ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಖಸಗಿ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ MLA Channabasappa ಇಂದು ಪಾಲಿಕೆ ಮೇಯರ್ ಹಾಗೂ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಿ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಿದ್ದರು. ಆದರೆ ಈಗ ಆ ನಿಲ್ದಾಣದಲ್ಲಿ ಸಂಜೆಯಾದರೆ ಕುಡುಕರ ಕಾಟ ಮಿತಿ ಮೀರಿದ್ದು, ಬಹಿರಂಗವಾಗಿ ವೇಶ್ಯಾವಾಟಿಕೆ ನಡೆಯುತ್ತಿರುವುದರಿಂದ ಬಸ್ ನಿಲ್ದಾಣಕ್ಕೆ ಬರುವ ಮರ್ಯಾದಸ್ಥ ಹೆಣ್ಣು ಮಕ್ಕಳಿಗೆ ಮುಜುಗರವಾಗುತ್ತಿದ್ದು, ಬಸ್ ನಿಲ್ದಾಣದ ಒಳಗೆಯೇ ಮನಸ್ಸಿಗೆ ಬಂದಂತೆ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು, 10ಕ್ಕೂ ಹೆಚ್ಚು ತಿಂಡಿ ಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.

ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಿ ಸ್ವಚ್ಛತೆಯೇ ಇಲ್ಲ. ವಾಸ್ತವವಾಗಿ ಇದರ ನಿರ್ವಹಣೆಯ ಹೊಣೆ ಹೊರಬೇಕಾಗಿದ್ದ ಟೆಂಡರುದಾರ ಪ್ರತಿ ತಿಂಗಳು ಪಾಲಿಕೆಗೆ 97ಸಾವಿರ ಮಾತ್ರ ಬಾಡಿಗೆ ಕಟ್ಟುತ್ತಿದ್ದು, ಶೌಚಾಲಯ ಮತ್ತು ಸ್ಥಳೀಯ ಅಂಗಡಿ ಹಾಗೂ ಬಸ್ ಮಾಲೀಕರಿಂದ ಲಕ್ಷಾಂತರ ರೂ. ಕೀಳುತ್ತಿದ್ದಾನೆ ಎಂಬುದು ಸ್ಥಳೀಯರ ಆರೋಪ. ನಿರ್ವಹಣೆ ಎಂಬುದು ಕನಸಿನ ಮಾತಾಗಿದ್ದು, ಪಾಲಿಕೆಗೆ ಆದಾಯ ಕಡಿಮೆ ಇರುವುದರಿಂದ ನಿರ್ಲಕ್ಷ್ಯದ ಧೋರಣೆಯನ್ನು ಪಾಲಿಕೆ ಅಧಿಕಾರಿಗಳು ಅನುಸರಿಸುತ್ತಿದ್ದು, ಸಾರ್ವಜನಿಕರು ಇದರ ಫಲ ಅನುಭವಿಸಬೇಕಾಗಿದೆ.
ಈ ಎಲ್ಲಾ ಅಡಚಣೆಗಳನ್ನು ಗಮನಿಸಿದ ಶಾಸಕರು ಇಂದು ಖಾಸಗಿ ಬಸ್ ನಿಲ್ದಾಣದ ಪೂರ್ಣ ಪರಿಶೀಲನೆ ಮಾಡಿ ಎಲ್ಲಾ ಲೋಪದೋಷಗಳ ಬಗ್ಗೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡು ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಿದರಲ್ಲದೆ, ಸ್ವತಃ ಎಲ್ಲಾ ಅಂಗಡಿಗಳಿಗೂ ಎಚ್ಚರಿಕೆ ನೀಡಿ ಯಾವುದೇ ಕಾರಣಕ್ಕೂ ಅಂಗಡಿಯ ಹೊರಗೆ ವಸ್ತುಗಳನ್ನು ಇಡಬಾರದು ಮತ್ತು ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಮೇಯರ್ ಶಿಕುಮಾರ್, ಉಪಮೇಯರ್ ಲಕ್ಷ್ಮಿಶಂಕರ್ ನಾಯಕ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಆಯುಕ್ತ ಮಾಯಣ್ಣ ಗೌಡ, ಸ್ಥಳೀಯ ಕಾರ್ಪೊರೇಟರ್ ವಿಶ್ವನಾಥ್, ದೊಡ್ಡಪೇಠೆ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post