ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಯಾರೊಬ್ಬರೂ ಮತ್ತೊಬ್ಬರ ಮನೆಯ ಮುಂದೆ ಅನ್ನಕ್ಕಾಗಿ ಹೋಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ CM Siddaramaiah ಹೇಳಿದರು.
ಈ ಕುರಿತಂತೆ ಸದನದಲ್ಲಿ ಮಾತನಾಡಿದ ಅವರು, ಜುಲೈ 1 ರಿಂದ ಪ್ರಾರಂಭ ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಯಿತು. ಒಂದು ತಿಂಗಳಿಗೆ 2,29,000 ಮೆಟ್ರಿಕ್ ಟನ್ ಅಕ್ಕಿ ಬೇಕು. ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯ ಜೊತೆ ರಾಜ್ಯ 5 ಕೆಜಿ ಅಕ್ಕಿ ನೀಡುತ್ತೇವೆ ಎಂದೆವು. 2017ರ ಎಪ್ರಿಲ್ 1ರಿಂದ ನಾವು 7 ಕೆಜಿ ಉಚಿತ ಅಕ್ಕಿ ನೀಡುತ್ತಿದ್ದೇವು. ಆದರೆ ನಂತರ ಬಿಜೆಪಿಯವರು ಅದನ್ನು 5 ಕೆಜಿಗೆ ಇಳಿಸಿದರು ಎಂದು ಟೀಕಿಸಿದರು.
ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ನೀಡುವ ಕಾರ್ಯಕ್ರಮವನ್ನು ನಾನು 2013ರಲ್ಲಿ ಪ್ರಾರಂಭಿಸಿದೆ. ಆದರೆ ನೆಹರೂ ಅವರ ಕಾಲದಲ್ಲಿ ಪಡಿತರ ವ್ಯವಸ್ಥೆ ಜಾರಿಯಾಯಿತು. ಒಂದು ಕೆಜಿಗೆ 1 ರೂ.ನಲ್ಲಿ ನೀಡುವ ತೀರ್ಮಾನವನ್ನು ಕೈಗೊಂಡೆವು ಎಂದರು.
ಆಹಾರ ಭದ್ರತೆ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತು. ಹಿಂದಿನ ಕಾಲದಲ್ಲಿ, ಹಬ್ಬ ಹರಿದಿನಗಳಲ್ಲಿ ಅಥವಾ ಆರೋಗ್ಯ ಹದಗೆಟ್ಟಾಗ ಮಾತ್ರ ಅನ್ನ ಮಾಡುತ್ತಿದ್ದರು. ಇದನ್ನು ಕಣ್ಣಾರೆ ಕಂಡವನು ನಾನು. ಆದ್ದರಿಂದ ಮುಖ್ಯಮಂತ್ರಿಯಾದ ತಕ್ಷಣ, ಅನ್ನಕ್ಕಾಗಿ ಒಬ್ಬರು ಮತ್ತೊಬ್ಬರ ಮನೆಗೆ ಹೋಗಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆ ಎಂದರು.
ಎಫ್’ಸಿಐನಲ್ಲಿ 400 ಲಕ್ಷ ಮೆಟ್ರಿಕ್ ಟನ್’ಗೂ ಹೆಚ್ಚು ದಾಸ್ತಾನು ಇದೆ. ಎಫ್ ಸಿ ಐ ಡೆಪ್ಯೂಟಿ ಮ್ಯಾನೇಜರ್ ಜೊತೆಗೆ ಮಾತನಾಡಿದ್ದಾಗ, 7 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇರುವುದಾಗಿ ಒಪ್ಪಿಕೊಂಡಿದ್ದರು. ನಂತರ ಆಗಲ್ಲ ಎಂದರು.
ಬಿಜೆಪಿಯವರು ಬಡವರ ಪರ ಇರುವವರೇ ? ಅಕ್ಕಿ, ಗೋಧಿ, ಹಾಲು ಇತ್ಯಾದಿಗಳ ಮೇಲೆ ಜಿಎಸ್’ಟಿ ಹಾಕಿದವರು ಮೋದಿ. 34 ರೂ. ಕೆಜಿ ಅಕ್ಕಿಗೆ ನೀಡುತ್ತೇವೆ ಎಂದರೂ, ದಾಸ್ತಾನು ಇದ್ದರೂ ಕೇಂದ್ರ ಅಕ್ಕಿ ನೀಡಲು ಒಪ್ಪಲಿಲ್ಲ. ಈಶಾನ್ಯ ರಾಜ್ಯಗಳಿಗೆ ಅಕ್ಕಿ ನೀಡುತ್ತಿದ್ದಾರೆ. ರಾಜ್ಯಕ್ಕೆ ಅಕ್ಕಿ ಇಲ್ಲವೆಂದ ಕೇಂದ್ರ ಸರ್ಕಾರ, ಎಥೆನಾಲ್ ತಯಾರಿಕೆಗೆ 29.5 ಮೆಟ್ರಿಕ್ ಟನ್ ಅಕ್ಕಿ ನೀಡಿದ್ದಾರೆ. ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದ ಎಫ್ ಸಿ ಐ , ಇ – ಹರಾಜಿನಲ್ಲಿ ಅಕ್ಕಿ ತೆಗೆದುಕೊಳ್ಳಲು ಯಾರೂ ಮುಂದೆ ಬಂದಿಲ್ಲ ಎಂದಿದ್ದಾರೆ. ಒಂದು ಕ್ವಿಂಟಾಲ್’ಗೆ 3400 ರೂ. ನೀಡುತ್ತೇವೆಂದರೂ, ಕೇಂದ್ರ ಒಪ್ಪಲಿಲ್ಲ. ಆದ್ದರಿಂದ 5 ಕೆಜಿ ಬದಲು ಒಟ್ಟು 170 ರೂ. ಪ್ರತಿ ಫಲಾನುಭಾವಿಯ ಖಾತೆಗೆ ನೀಡಲಾಗಿದೆ ಎಂದರು.
ಯುವನಿಧಿ
2022-23 ರಲ್ಲಿ ಪಾಸಾಗಿರುವವರು 6 ತಿಂಗಳಲ್ಲಿ ಕೆಲಸ ಸಿಗದಿದ್ದರೆ ಅಂತಹವರಿಗೆ ಮುಂದಿನ 24 ತಿಂಗಳು ಯುವನಿಧಿ ನೀಡಲಾಗುವುದು. ಈ ಮಧ್ಯೆ ಅವರಿಗೆ ಕೌಶಲ್ಯ ತರಬೇತಿಯನ್ನು ನೀಡಲಾಗುವುದು. ಯುವಕರಿಗೆ ತಮಗೆ ಕೆಲಸ ಸಿಕ್ಕಿದ ತಕ್ಷಣ ಯುವನಿಧಿ ನಿಲ್ಲಿಸಲಾಗುತ್ತದೆ . ಈ ರೀತಿ ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಸರ್ಕಾರ ನಿವಾರಿಸಲಿದೆ ಎಂದರು.
ಜನರು ಆತಂಕದಿಂದ ಬದುಕಬೇಕಿಲ್ಲ
ವಿದ್ಯಾಸಿರಿ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಬಿಜೆಪಿ ಸರ್ಕಾರ ಇದನ್ನು ನಿಲ್ಲಿಸಿತ್ತು. ಈಗ ಮತ್ತೆ ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಹೆಚ್ಚು ಒಣಭೂಮಿ ಇದ್ದಿದ್ದರಿಂದ ನಮ್ಮ ಸರ್ಕಾರ ಕೃಷಿಭಾಗ್ಯ ಯೋಜನೆ ಈಗ ಮತ್ತೆ ಪ್ರಾರಂಭಿಸಲಾಗಿದೆ. ಜಿಎಸ್’ಟಿ ತೆರಿಗೆ ಸಂಗ್ರಹ , ಅಬಕಾರಿ ಸುಂಕ ಹೆಚ್ಚಳ , ಮೋಟಾರ್ ವೆಹಿಕಲ್ ತೆರಿಗೆ , ಮುದ್ರಾಂಕ ಶುಲ್ಕ ಗಳನ್ನು ಹೆಚ್ಚಿಸಿ 13500 ಕೋಟಿ ರೂ.ಗೂ ಹೆಚ್ಚು ಸಂಗ್ರಹ ಮಾಡಲಾಗುತ್ತಿದೆ. 8000 ಕೋಟಿ ಸಾಲ ಪಡೆಯುತ್ತಿದ್ದೇವೆ ಎಂದರು.
Also read: ಶಕ್ತಿ ಯೋಜನೆಯಿಂದ ಕೆಎಸ್’ಆರ್’ಟಿಸಿ ಸುಧಾರಣೆ: ಸಿದ್ದರಾಮಯ್ಯ
ನಾವು ನುಡಿದಂತೆ ನಡೆಯುತ್ತಿದ್ದು, ನೀಡಿರುವ ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿಯವರು 600 ಭರವಸೆಗಳಲ್ಲಿ ಶೇ. 10 ರಷ್ಟೂ ಈಡೇರಿಸಿಲ್ಲ. ರೈತ ಸಾಲ ಮನ್ನಾ ಎಂದರು. ಆದರೆ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಅನುದಾನ ನಿಗದಿಪಡಿಸಲಾಗಿದೆ. ಅನುಷ್ಠಾನ ಮಾಡುತ್ತಿದ್ದೇವೆ. 35,410 ಕೋಟಿ ಈ ವರ್ಷ ಉಳಿದ ಅವಧಿಗೆ ಬೇಕಾಗುತ್ತಿದ್ದು , ಅನುದಾನ ನಿಗದಿಪಡಿಸಲಾಗಿದೆ. ಎಲ್ಲ ಐದು ಗ್ಯಾರೆಂಟಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದ್ದು, ಜಾರಿ ಮಾಡಿಯೇ ಮಾಡುತ್ತೇವೆ. ಜನರು ಯಾರೂ ಆತಂಕದಿಂದ ಬದುಕುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಊಟ , ಕಾನೂನು ರಕ್ಷಣೆ, ಕೈಗೆ ಹಣ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಶಕ್ತಿ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಮೆಚ್ಚುಗೆ
ಧರ್ಮಸ್ಥಳದ ಧರ್ಮಾಧಿಕಾರಿಯವರು ಪತ್ರ ಮುಖೇನ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಅಲ್ಲಿಗೆ ಬಂದು ಮುಖ್ಯಮಂತ್ರಿಗಳ ಹೆಸರಿನಲ್ಲಿ ಪೂಜೆ ಮಾಡಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲಾತಿ ಹೆಚ್ಚಿಸಿದವರು ಕಾಂಗ್ರೆಸ್ ನವರು. ಈಗ ಮಹಿಳಾ ಮೀಸಲಾತಿ ಮಸೂದೆ ಕೇಂದ್ರ ಸರ್ಕಾರದಲ್ಲಿದ್ದು, ಬಿಜೆಪಿಯವರು ಅದನ್ನು ಮಾಡಿಸಲಿ ಎಂದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post