ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಳವಡಿಸಿರುವ 400 ಕಿಲೋವ್ಯಾಟ್ ಸೌರ ವಿದ್ಯುತ್ ಸ್ಥಾವರಕ್ಕೆ ಟಾಟಾ ಕಂಪನಿಯು ಗ್ರೀನ್ ಚಾಂಪಿಯನ್ ಪ್ರಶಸ್ತಿ Green Championship award by TATA ನೀಡಿ ಗೌರವಿಸಿದೆ.
ಸಂಪೂರ್ಣ ಪರಿಸರ ಸ್ನೇಹಿಯಾದ ಈ ವಿದ್ಯುತ್ ಸ್ಥಾವರದಿಂದ ಪ್ರತಿ ವರ್ಷ 5 ಲಕ್ಷದ 50 ಸಾವಿರ ಯುನಿಟ್ ವಿದ್ಯುತ್ ಉತ್ಫಾದನೆಯಾಗುತ್ತಿದ್ದು, 12 ಸಾವಿರ ಟನ್‌ಗಳಷ್ಟು ಇಂಗಾಲ (ಕಾರ್ಬನ್ ಡೈ ಆಕ್ಸೈಡ್) ಹೊರಸೂಸುವಿಕೆ ಕಡಿಮೆಯಾಗಿದೆ ಎಂದು ಕಂಪನಿ ಉಲ್ಲೇಖಿಸಿದೆ. ಇದು 19 ಸಾವಿರ ತೇಗದ ಮರಕ್ಕೆ ಸಮಾನವಾಗಿದೆ ಎಂದು ತಿಳಿಸಿದೆ.
2020 ರಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳ ಕಟ್ಟಡದ ಮೇಲ್ಛಾವಣಿಯಲ್ಲಿ ಈ ಸ್ಥಾವರವನ್ನು ಅಳವಡಿಸಲಾಗಿದ್ದು, ಕಾಲೇಜಿಗೆ ಅಗತ್ಯವಿರುವ ದೈನಂದಿನ ವಿದ್ಯುತ್ ಪೂರೈಕೆಯ ಜೊತೆಗೆ ಗ್ರಿಡ್ ಸಂಪರ್ಕದ ಮೂಲಕ ವಿದ್ಯುಚ್ಚಕ್ತಿ ನಿಗಮಕ್ಕೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶಿಯ ಉತ್ಫಾದನೆಗೆ ಹೆಚ್ಚು ಒತ್ತು ನೀಡಿ, ದಾಬಸ್‌ಪೇಟೆಯಲ್ಲಿ ತಯಾರಾದ ಟಾಟಾ ಪವರ್ ಕಂಪನಿಯ ಉಪಕರಣಗಳನ್ನೆ ವಿದ್ಯುತ್ ಸ್ಥಾವರಕ್ಕೆ ಬಳಸಲಾಗಿತ್ತು. ಈ ವಿದ್ಯುತ್ ಸ್ಥಾವರದ ಮೂಲಕ 2020 ರಿಂದ ಇಲ್ಲಿಯವೆರೆಗೆ ಸುಮಾರು 1 ಕೋಟಿ 73 ಲಕ್ಷ ರೂಪಾಯಿಗಳಷ್ಟು ಸಂಸ್ಥೆಗೆ ಉಳಿತಾಯವಾಗಿದೆ.
Also read: ವಿಶ್ವ ವಿಖ್ಯಾತ ವಿತ್ತ ತಜ್ಞ ಸಿದ್ದರಾಮಯ್ಯಗೆ ಸಾಮಾನ್ಯ ತಿಳುವಳಿಕೆಯಿಲ್ಲ: ಎಚ್’ಡಿಕೆ ವ್ಯಂಗ್ಯ
ಇದರೊಂದಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಾವೀನ್ಯ ಪ್ರಯೋಗಗಳನ್ನು ನಡೆಸಲು ಹಾಗೂ ಸಂಶೋಧನಾ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಪೂರಕ ವೇದಿಕೆಯಾಗಿ ರೂಪಗೊಂಡಿದೆ. ಇಂತಹ ಸಾಧನೆಗೆ ಸಹಕರಿಸಿದ ಎಲ್ಲಾ ತಜ್ಞರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿ ಅಭಿನಂದನೆಯನ್ನು ಸಲ್ಲಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post