ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿರುವ ವಿಶ್ವ ವಿಖ್ಯಾತ ವಿತ್ತ ತಜ್ಞ ಸಿದ್ದರಾಮಯ್ಯ CMSiddaramaiah ಅವರಿಗೆ ಕೇಂದ್ರ ಸರ್ಕಾರ ಬರ ಹಾಗೂ ಪ್ರವಾಹಕ್ಕೆ ಯಾವ ರೀತಿ ಪರಿಹಾರ ಕೊಡುತ್ತದೆ ಎಂಬ ಸಾಮಾನ್ಯ ತಿಳುವಳಿಕೆಯೂ ಸಹ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ HDKumaraswamy ವ್ಯಂಗ್ಯ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ವಿಶ್ವವಿಖ್ಯಾತ ವಿತ್ತ ನೀವು ಮೆರೆಯುತ್ತಿದ್ದೀರಿ. ಅಧಿಕಾರಕ್ಕೆ ಬಂದೊಡನೆ ವಿಶೇಷವಾಗಿ ವಿತ್ತಖಾತೆಯನ್ನು ತಮ್ಮಲ್ಲಿಯೇ ‘ ಜೋಪಾನ ‘ ಮಾಡಿಕೊಳ್ಳುವ ನಿಮಗೆ, ಕೇಂದ್ರ ಸರ್ಕಾರವು ಬರಕ್ಕೆ, ಪ್ರವಾಹಕ್ಕೆ ಯಾವ ರೀತಿ ಪರಿಹಾರ ಕೊಡುತ್ತದೆ ಎನ್ನುವ ಸಾಮಾನ್ಯ ತಿಳಿವಳಿಕೆಯೂ ಇಲ್ಲವೇ? ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಹೋಗಲಿ, ನೀವು ಈ ರಾಜ್ಯದ ಮುಖ್ಯಮಂತ್ರಿ… ದೆಹಲಿಗೆ ಹೋಗಿ ಪ್ರಧಾನಿಗಳಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ಅದನ್ನೂ ಮಾಡಲಿಲ್ಲ, ಪ್ರತಿಷ್ಠೆ ನಿಮಗೆ. ಪ್ರಧಾನಿಗಳನ್ನು ಸದಾ ನಿಂದಿಸುತ್ತಾ ಕುಳಿತರೆ ಲಾಭವೇನು? ಇಲ್ಲಿ ವರ್ಗಾವಣೆ ದಂಧೆ, ಕಮೀಷನ್ ವಸೂಲಿ, ಆಪರೇಷನ್ ಹಸ್ತ, ಡಿನ್ನರ್-ಬ್ರೇಕ್ ಫಾಸ್ಟ್ ಮೀಟಿಂಗುಗಳಲ್ಲಿಯೇ ಭಾರೀ ಬ್ಯುಸಿ ಆಗಿರುವ ನಿಮಗೆ ದೆಹಲಿಗೆ ಜನರ ಅಹವಾಲು ತೆಗೆದುಕೊಂಡು ಹೋಗಲು ಸಮಯವಾದರೂ ಎಲ್ಲಿದೆ? ಎಂದು ಕೇಳಿದ್ದಾರೆ.
Also read: ಮಂಗಳೂರಿಗೆ ಬರಲಿದೆ ವಂದೇ ಭಾರತ್ ರೈಲು: ಸಂಸದ ನಳೀನ್ ಕುಮಾರ್ ಹೇಳಿದ್ದೇನು?
ಕಾಂಗ್ರೆಸ್ ಸದಸ್ಯರು ಎಲ್ಲಿ ಅವಿತಿದ್ದರು?
ನೀವು ಕರೆದೊಯ್ಯುವ ಸರ್ವಪಕ್ಷ ನಿಯೋಗದಲ್ಲಿ ಜೆಡಿಎಸ್ ಪಕ್ಷವೂ ಇರುತ್ತದೆ, ನಮ್ಮ ಮಿತ್ರಪಕ್ಷ ಬಿಜೆಪಿಯೂ ಇರುತ್ತದೆ. ಇನ್ನೊಬ್ಬರ ಧೈರ್ಯದ ಬಗ್ಗೆ ಮಾತನಾಡುವ ನೀವು, ನಿಮ್ಮ ಸ್ಥೈರ್ಯದ ಬಗ್ಗೆಯೂ ಕೊಂಚ ಹೇಳಬೇಕಲ್ಲವೇ? ಮುಖ್ಯಮಂತ್ರಿಯಾಗಿ ನೀವು ರಾಜ್ಯಕ್ಕೆ ಸಂಬಂಧಿಸಿ ಪ್ರಧಾನಿಗಳನ್ನು, ಸಂಬಂಧಿಸಿದ ಕೇಂದ್ರ ಸಚಿವರನ್ನು ಎಷ್ಟು ಸಲ ಭೇಟಿ ಆಗಿದ್ದೀರಿ? ಎಷ್ಟು ಅರ್ಜಿ ಕೊಟ್ಟಿದ್ದೀರಿ? ರಾಜ್ಯದ ನೆಲ-ಜಲ, ಇನ್ನಿತರೆ ಸಂಕಷ್ಟದ ವೇಳೆ ಈ ಇಳಿವಯಸ್ಸಿನಲ್ಲಿಯೂ ಮಾನ್ಯ ದೇವೇಗೌಡರು ನಡೆಸುತ್ತಿರುವ ಹೋರಾಟ ನಿಮಗೆ ಕಾಣಿಸಿಲ್ಲವೇ? ಕಾವೇರಿ ಬಗ್ಗೆ ಅವರು ಸಂಸತ್ತಿನಲ್ಲಿ ಸಿಡಿದೆದ್ದಾಗ ನಿಮ್ಮ ಪಕ್ಷದ ಸದಸ್ಯರೆಲ್ಲರೂ ಎಲ್ಲಿ ಅವಿತು ಕುಳಿತಿದ್ದರು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post