ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಗತ್ಯವಾದಷ್ಟು ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಹಣ ನೀಡಲು ನಿರ್ಧರಿಸಿದ್ದೇವೆಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ ಅವರು, ಕೆಜಿಗೆ 34 ರೂಪಾಯಿಯಂತೆ ಮನೆಯ ಸದಸ್ಯರಿಗೆ ತಲಾ 5 ಕೆಜಿಯಂತೆ ಲೆಕ್ಕ ಹಾಕಿ ಹಣ ನೀಡಲಾಗುತ್ತದೆ .ಒಬ್ಬರಿಗೆ 5 ಕೆಜಿಯ ಅಕ್ಕಿ ಮೌಲ್ಯವನ್ನು ಹಣಕ್ಕೆ ಬದಲಿಸಿ 170 ರೂ. ನೀಡುತ್ತೇವೆ. ಎಪಿಎಲ್ ಕಾರ್ಡುದಾರರಿಗೆ ಅಕ್ಕಿಯನ್ನೇ ಕೊಡುತ್ತೇವೆ. ಆದರೆ ಪ್ರತೀ ತಿಂಗಳು ಕೇಂದ್ರ ಕೊಡುತ್ತಿರುವ 5 ಕೆಜಿ ಅಕ್ಕಿ ಈ ಹಿಂದಿನಂತೆಯೇ ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಯೋಜನೆಯು ಕೊಟ್ಟ ಮಾತಿನಂತೆ ಜುಲೈನಿಂದಲೇ ಜಾರಿಯಾಗಲಿದೆ . ಬಿಪಿಎಲ್ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ. ಅಕ್ಕಿ ದಾಸ್ತಾನು ಆಗುವವರೆಗೆ ಹಣ ನೀಡಲು ನಿರ್ಧರಿಸಲಾಗಿದೆ. ಪಡಿತರ ಚೀಟಿಯಲ್ಲಿ ಇಬ್ಬರಿದ್ದರೆ ಅವರು 340 ರೂ.ಗೆ ಅರ್ಹರಾಗಿರುತ್ತಾರೆ. ಇನ್ನು ಐವರು ಸದಸ್ಯರಿದ್ದರೆ ಅವರಿಗೆ ತಿಂಗಳಿಗೆ 850 ರೂಪಾಯಿಯನ್ನು ನೀಡಲಾಗುತ್ತದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದ್ದಾರೆ.
Also read: ರಾಜ್ಯದ ಈ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯಿದೆ
ನಾವು ಅಕ್ಕಿ ಪಡೆಯಲು ಪ್ರಯತ್ನಿಸಿದೆವು ಆದರೆ ನಮಗೆ ಅಗತ್ಯವಿರುವಷ್ಟು ಅಕ್ಕಿಯನ್ನು ಪೂರೈಸಲು ಯಾವುದೇ ಸಂಸ್ಥೆ ಮುಂದೆ ಬಂದಿಲ್ಲ. ಹೀಗಾಗಿ ಅಕ್ಕಿ ಖರೀದಿ ತಡವಾಗುತ್ತಿದೆ. ಹೀಗಾಗಿ ಅಕ್ಕಿ ಬದಲಿಗೆ ಹಣ ನೀಡಲು ಸಂಪುಟ ತೀರ್ಮಾನಿಸಿದೆ. ಇನ್ನು ಒಂದು ಕಾರ್ಡ್‌ನಲ್ಲಿ ಒಬ್ಬ ವ್ಯಕ್ತಿ ಇದ್ದರೆ, ಆ ವ್ಯಕ್ತಿಗೆ ಅನ್ನ ಭಾಗ್ಯ ಯೋಜನೆಯಡಿ ಐದು ಕೆಜಿ ಹೆಚ್ಚುವರಿ ಅಕ್ಕಿಗೆ ತಿಂಗಳಿಗೆ 170 ರೂ. ಸಿಗುತ್ತದೆ ಎಂದು ಸಚಿವರು ವಿವರಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















