ರಾಜ್ಯ ಸರ್ಕಾರದ ರೈತವಿರೋಧಿ ಧೋರಣೆ ಖಂಡಿಸಿ ಇಂದು ಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಉಚಿತ ವಿದ್ಯುತ್ ಎಂದು ಹೇಳಿ ಮೂರು ಪಟ್ಟು ದರ ಏರಿಸಿದ್ದಾರೆ. ಈ ಅವೈಜ್ಞಾನಿಕ ದರವನ್ನು ಕಡಿಮೆ ಮಾಡಬೇಕು. ಇದು ಸಾಧ್ಯವಾಗದಿದ್ದಲ್ಲಿ ರಾಜೀನಾಮೆ ನೀಡಿ ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾಯಿದೆ ತೆಗೆದು ರೈತನಿಗೆ ತಾನು ಬೆಳೆದ ಬೆಳೆಗೆ ತಾನೇ ಮಾರುವ ಹಕ್ಕನ್ನು ಕಸಿದುಕೊಂಡಿದ್ದಾರೆ. ರೈತರ ಯಂತ್ರೋಪಕರಣ ಸಹಾಯಧನವನ್ನು ನಿಲ್ಲಿಸಿದ್ದಾರೆ. ಸಾವಿರಾರು ಎಕರೆ ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ ಬಂದರು ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದರೂ ತೀರ್ಥಹಳ್ಳಿಯ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಬಿಜೆಪಿ ಸರ್ಕಾರ ನೀಡಿದ 10ಕೋಟಿ ರೂ.ಗಳನ್ನು ತಡೆಹಿಡಿದಿದ್ದಾರೆ. ಉಚಿತ ಬಸ್ ಗ್ಯಾರಂಟಿ ನೀಡಿದ ಸರ್ಕಾರ ನಿಗಮಕ್ಕೆ 750 ಕೋಟಿಯಲ್ಲಿ ಕೇವಲ 120 ಕೋಟಿ ರೂ. ನೀಡಿದೆ. ವಿವಿಧ ಎಸ್ಕಾಂಗಳಿಂದ ಕೆಪಿಸಿಸಿಗೆ ಸಾವಿರಾರು ಕೋಟಿ ಬಾಕಿ ಇದೆ ಎಂದರು.
ನಾಲಿಗೆ ಭ್ರಷ್ಟ ಸರ್ಕಾರ ಇದಾಗಿದ್ದು, ಎರಡು ತಿಂಗಳಿಂದ ಅನೇಕ ಇಲಾಖೆಯ ಸರ್ಕಾರಿ ನೌಕರರಿಗೆ ಸಂಭಳ ಇಲ್ಲ. ಡಯಾಲಿಸಿಸ್ ಸೆಂಟರ್‍ಗಳನ್ನು ಮುಚ್ಚಲಾಗುತ್ತಿದೆ. 108 ಅಂಬ್ಯುಲೆನ್ಸ್ ನಿಲ್ಲುವ ಹಂತಕ್ಕೆ ತಲುಪಿದೆ. ಟ್ರಾನ್ಸ್‍ಫರ್ ಏಜೆಂಟರುಗಳ ದಂಡೇ ಸರ್ಕಾರದ ಸುತ್ತಲಿದ್ದು, ಹಸಿದ ಹೆಬ್ಬುಲಿಗಳಂತಾಗಿದ್ದಾರೆ. ಜನರನ್ನೇ ತಿಂದುಬಿಡುವ ಹಂತಕ್ಕೆ ಸರ್ಕಾರ ತಲುಪದ್ದು, ಜನರಿಗೆ ಎಲ್ಲವೂ ತಿಳಿಯುತ್ತಿದೆ.ಸರ್ಕಾರ ಇಳಿಯುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
Also read: ಉತ್ತಮ ಆರೋಗ್ಯಕ್ಕೆ ಲಸಿಕೆಗಳು ಅತಿ ಅವಶ್ಯಕ: ಶಾಸಕ ಚನ್ನಬಸಪ್ಪ
ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ನಂದಿನಿ ದರ ಏಕಾಏಕಿ ಹೆಚ್ಚಳ ಮಾಡಿದ್ದು, ಆ ದರವನ್ನು ಉತ್ಪಾದಕರಿಗೆ ತಕ್ಷಣ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಅವರಿಗೂ ನೀಡಿಲ್ಲ. ಗ್ರಾಹಕರಿಗೂ ಮೋಸ ಮಾಡಿದೆ. ಸ್ವಾತಂತ್ರ್ಯ ಹೋರಾಟಗಾರರ ಪಠ್ಯವನ್ನು ಕಿತ್ತುಬಿಸಾಕುತ್ತೇವೆ ಎಂದು ಹೇಳಿದ ಮಂತ್ರಿ ಕೂಡ ಈ ಬಗ್ಗೆ ಸುಮ್ಮನಿದ್ದಾರೆ ಎಂದರು.
ಶ್ರಮಶಕ್ತಿ ಯೋಜನೆ ಜೀವನ್ ಜ್ಯೋತಿ ವಿಮಾ ಯೋಜನೆ, ರೈತ ಉತ್ಪಾದಕ ಸಂಸ್ಥೆ ರೈತ ಸಂಪದ ಯೋಜನೆ, ಸಹಸ್ರ ಸರೋವರ ಮತ್ತುಸಹ್ಯಾದ್ರಿ ಸಿರಿ ಯೋಜನೆ, ಮೀನುಗಾರರಿಗೆ ವಸತಿ ಸೌಲಭ್ಯ, ಕಲ್ಯಾಣ ಕರ್ನಾಟಕದಲ್ಲಿ ಕೃಷಿ ಕ್ಲಸ್ಟರ್ ನಿರ್ಮಿಸುವ ಯೋಜನೆ, ಕನಿಷ್ಠ ಬೆಂಬಲ ಬೆಲೆ ನೀಡುವ ಬಿಜೆಪಿ ಸರ್ಕಾರದ ರೈತಪರ ಯೋಜನೆಗಳನ್ನು ಈ ಸರ್ಕಾರ ಕೈಬಿಟ್ಟಿದ್ದು,ರೈತಾಪಿ ವರ್ಗವನ್ನು ನಿರ್ಲಕ್ಷಿಸಿದೆ. ರೈತವಿರೋಧಿ ನೀತಿಗಳನ್ನು ಇನ್ನುಮುಂದಾದರೂ ಸರಿಪಡಿಸಿಕೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















