ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿನಿಮಾ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಯಾಗಿರುವುದರಿಂದ ಸಾಕಷ್ಟು ಬೆಳವಣಿಗೆ, ಹೊಸತನ ಬಂದಿದೆ. ಇದನ್ನು ಅಧ್ಯಯನದ ಮೂಲಕ ಅರ್ಥ ಮಾಡಿಕೊಂಡು ಆ ರಂಗದಲ್ಲಿ ಹೆಜ್ಜೆ ಇಡಬೇಕು ಎಂದು ಬೆಳ್ಳಿಮಂಡಲದ ಕಾರ್ಯದರ್ಶಿ, ಪ್ರಾಚಾರ್ಯ ನಾಗಭೂಷಣ ಕರೆ ನೀಡಿದರು.
ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಶಿವಮೊಗ್ಗ ಬೆಳ್ಳಿಮಂಡಲ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಕಲಾ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಿನಿಮಾ ವೀಕ್ಷಣೆ, ಚರ್ಚೆ, ಮಂಥನ ಕುರಿತ ಸಿನಿಮಾ ರಸಗ್ರಹಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಳೆಯ ಸಿನಿಮಾ ನೋಡಬೇಕು. ಸಿನಿಮಾ ಒಂದು ಕಲಾತ್ಮಕ ಜಗತ್ತು. ಅದು ವಿಶಾಲವಾಗಿ ಬೆಳೆದಿದೆ. ಸಿನಿಮಾ ನೋಡುತ್ತಲೇ ಅದನ್ನು ಅರ್ಥ ಮಾಡಿಕೊಂಡು ಸಿನಿಮಾ ತಯಾರು ಮಾಡುವುದನ್ನು ಕಲಿಯಬೇಕು. ಕಾಲೇಜಿನಲ್ಲೇ ಸಿನಿಮಾ ನಿರ್ಮಿಸಬಹುದು. ಸಿನಿಮಾವೂ ಒಂದು ಶಿಕ್ಷಣ. ಅದರ ಮೂಲಕ ಅಭಿವೃದ್ಧಿಯಾಗಬೇಕು. ನಿಜವಾದ ಕಲೆಗೆ ಗಡಿ ಇಲ್ಲ, ಭಾಷೆ ಇಲ್ಲ ಎಂದರು.
ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆಯ ಸಂಚಾಲಕಿ ಪ್ರೊ. ಹಾಲಮ್ಮ ಮಾತನಾಡಿ, ಸಿನಿಮಾ ಕೇವಲ ಮನರಂಜನೆಗೆ ಮಾತ್ರವಲ್ಲ, ಅದರಲ್ಲಿ ಬೇರೆ ಬೇರೆ ಆಯಾಮಗಳಿವೆ. ಸಾಮಾಜಿಕವಾದ ಅಂಶಗಳಿವೆ. ಬದುಕಿದೆ, ಕಷ್ಟ-ನಷ್ಟವಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದನ್ನು ಅದು ಕಲಿಸುತ್ತದೆ. ಇಂದಿನ ಸಮಾಜದಲ್ಲಿ ಸಮಾಜ ವಿಘಟನೆಯ ಘಟನೆಗಳು ಹೆಚ್ಚುತ್ತಿವೆ. ಸಿನಿಮಾ ಜನರನ್ನು ಒಂದುಗೂಡಿಸುವ ಅದ್ಭುತ ಶಕ್ತಿ ಹೊಂದಿರುವುದರಿಂದ ಸಿನಿಮಾ ನೋಡಿ ಒಳ್ಳೆಯದು, ಕೆಟ್ಟದ್ದು ಯಾವುದು ಎಂದು ನಿರ್ಧರಿಸುವ ಶಕ್ತಿ ಬರುತ್ತದೆ ಎಂದರು.
ಬೆಳ್ಳಿಮಂಡಲದ ನಿರ್ದೇಶಕ ಜಿ. ವಿಜಯಕುಮಾರ್ ಮಾತನಾಡಿ, ಬದುಕು ಮತ್ತು ಮನಸ್ಸನ್ನು ಅರಳಿಸುವ ಕಲೆ ಸಿನಿಮಾದಲ್ಲಿದೆ. ಮನಸ್ಸನ್ನು ಕೆರಳಿಸುವ ಸಂಗತಿಗಳು ದಿನನಿತ್ಯ ನಮ್ಮೆದುರು ನಡೆಯುತ್ತವೆ. ಅದನ್ನು ಗಣನೆಗೆ ತೆಗದುಕೊಳ್ಳದೆ ಬದುಕನ್ನು ಅರಳಿಸುವ ಕಲೆ ಆಯ್ದುಕೊಳ್ಳಿ, ವಿದ್ಯಾರ್ಥಿಗಳಲ್ಲಿ ಸ್ವಂತಿಕೆಯ ಶಕ್ತಿ ಇದೆ. ಅದನ್ನು ಬಳಸಿಕೊಂಡು ಉತ್ತಮ ಸಿನಿಮಾ ತಯಾರಕರಾಗಬಹುದು ಎಂದರು.
Also read: ಜು.12ರಂದು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಟೆಕ್ ಕ್ರಂಚ್’ ಕಾರ್ಯಕ್ರಮ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಬಿ. ಧನಂಜಯ ಮಾತನಾಡಿ, ಹಿಂದಿನ ಕಾಲದಲ್ಲಿ ಸಿನಿಮಾ ಎಂದರೆ ಮನೆಮಂದಿಯೆಲ್ಲ ಒಟ್ಟಿಗೆ ಹೋಗುತ್ತಿದ್ದರು. ಆದರೆ ಈಗ ಅದು ಬದಲಾಗಿದೆ. ಆಗ ಮನರಂಜನೆಯನ್ನಾಗಿ ಮಾತ್ರ ಪರಿಗಣಿಸಲಾಗುತ್ತಿತ್ತು. ಈಗ ಮನೆಯಲ್ಲೇ ಕುಳಿತು ಮೊಬೈಲಿನಲ್ಲಿ ಒಬ್ಬರೇ ಸಿನಿಮಾ ನೋಡಬಹುದು. ಅದೇ ಹಿಂದಿನ ಖುಷಿ ಈಗ ಉಳಿದಿಲ್ಲ. ಇತ್ತೀಚೆಗೆ ಕಿರುಚಿತ್ರಗಳು ಹೆಚ್ಚುತ್ತಿವೆ. ಅವು ಕೂಡ ಉತ್ತಮ ಸಂದೇಶವನ್ನು ತಲುಪಿಸುತ್ತಿವೆ. ಇದರಲ್ಲಿ ಸಿನಿಮಾ ತಯಾರಕರ ಕ್ರಿಯಾಶೀಲತೆ ಮತ್ತು ಸೂಕ್ಷ್ಮತೆ ಇರುತ್ತದೆ. ಸಿನಿಮಾ ನೋಡುವುದಲ್ಲದೆ, ಅದನ್ನು ಅವಲೋಕಿಸುವ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಎನ್‍ಆರ್‍ಡಿಎಂಎಸ್‍ನ ತಾಂತ್ರಿಕ ಸಂಯೋಜಕ ಶಂಕರ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರೊ ಟಿ. ಅವಿನಾಶ್, ಡಾ. ಪ್ರಕಾಶ್ ಮರ್ಗನಳ್ಳಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಜಿ.ಆರ್. ಲವ ಪ್ರಾಸ್ತಾವಿಕ ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post