ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾವು ಕಾಣುವ ಕನಸುಗಳು ಗುರಿಯಾಗಿ ಬದಲಾಗಬೇಕಿದ್ದು, ಅಂತಹ ಗುರಿಯನ್ನು ತಲುಪುವ ಪೂರಕ ಅಂಶಗಳನ್ನು ಬಳಸಿಕೊಂಡು ಯಶಸ್ಸು ಪಡೆಯಿರಿ ಎಂದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ನಿರ್ದೇಶಕರಾದ ಡಾ.ಎಂ.ಆರ್. ಏಕಾಂತಪ್ಪ ಅಭಿಪ್ರಾಯಪಟ್ಟರು.
ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ವತಿಯಿಂದ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿವಿಧ ವಿದ್ಯಾರ್ಥಿನಿ ಸಂಘಗಳ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಮಾತುಗಳನ್ನಾಡಿದರು.
ಇಂದಿನ ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಹೆಚ್ಚಿದೆ. ತಮ್ಮಲ್ಲಿರುವ ಗೊಂದಲಗಳನ್ನು ಪದೇಪದೇ ಮೆಲುಕು ಹಾಕುತ್ತಾ ಕೀಳರಿಮೆಯಲ್ಲಿ ಮುಳುಗುತ್ತಿದ್ದಾರೆ. ಅಂತಹ ಕೀಳರಿಮೆಯಿಂದ ಹೊರಬನ್ನಿ. ಕಲಿಕೆಯಲ್ಲಿ ಪ್ರೇರೇಪಣೆ ನೀಡುವ ವಾತಾವರಣ ನಿರ್ಮಿಸಿಕೊಳ್ಳಿ ಎಂದು ಹೇಳಿದರು.
Also read: ದೇವರು ಎಲ್ಲೆಡೆ ಇದ್ದಾನೆ, ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿ: ಸಿಎಂ ಸಿದ್ದರಾಮಯ್ಯ
ಪುಸ್ತಕಗಳ ಓದುವುಕೆ ಜ್ಞಾನವನ್ನು ನೀಡಿದರೆ, ಪಠ್ಯೇತರ ಚಟುವಟಿಕೆಗಳು ನಮ್ಮನ್ನು ಕ್ರೀಯಾಶೀಲಗೊಳಿಸುತ್ತದೆ. ಕೇಳುವಿಕೆಗಿಂತ ವಿಷಯಗಳನ್ನು ಗ್ರಹಿಸುವ ಶಕ್ತಿ ಬೆಳೆಸಿಕೊಳ್ಳಿ. ಆಗ ಮಾತ್ರ ಕಲಿಕೆಯ ಪರಿಪೂರ್ಣತೆ ಸಾಧ್ಯ. ಇನ್ನೊಬ್ಬರಿಗೆ ಸಹಾಯ ಮಾಡುವ, ಗೌರವ ನೀಡುವ ಸೌಜನ್ಯತೆ ಅತ್ಯಗತ್ಯ. ನಾವು ಇನ್ನೊಬ್ಬರಿಗೆ ಗೌರವ ನೀಡಿದಾಗ ಮಾತ್ರ ಮತ್ತೊಬ್ಬರ ಗೌರವಕ್ಕೆ ನಾವೂ ಅರ್ಹರಾಗುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಬುದ್ದಿಮತ್ತೆಗಳಲ್ಲಿ ವ್ಯತ್ಯಾಸವಿರುತ್ತದೆ. ಅಂತಹ ಬುದ್ದಿಮತ್ತೆಗಳನ್ನು ಗ್ರಹಿಸಿ ಶಿಕ್ಷಕರು ಮತ್ತು ವಿದ್ಯಾರ್ಥಿ ಮಿತ್ರರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಅಂಶಗಳನ್ನು ನೀಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಕಿಶೋರ್ ಕುಮಾರ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಟಿ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲರಾದ ಬಿ.ರಂಗಪ್ಪ, ಕಸ್ತೂರಬಾ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಕೆ.ಆರ್. ಉಮೇಶ್, ವಿದ್ಯಾರ್ಥಿನಿ ಸಂಘದ ಅಧ್ಯಕ್ಷರಾದ ನಂದಿತಾ, ಕಾರ್ಯದರ್ಶಿ ಲೀಲಾವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post