇರಬೇಕಾದರೆ ಭೂದುರ್ಗ, ಮಹಾಲಕ್ಷ್ಮೀ ಸನ್ನಿಧಾನಳಾದ ತುಳಜಾ ಭವಾನಿ ಇಲ್ಲೇ ಬರುತ್ತಾಳೆ. ಆದ್ದರಿಂದ ನೀನು ಈಗ ಹೋಗುವುದು ಬೇಡ ಎಂದು ಹೇಳುತ್ತಾರೆ. ಆ ಶಿಷ್ಯನು ಶ್ರೀಗಳವರ ಮಾತು ಕೇಳದೇ ಇಲ್ಲ ಗುರುಗಳೇ ನಮ್ಮ ಕುಲದೇವಿಯ ದರ್ಶನ ಮಾಡಲೇಬೇಕು ಎಂದು ಹೇಳಿ ಹೊರಡುತ್ತಾನೆ. ಆ ಶಿಷ್ಯನಿಗೆ ತನ್ನ ಸುತ್ತ ಮಂಜು ಕವಿದಂತಾಗಿ ಕಣ್ಣು ಕಾಣಿಸದಂತಾಗುತ್ತದೆ.
ಆ ಶಿಷ್ಯನ ಸ್ವಪ್ನದಲ್ಲಿ ತುಳಜಾ ಭವಾನಿ ಅಮ್ಮನವರು ಗುರುಗಳ ಮಾತಿನಲ್ಲಿ ನಿನಗೆ ವಿಶ್ವಾಸವಿಲ್ಲ. ಚತುರ್ಯುಗ ಮೂರ್ತಿ ರಾಮಚಂದ್ರ ದೇವರು ಇರುವಾಗ ಸತ್ಯಸಂಧ ತೀರ್ಥರಲ್ಲಿ ನಾನೇ ಅಂತರ್ಗತಳಾಗಿ ರಾಮದೇವರ ಪೂಜೆ ಮಾಡುತ್ತೇನೆ ಎಂದು ತಿಳಿಸುತ್ತಾಳೆ. ಅಂದ ಮೇಲೆ ನೀನು ಅಲ್ಲೇ ದರ್ಶನ ಮಾಡುವುದು ಬಿಟ್ಟು ಇಲ್ಲಿಗೆ ಬರುವುದು ಬೇಡ ಎಂದು ಸೂಚಿಸುತ್ತಾಳೆ.
ಶಿಷ್ಯನು ದೇವಿಗೆ ಕಣ್ಣು ಕೊಡು ಎಂದು ಪ್ರಾರ್ಥಿಸಿದಾಗ ದೇವಿಯು ಸೀದಾ ಸತ್ಯಸಂಧ ಗುರುಗಳ ಬಳಿಗೆ ಹೋಗಿ ತನ್ನ ಅಪರಾಧವನ್ನು ಮನ್ನಿಸುವಂತೆ ಕೇಳಿ ಕಣ್ಣು ಬರುವಂತೆ ಕೇಳಿಕೋ ಎಂದು ಹೇಳಿ ಅದೃಶ್ಯಳಾಗುತ್ತಾಳೆ. ಶಿಷ್ಯನು ಶ್ರೀಸತ್ಯ ಸಂಧ ಗುರುಗಳ ಹತ್ತಿರ ಬಂದು ತನ್ನ ಅಪರಾಧವನ್ನು ಮನ್ನಿಸಿ ಕಣ್ಣು ಬರುವಂತೆಯೂ ಮಾಡಬೇಕೆಂದು ಪ್ರಾರ್ಥಿಸುತ್ತಾನೆ. ಕರುಣಾಮಯಿಗಳಾದ ಗುರುಗಳು ಶಿಷ್ಯ ವಾತ್ಸಲ್ಯದಿಂದ ತೀರ್ಥ ಪ್ರೋಕ್ಷಣೆ ಮಾಡಿದಾಗ ಅವನಿಗೆ ಕಣ್ಣಿನ ದೃಷ್ಟಿ ಬರುತ್ತದೆ.
ಶ್ರೀಗಳವರು ತುಳಜಾ ಭವಾನಿ ದೇವಿಯನ್ನು ಪ್ರಾರ್ಥಿಸಿದಾಗ ಮಹಾಲಕ್ಷ್ಮೀ ಸ್ವರೂಪಳಾದ ದೇವಿಯು ತುಳಜಾ ಭವಾನಿ ಮೂಲ ರೂಪದಲ್ಲಿಯೇ ಶ್ರೀಸತ್ಯಸಂಧರಿಗೆ ಮತ್ತು ಶಿಷ್ಯನಿಗೆ ದರ್ಶನ ಕೊಡುತ್ತಾಳೆ. ಇದಾದ ನಂತರ ಗುರುಗಳು ತುಳಜಾಪುರಕ್ಕೆ ಹೋಗಿ ದೇವಿಯು ದರ್ಶನ ಮಾಡಿ ಅಲ್ಲಿಂದ ಗಯಾ ಕ್ಷೇತ್ರಕ್ಕೆ ಹೋಗುತ್ತಾರೆ. ಹೀಗೆ ಹತ್ತು ಹಲವಾರು ಮಹಿಮೆಗಳು ಶ್ರೀಗಳವರಿಂದ ನಡೆದಿವೆ.
ಇಂತಹ ಮಹಿಮಾನ್ವಿತ ಗುರುಗಳ ಸ್ಮರಣೆ ಭಕ್ತಿಯಿಂದ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post