ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಏಕೆ ಬೀಳಿಸಬಾರದು, ಇದರಲ್ಲಿ ತಪ್ಪೇನಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ DCM Eshwarappa ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರವಾಗಿದೆ ಜನಪರವಾಗಿ ಕೆಲಸ ಮಾಡುತ್ತಿಲ್ಲ. ಭ್ರಷ್ಟಾಚಾರ ತಲೆ ಎತ್ತಿದೆ. ವಿದ್ಯುತ್ ಕೊರತೆ ತಲೆದೋರಿದೆ. ರೈತರು, ಕಾರ್ಮಿಕರು ನಿರಾಶರಾಗಿದ್ದಾರೆ. ಹಣ ಕೊಟ್ಟರೂ ವಿದ್ಯುತ್ ಇಲ್ಲ, ಇನ್ನು ಉಚಿತ ಭಾಗ್ಯ ಎಲ್ಲಿಂದ ಬಂತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಖರೀದಿ ಮಾಡಬೇಕಿತ್ತು. ರಾಜ್ಯದ ಅಭಿವೃದ್ಧಿ ಮೊದಲೇ ಇಲ್ಲ. ಇಂತಹ ಸರ್ಕಾರವನ್ನು ಇನ್ನೂ ಉಳಿಸಬೇಕೆ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಎಲ್ಲಾ ಭ್ರಷ್ಟಾಚಾರವನ್ನು ಸಹಿಸಿಕೊಂಡು ಸುಮ್ಮನಿರುವ ವಿರೋಧ ಪಕ್ಷವಲ್ಲ. ಇತ್ತೀಚೆಗೆ ಇಡಿ ದಾಳಿಯಲ್ಲಿ ಎರಡು ಕಡೆ ಕೋಟ್ಯಂತರ ರೂ. ನಗದು ಸಿಕ್ಕಿದೆ. ಇದು ಎಲ್ಲಿಂದ ಬಂತು ಎಂದು ಕೇಳಬಾರದೆ. ನಮಗೆ ಅನುಮಾನ ಇದೆ. ಈ ಹಣ ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಬಳಕೆ ಮಾಡಲು ಸಂಗ್ರಹಿಸಿತ್ತು ಎಂದು ನಾವು ಆರೋಪ ಮಾಡುತ್ತೇವೆ. ಇವರು ಸತ್ಯವಂತರಾದರೆ ಆಯಿತು ಹಣ ಸಿಕ್ಕಿದೆ. ನಾವು ಸಿಬಿಐ ತನಿಖೆ ಮಾಡಿಸುತ್ತೇವೆ ಎಂದು ಏಕೆ ಹೇಳುತ್ತಿಲ್ಲ. ಹಾಗಾದರೆ ನಮ್ಮ ಅನುಮಾನ ನಿಜವಲ್ಲವೇ. ಇಂತಹ ಸರ್ಕಾರ ನಮಗೆ ಬೇಕಾ. ನಾವು ನೇರವಾಗಿ ಹೇಳುತ್ತೇವೆ. ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದರು.
Also read: ಮಕ್ಕಳ ದಸರಾ ಸಮಾರಂಭಕ್ಕೆ ಸಂಭ್ರಮದ ತೆರೆ: ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
ಇಸ್ರೇಲ್ ಮತ್ತು ಪ್ಯಾಲಸ್ತೇನ್ ಯುದ್ಧ ನಡೆಯುತ್ತಿದೆ. ಭಾರತ ಇಸ್ರೇಲ್ ಪರವಾಗಿ ನಿಂತಿದೆ. ಆದರೆ ಬೆಂಗಳೂರಿನಂತಹ ನಗರದಲ್ಲಿ ಭಯೋತ್ಪಾದಕರ ಪರವಾಗಿ ಪ್ರತಿಭಟನೆ ಮಾಡುವವರಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತದೆ. ಇದು ದೇಶ ದ್ರೋಹದ ಕೆಲಸವಲ್ಲವೇ. ಭಯೊತ್ಪಾದಕರು ಅಲ್ಲಿ ಆಸ್ಪತ್ರೆಗಳಿಗೇ ರಾಕೆಟ್ ಉಡಾಯಿಸಿ ಕೊಲ್ಲುವಷ್ಟು ನೀಚರಾಗಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಲಿ ತೆಗೆದುಕೊಂಡಿದ್ದು ಇದೇ ಭಯೋತ್ಪಾದಕರಲ್ಲವೇ. ಕಾಂಗ್ರೆಸ್ಸಿಗರಿಗೆ ಇದೇಕೆ ಅರ್ಥವಾಗುತ್ತಿಲ್ಲ. ಭಯೋತ್ಪಾದಕರ ಪರವಾಗಿ ಇರುವವನ್ನು ಹೆಡೆಮುರಿ ಕಟ್ಟಬೇಕಲ್ಲವೇ. ಇನ್ನೂ ಎಷ್ಟು ದಿನ ವೋಟ್ ಬ್ಯಾಂಕ್ ರಾಜಕಾರಣ ಕಾಂಗ್ರೆಸ್ ಮಾಡುತ್ತದೆ. ಇದನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ ಎಂದ ಅವರು, ಬಹುತ್ವ ಕರ್ನಾಟಕ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಜಿಲ್ಲೆಯಲ್ಲಿ ಹಲವು ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳ ನಿರ್ಮಾಣವಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ ಎಲ್ಲಾ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಬಡವರು ಸೂರಿಗಾಗಿ ಕಾಯುತ್ತಲೇ ಇದ್ದಾರೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಸೂರಿಗಾಗಿ ನಮ್ಮ ಅನೇಕ ಹೆಣ್ಣು ಮಕ್ಕಳು ತಾಳಿ ಮಾರಿ ಹಣ ಕಟ್ಟಿದ್ದಾರೆ. ಬಿಜೆಪಿ ಬಡವರ ಪರವಾಗಿ ನಿಲ್ಲುತ್ತದೆ. ಜಿಲ್ಲೆಯಲ್ಲಿರುವ ಎಲ್ಲಾ ವಸತಿ ಯೋಜನೆಗಳ ಕಾಮಗಾರಿಗಳು ಹೇಗಿವೆ, ಎಲ್ಲಿಗೆ ನಿಂತಿವೆ, ಬಡವರ ಪರಿಸ್ಥಿತಿ ಏನು ಎಂಬುದನ್ನು ವಸತಿ ಸಚಿವ ಜಮೀರ್ ಅಹ್ಮದ್ ಶಿವಮೊಗ್ಗಕ್ಕೆ ಬಂದು ಖುದ್ದಾಗಿ ಪರಿಶೀಲನೆ ನಡೆಸಲಿ. ಪರಿಸ್ಥಿತಿಯನ್ನು ಅವಲೋಕಿಸಲಿ ಆಗಲಾದರೂ ಅವರಿಗೆ ಬಡವರ ಮೇಲೆ ಕರುಣೆ ಬರಬಹುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ನಗರಾಧ್ಯಕ್ಷ ಜಗದೀಶ್, ಪಾಲಿಕೆ ಸದಸ್ಯ ಜ್ಞಾನೇಶ್ವರ್, ಬಾಲು, ಶಶಿಧರ್, ಅಣ್ಣಪ್ಪ ಕೆ.ವಿ. ಇದ್ದರು.
Discussion about this post