ಕಲ್ಪ ಮೀಡಿಯಾ ಹೌಸ್ | ಮೈಸೂರು |
ದೇವರು ನೀಡಿದ ಅಮೂಲ್ಯವಾದ ಮಾನವ ಜನ್ಮದಲ್ಲಿ ಆಯುಷ್ಯವನ್ನು ಸಾರ್ಥಕ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿದರು.
ಅಗ್ರಹಾರದ ಉತ್ತರಾದಿ ಮಠದ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಅಧಿಕ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿರುವ ಒಂದು ತಿಂಗಳ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನವನ್ನು ಶುದ್ಧವಾಗಿ ಇಟ್ಟುಕೊಂಡರೆ ಮಾತ್ರ ವೈರಾಗ್ಯ ಭಾವ ಹತ್ತಿರವಾಗುತ್ತದೆ. ಲೋಕದ ವಸ್ತುಗಳಿಂದ ಆದಷ್ಟು ದೂರ ಇದ್ದು, ದೇವರ ಅವತಾರಗಳ ಚಿಂತನೆಗೆ ಸಾಕಷ್ಟು ಸಮಯ ವಿನಿಯೋಗಿಸಿ. ಆಗ ಇಹ ಮತ್ತು ಪರದಲ್ಲಿ ಮುಕ್ತಿ ದೊರಕುತ್ತದೆ ಎಂಬುದು ಭಾಗವತದ ಸಂದೇಶ ಎಂದು ಅವರು ಹೇಳಿದರು.
ಜ್ಞಾನ ಇಲ್ಲದೇ ಯಾವ ಲೋಕದ ಸುಖವೂ ಪ್ರಾಪ್ತಿ ಆಗುವುದಿಲ್ಲ. ಇದಕ್ಕೆ ಭಕ್ತಿಯೇ ಮೂಲ. ದೇವರು ನೀಡಿದ ಆಯುಷ್ಯದಲ್ಲಿ ಅರ್ಧ ಭಾಗ ನಿದ್ರೆಯಲ್ಲೇ ಕಳೆಯುತ್ತೇವೆ. ಉಳಿದ ಸಮಯ ಆಹಾರ, ವಿಹಾರ, ದುಡಿಮೆ, ಸಂಸಾರಕ್ಕೆ ವಿನಿಯೋಗ ಆಗುತ್ತದೆ. ಯೌವ್ವನದ ಸುಖಭೋಗ ಅನುಭವಿಸುವುದೇ ಬದುಕಿನ ಉದ್ದೇಶ ಎಂಬ ಭ್ರಮೆಯಲ್ಲಿ ಕೆಲ ವರ್ಷ ಕಳೆಯುತ್ತೇವೆ. ಹೀಗಿರುವಾಗ ಅಧ್ಯಾತ್ಮ ಜ್ಞಾನ, ದೇವರ ಚಿಂತನೆಗಳಿಗೆ ಮನ ಪಕ್ವವಾಗುವುದರೊಳಗೆ ವೃದ್ಧಾಪ್ಯ ಕಾಲಿಡುತ್ತದೆ. ಯಾವ ಸಂಪ್ರದಾಯ, ವ್ರತ, ಅನುಷ್ಠಾನಮಾಡಲು ಕಷ್ಟವಾಗುತ್ತದೆ. ಕಣ್ಣು, ಕಿವಿಗಳು ಮಂದವಾಗುತ್ತವೆ. ಕೈಕಾಲುಗಳು ನಿತ್ರಾಣ ಅನುಭವಿಸುತ್ತವೆ. ಹೀಗಿರುವ ಜೀವನದಲ್ಲಿ ಬಾಲ್ಯದಿಂದಲೇ ನಮ್ಮ ಸನಾತನ ಸಂಸ್ಕೃತಿ ಹೇಳಿದ ವ್ರತಾನುಷ್ಠಾನ ಮಾಡಬೇಕು. ಇಂದಿನ ದಿನವೇ ಶುಭ ಪುಣ್ಯ ದಿನ ಎಂದು ಸಂಕಲ್ಪ ಮಾಡಿ ಜ್ಞಾನ ಸಂಪಾದನೆಗೆ ಮುಂದಾಗಬೇಕು ಎಂಬುದೇ ಭಾಗವತದ ಆಶಯ ಎಂದರು.
ಹಿಂಸೆ ಮಾಡಬಾರದು:
ನಮಗೆ ಕಷ್ಟ ಬಂದಿದೆ ಎಂದು ಇತರರನ್ನು ಹಿಂಸೆ ಮಾಡಬಾರದು. ಪ್ರತಿಯಾಗಿ ಯಾರಿಗೂ ಕೋಪ ಮಾಡಬಾರದು. ದೇವರು ಅನೇಕ ಪ್ರಸಂಗಗಳಲ್ಲಿ ನಮ್ಮನ್ನು ರಕ್ಷಣೆ ಮಾಡಿದ್ದನ್ನು ಸ್ಮರಿಸಿಕೊಳ್ಳಬೇಕು. ದೇವರ ರೂಪ ಚಿಂತನೆ ಮಾಡಿದರೆ ಯಾವ ಸಂಕಷ್ಟವೂ ಹೆಚ್ಚಾಗಿ ಕಾಡುವುದಿಲ್ಲ. ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರೇ ಇದಕ್ಕೆ ಉದಾಹರಣೆ ಎಂದು ಪಂಡಿತ ಅನಿರುದ್ಧಾಚಾರ್ಯ ಹೇಳಿದರು.
Also read: ಜಲಪಾತ ವೀಕ್ಷಿಸುತ್ತಿದ್ದ ಭದ್ರಾವತಿ ಯುವಕ ಕಾಲುಜಾರಿ ಬಿದ್ದು ನೀರು ಪಾಲು
ಭಕ್ತಿ ಮತ್ತು ವೈರಾಗ್ಯ ಮೂಡಿಸುವ ಗ್ರಂಥ:
ಭಕ್ತಿ ಮತ್ತು ವೈರಾಗ್ಯ ಮೂಡಿಸುವ ಮಹಾನ್ ಗ್ರಂಥವೇ ಶ್ರೀಮದ್ ಭಾಗವತ. ಪಾಂಡವರ ಕಥೆ ಹೇಳುತ್ತಲೇ ಇದು ಶ್ರೀ ಕೃಷ್ಣನಲ್ಲಿ ಭಕ್ತಿ ಉಂಟುಮಾಡುವ ಶಕ್ತಿ ಹೊಂದಿದೆ. ಸತ್ಕರ್ಮ ಮಾಡಲು ವ್ಯಕ್ತಿ ಶುದ್ಧನಾಗಿರಬೇಕು, ಸ್ಥಳವೂ ಶುದ್ಧವಾಗಿರಬೇಕು ಎಂಬ ಮಾರ್ಗದರ್ಶನ ನೀಡಿದೆ. ದತ್ತಾತ್ರೇಯ, ವೃಷಭ, ಧನ್ವಂತರಿ (ಮೋಹಿನಿ), ನರಸಿಂಹ, ವಾಮನ, ಪರಶುರಾಮ, ವೇದವ್ಯಾಸ ಮತ್ತು ರಾಮನ ಅವತಾರಗಳನ್ನು ನಿರೂಪಿಸುತ್ತಲೇ ದೇವರು ಸಕಲ ಪದಾರ್ಥಗಳಲ್ಲೂ ಇದ್ದಾನೆ ಎಂಬುದನ್ನು ಪ್ರಮಾಣಗಳ ಮೂಲಕ ಭಾಗವತ ಗ್ರಂಥ ಪ್ರತಿಪಾದಿಸಿದೆ. ಇದನ್ನು ಅನುಸರಿಸಿದರೆ ನಮ್ಮ ಜೀವನ ಸಾರ್ಥಕ ಎಂದು ಅನಿರುದ್ಧಾಚಾರ್ಯ ನುಡಿದರು.
ನಂತರ ಶ್ರೀ ಭಾಗವತ ಗ್ರಂಥಕ್ಕೆ ವಿಶೇಷ ಮಂಗಳಾರತಿ, ಮಂತ್ರಾಕ್ಷತೆ ವಿತರಣೆ, ಶ್ರೀ ಧನ್ವಂತರಿ ದೇವರಿಗೆ ಕ್ಷೀರಾಭಿಷೇಕ, ಅಲಂಕಾರ ಸೇವೆ ನೆರವೇರಿತು. ನೂರಾರು ಭಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post