ಕಲ್ಪ ಮೀಡಿಯಾ ಹೌಸ್ | ಮುಂಬೈ |
ಚಲಿಸುತ್ತಿದ್ದ ಬಸ್’ವೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ 26 ಮಂದಿ ಸಜೀವ ದಹನವಾಗಿ, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.
ನಾಗ್ಪುರದಿಂದ ಪುಣೆಗೆ ಹೋಗುತ್ತಿದ್ದ ಬಸ್ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬುಲ್ಧಾನ ಜಿಲ್ಲೆಯ ಸಿಂಧಖೇದರಾಜ ಸಮೀಪದ ಪಿಂಪಲಖುಟಾ ಗ್ರಾಮದ ಬಳಿ ಸಮೃದ್ಧಿ ಹೆದ್ದಾರಿಯಲ್ಲಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಬಸ್’ಗೆ ಬೆಂಕಿ ಹೊತ್ತಿಕೊಂಡು 25 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ.
ಇನ್ನು ಬಸ್‌ಗೆ ಬೆಂಕಿ ಬಿದ್ದ ಸುದ್ದಿ ತಿಳಿದ ಪೊಲೀಸರು ಮತ್ತು ಅಗ್ನಿ ಶಾಮಕದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಬಸ್ಸಿನಿಂದ 25 ಮೃತದೇಹಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ವೇಳೆ ಬಸ್ಸಿನಲ್ಲಿ ಒಟ್ಟು 33 ಜನರು ಪ್ರಯಾಣಿಸುತ್ತಿದ್ದರು. ಬಸ್‌ಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ 8 ಮಂದಿ ಮಾತ್ರ ಹೊರಬರಲು ಸಾಧ್ಯವಾಗಿದ್ದು, ಗಾಯಾಳುಗಳನ್ನು ಬುಲ್ಧಾನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬುಲ್ಧಾನ ಪೊಲೀಸ್ ಉಪ ಎಸ್ಪಿ ಬಾಬುರಾವ್ ಮಹಾಮುನಿ ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ
ಮಹಾರಾಷ್ಟ್ರ ಭೀಕರ ಬಸ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ತಲಾ ರೂ.5 ಲಕ್ಷ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಲಾ ರೂ.2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ದುರ್ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಬುಲ್ಧಾನ ಜಿಲ್ಲೆಯ ಸಿಂಧಖೇದರಾಜ ಬಳಿಯ ಸಮೃದ್ಧಿ ಹೆದ್ದಾರಿಯಲ್ಲಿ ಖಾಸಗಿ ಬಸ್‌ನ ಭೀಕರ ಅಪಘಾತದ ಅತ್ಯಂತ ದುಃಖವನ್ನು ತಂದಿದ್ದು, ಮೃತರ ಕುಟುಂಬಕ್ಕೆ ತೀವ್ರ ಸಂತಾಪವನ್ನು ಸೂಚಿಸುತ್ತೇನೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ, ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಘಟನೆ ಸಂಬಂಧ ಬುಲ್ಧಾನ ಕಲೆಕ್ಟರ್ ಮತ್ತು ಪೊಲೀಸ್ ಅಧೀಕ್ಷಕರೊಂದಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಲಾಗಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆಯಲಾಗಿದೆ. ಗಾಯಾಳುಗಳ ನೆರವಿನ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಗಾಯಾಳುಗಳಿಗೆ ಸರ್ಕಾರಿ ವೆಚ್ಚದಲ್ಲಿ ಕೂಡಲೇ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















