ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಮಾನ ನಿಲ್ದಾಣ ಕಾಮಗಾರಿಯನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಮಾಡಲಿ ಬೇಡ ಎಂದವರ್ಯಾರು. ಆದರೆ ಅದಕ್ಕು ಮೊದಲು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿ ಆಗಿರುವ ಕಾಮಗಾರಿಗಳನ್ನುಕಣ್ಣಾರೆ ನೋಡಲಿ. ಇಡೀ ರಾಜ್ಯದಲ್ಲಿಯೇ ಅದು 2ನೇ ದೊಡ್ಡ ನಿಲ್ದಾಣವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ತಿರುಗೇಟು ನೀಡಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‍ನ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರ ಬಗ್ಗೆ ನನಗೆ ಗೌರವ ಇದೆ. ಆದರೆ ಅವರು ಎಂದೂ ವಿಮಾನ ನಿಲ್ದಾಣಕ್ಕೆ ಭೇಟಿ ನೀಡದೆ ಆರೋಪಿಸುತ್ತಿದ್ದಾರೆ. ವಾಸ್ತವ ಕೂಡ ಗೊತ್ತಿಲ್ಲ. ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾದ ಹೆಚ್ಚು ಗುಣಮಟ್ಟದ ವಿಮಾನ ನಿಲ್ದಾಣ ಇದಾಗಿದೆ ಎಂದರು.
ವಿಮಾನ ನಿಲ್ದಾಣದ ಅಂದಾಜು ವೆಚ್ಚ ಆರಂಭದಲ್ಲಿ ಕಡಿಮೆ ಇತ್ತು ನಿಜ. ಆದರೆ ಬರಬರುತ್ತಾ ಅದರ ವಿನ್ಯಾಸ, ಒಳ್ಳೆಯ ಸೌಲಭ್ಯ, ಅಂತರಾಷ್ಟ್ರೀಯ ಗುಣಮಟ್ಟವಿದೆ. ಹಾಗಾಗಿಯೇ ಸಹಜವಾಗಿಯೇ ವೆಚ್ಚ ಹೆಚ್ಚಾಗಿದೆ. ಯಾವ ಮಾಹಿತಿ ಇಲ್ಲದೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಆದರೆ ತನಿಖೆ ಮಾಡಲಿ ಎಂದರು.
ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಲವು ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಇದು ಸರಿಯಲ್ಲ ಎಂದ ಅವರು, ಪ್ರಧಾನ ಮಂತ್ರಿಯವರ ಫಸಲ್ ಭೀಮಾ ಯೋಜನೆಗೆ ವಿಮೆ ನೊಂದಣಿ ಮಾಡಿಸಲು ಮೆಕ್ಕೆಜೋಳಕ್ಕೆ ಜು. 31, ಭತ್ತಕ್ಕೆ ಆ.16 ಕೊನೆಯ ದಿನವಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 2132 ರೈತರು ವಿಮೆ ನೋಂದಣಿ ಮಾಡಿದ್ದಾರೆ. ರೈತರು ಇದರ ಸದವಕಾಶ ಪಡೆದುಕೊಳ್ಳಬೇಕು ಎಂದರು.
ಕೇಂದ್ರ ಸರ್ಕಾರ ಗೊಬ್ಬರಕ್ಕೆ ಸಬ್ಸಿಡಿ ನೀಡಿತ್ತು. ಡಿಎಪಿ, ಕಾಂಪ್ಲೆಕ್ಸ್, ಯೂರಿಯಾ ಗೊಬ್ಬರವು ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದಲ್ಲಿ ಒಟ್ಟು 11.5ಕೋಟಿ ರೈತರಿಗೆ ವರ್ಷಕ್ಕೆ 6 ಸಾವಿರ ಧನಸಹಾಯ ಮಾಡಲಾಗುತ್ತದೆ. ಇದುವರೆಗು 2.4ಲಕ್ಷ ಕೋಟಿ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ 58 ಲಕ್ಷ ರೈತರಿಗೆ ಇದರ ಸಹಾಯ ದೊರಕಿದೆ. ಇದುವರೆಗೂ 13 ಕಂತುಗಳನ್ನು ನೀಡಲಾಗಿದೆ. ಸುಮಾರು 15 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ ನೇರವಾಗಿ ತುಂಬಿದೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 1.51 ಲಕ್ಷ ರೈತರಿಗೆ ತಲಾ 6 ಸಾವಿರದಂತೆ 392 ಕೋಟಿ ಹಣವನ್ನು ನೀಡಲಾಗಿದೆ ಎಂದು ವಿವರಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















