ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
‘ನಿನಗೆ ಗೊತ್ತಾ? ನನ್ನ ಎಲ್ಲಾ ಗಣಿತ ಎಲ್ಲಿಂದ ಬರುತ್ತೆ ಅಂತ? ತಾಯಿ ನಾಮಗಿರಿ (ಲಕ್ಷ್ಮಿ). ಅವಳು ನಾನು ಮಲಗಿದಾಗ ನನ್ನ ನಾಲಗೆಯಲ್ಲಿ ಬರೆಯುತ್ತಾಳೆ ಇಲ್ಲಾ ನಾನು ಪೂಜೆ ಮಾಡುವಾಗ ಹೇಳುತ್ತಾಳೆ’ ಎಂದು ಭಾರತೀಯ ಶ್ರೀನಿವಾಸ ರಾಮಾನುಜನ್ ಹೇಳುತ್ತಾ ಇದ್ದರೆ, ಅತ್ತ ತನ್ನ ಜೀವನವನ್ನೇ ಗಣಿತಕ್ಕೆ ಮುಡಿಪಾಗಿಟ್ಟ, ನಾಸ್ತಿಕ ಜಿ ಎಚ್ ಹಾರ್ಡಿ ಮೂಕನಾಗಿದ್ದ. ವಿಪರ್ಯಾಸ ಎಂದರೆ ಬಹುಶಃ ಆ ಹೊತ್ತಿಗೆ ರಾಮಾನುಜನ್ ಸಾವಿನ ಮನೆಯ ಕದ ತಟ್ಟಿಯಾಗಿತ್ತು.
ಹೌದು, ಎಲ್ಲಾ ಮಹಾನ್ ಸಾಧಕರಂತೆ ರಾಮಾನುಜನ್ ಕೂಡ ಅಲ್ಪಾಯುಷಿ ಆಗಿದ್ದರೇನೋ ಅನ್ನಿಸುತ್ತದೆ. ಈಗ ಹೇಳಲು ಹೊರಟಿರುವುದು ಮತ್ತೊಂದು ನೋಡಲೇಬೇಕಾದ ಚಿತ್ರ ಎಸ್ ರಾಮಾನುಜನ್ ಅವರ ಜೀವನದ ಕುರಿತಾದುದು. ಬೇಸರದ ಸಂಗತಿ ಎಂದರೆ ಹೆಮ್ಮೆಯ ಭಾರತೀಯನ ಕುರಿತು ವಿದೇಶಿಗರು ಮಾಡಿರುವ ಚಿತ್ರ ಇದು. ಗಣಿತಪ್ರೇಮ ಇದ್ದರೆ, ಒಂದೊಳ್ಳೆ ಸಿನಿಮಾ ನೋಡುವಷ್ಟು ಸಮಯವಿದ್ದರೆ ಖಂಡಿತಾ ನೋಡಿ ದಿ ಮ್ಯಾನ್ ವ್ಹು ನಿವ್ ಇನ್ಫಿನಿಟಿ The man who knew infinity ಅಂದರೆ ಅನಂತ ಜ್ಞಾನಿ ಎಸ್ ರಾಮಾನುಜನ್. S Ramanujan ಎಷ್ಟು ಒಳ್ಳೆಯ ಹೆಸರು. ನಿಜವಾಗಿಯೂ ಅತಿ ಅರ್ಥಪೂರ್ಣವಾಗಿ ಚಿತ್ರಿಸಿದ ಮತ್ತು ವಸ್ತುನಿಷ್ಟ ಎನ್ನಿಸಿಕೊಳ್ಳುವ ಸಿನಿಮಾ ಎಂದರೆ ತಪ್ಪಾಗಲಾರದು.

ಶ್ರೀನಿವಾಸ ರಾಮಾನುಜನ್ ಆಗಿ ದೇವ್ ಪಟೇಲ್
ಜಿಎಚ್ ಹಾರ್ಡಿ ಪಾತ್ರದಲ್ಲಿ ಜೆರೆಮಿ ಐರನ್ಸ್
ಜಾನಕಿಯಾಗಿ ದೇವಿಕಾ ಭಿಸೆ
ಜಾನ್ ಎಡೆನ್ಸರ್ ಲಿಟಲ್‌ವುಡ್ ಪಾತ್ರದಲ್ಲಿ ಟೋಬಿ ಜೋನ್ಸ್
ಸರ್ ಫ್ರಾನ್ಸಿಸ್ ಸ್ಪ್ರಿಂಗ್ ಆಗಿ ಸ್ಟೀಫನ್ ಫ್ರೈ
ಜೆರೆಮಿ ನಾರ್ಥಮ್ ಬರ್ಟ್ರಾಂಡ್ ರಸ್ಸೆಲ್ ಆಗಿ
ಮೇಜರ್ ಮ್ಯಾಕ್ ಮಹೊನ್ ಆಗಿ ಕೆವಿನ್ ಮೆಕ್‌ನಾಲಿ
ವೈದ್ಯ ಪಾತ್ರದಲ್ಲಿ ಎಂಜೊ ಸಿಲೆಂಟಿ
ರಾಮಾನುಜನ್ ಅವರ ತಾಯಿಯಾಗಿ ಅರುಂಧತಿ ನಾಗ್
ನಾರಾಯಣ ಅಯ್ಯರ್ ಪಾತ್ರದಲ್ಲಿ ಧೃತಿಮಾನ್ ಚಟರ್ಜಿ
ಪ್ರಶಾಂತ ಚಂದ್ರ ಮಹಲನೋಬಿಸ್ ಪಾತ್ರದಲ್ಲಿ ಶಾಜಾದ್ ಲತೀಫ್
ಅಯ್ಯಂಗಾರ್ ಆಗಿ ರೋಜರ್ ನಾರಾಯಣ್

ಒಂದೆಡೆ ತಮಿಳುನಾಡಿನ ಒಂದು ಹಳ್ಳಿಯ ಬ್ರಾಹ್ಮಣ ಕುಟುಂಬ, ಅದೇ ಕುಟುಂಬದ ಏಕೈಕ ಆಧಾರವಾದ ಪುತ್ರ, ದೇಶವನ್ನು ಆಳುತ್ತಿದ್ದ ಆಂಗ್ಲರು, ಭೋರ್ಗರೆಯುವ ಕಡಲಾಚೆಗಿನ ಹೊರ ಪ್ರಪಂಚ, ರಾಮಾನುಜನ್ ಮೇಲೆ ಜೀವವನ್ನೇ ಇಟ್ಟ ತಾಯಿ ಮತ್ತು ಪತ್ನಿ. ಇನ್ನೊಂದೆಡೆ ಮದ್ರಾಸ್ ಆಚೆ ನೋಡಿಯೇ ಇಲ್ಲವಲ್ಲ ಎಂಬ ಭಯ, ಅಲ್ಲದೇ ನನ್ನ ಯಾರೂ ನಂಬಿಯಾರು ಎಂಬ ದುಗುಡ ಮನೆಮಾಡಿತ್ತು. ಅದನ್ನೆಲ್ಲ ದಾಟಿ ನಿಷ್ಕಲ್ಮಶ ಹೃದಯಿ ಆಂಗ್ಲರ ಅಂಗಳದಲ್ಲಿ ನಿಂತಾಗ ಅದೇ ಚರ್ಮದ ಬಣ್ಣದ ಹಿಯ್ಯಾಳಿಕೆ, ಅಪನಂಬಿಕೆ, ಜೊತೆಗೆ ಅಸೂಯೆ. ದೇವರು ಬಾಗಿಲುಗಳನ್ನು ಮುಚ್ಚಿದಾಗ ಕಿಟಕಿಗಳನ್ನು ತೆರೆಯುತ್ತಾನೆ ಎಂಬ ಮಾತಿದೆ. ಅಂತೆಯೇ ರಾಮಾನುಜನ್ ಗೆ ಆ ಅಪರಿಚಿತರಲ್ಲಿ ಆತ್ಮೀಯರು ಸಿಕ್ಕರು. ಅಹುದು, ಹಾಗೆ ಸಿಕ್ಕವರು ಕೊನೆಯ ಉಸಿರಿನ ತನಕವೂ ಜೊತೆಯಾದರು.

ಇನ್ನೊಂದು ಬಹು ಮುಖ್ಯವಾಗಿ ಒಂದು ವಿಷಯ ಹೇಳಬೇಕೆಂದರೆ ವಿದೇಶಕ್ಕೆ ಹೊರಡುವ ಮೊದಲು ರಾಮಾನುಜನ್ ಜೀವನ ನಡೆಸಲು ಒಂದೆಡೆ ಗುಮಾಸ್ತನಾಗಿ ಕೆಲಸ ಮಾಡಬೇಕಾಗುತ್ತದೆ. ಆಗ ಎಲ್ಲೆಲ್ಲಿ ರಾಮಾನುಜನ್ ತನ್ನ ಕೆಲಸಕ್ಕೆ ಪ್ರಯತ್ನ ಮಾಡಿದ್ದರು ಎಂಬುದರ ಕುರಿತು ನಾರಾಯಣ ಅಯ್ಯರ್ ಜೊತೆ ಚರ್ಚೆ ನಡೆಯುತ್ತದೆ. ಆಗ ಅಯ್ಯರ್ ಆಗ ಹೆಸರೇ ಮಂದ ರಸ ಎಂದು ಇಟ್ಟುಕೊಂಡಿರುವ ಈ ಮದ್ರಾಸಿನಲ್ಲಿ ನೀನು ಏನು ಸಾಧನೆ ಮಾಡಲು ಸಾಧ್ಯ? ಎಂದು ಕೇಳುತ್ತಾರೆ. ಇದೊಂದು ಹಳೆಯ ಹೆಸರು ಆಗಿರಲಿಕ್ಕೂ ಸಾಕು. ಹೀಗೆ ಹೇಳುತ್ತಾ ಹೋದರೆ, ಇಡೀ ಕಥೆಯನ್ನೇ ಹೇಳಿಬಿಡಬಹುದು. ಇದೇ ಕಥೆ ಬಾಲಿವುಡ್ಡಿನ ಮಹಾನ್ ನಿರ್ದೇಶಕರ ಕೈಗೆ ಸಿಕ್ಕಿದ್ದರೆ ಮೂಲ ವಸ್ತುವನ್ನೇ ಅರಸಬೇಕಿತ್ತೇನೋ? ಸಂಭಾಷಣೆಗಳ ಪ್ರತೀ ಅಕ್ಷರವೂ ಕಥೆಯೊಂದಿಗೆ ಸಾಗುವ ಕಾರಣ ಹೆಚ್ಚಿನ ಗಮನ ಅದರ ಮೇಲೆ ಕೊಡಬೇಕಾಗುತ್ತದೆ. ಬ್ರಿಟಿಷರ ಕಾಲದಲ್ಲಿ, ಅವರ ಎದುರೇ ಒಬ್ಬ ಭಾರತೀಯ ತಮ್ಮ ಸರಿಸಮನಾಗಿ ಗುರುತಿಸಿಕೊಂಡ ಎಂದು ಅವರು ಹೇಳಲು ಬಯಸಿದರೂ ಒಂದೆಡೆ ರಾಮಾನುಜನ್ ರ ಗಣಿತ ದೇವರಿಗೆ ಸಮ ಎಂದೂ ಹೇಳಲಾಗಿದೆ. ಒಬ್ಬ ಏನೂ ಅರಿಯದ ಮುಗ್ಧ ತನ್ನ ಒಡಲ ಗಣಿತದ ಒಲವಿಗೆ ರೆಕ್ಕೆ ಕಟ್ಟಿ, ಕಡಲ ಆಚೆ ಜೀಕಿ, ಅಸಡ್ಡೆ ಅಸೂಯೆ ಅನಾದರಗಳ ಮೀರಿ, ಇವೆಲ್ಲದರ ನಡುವೆ ಗೆಲ್ಲುವ ಅನಾರೋಗ್ಯ..! ಗಣಿತದ ಅಗಣಿತ ಸಿರಿವಂತ ಶ್ರೀನಿವಾಸರ ಚಿತೆಗೆ ಅಗ್ನಿ ಸ್ಪರ್ಶವಾದಾಗ ಅವರಿಗೆ ಮೂವತ್ತಮೂರರ ಹರೆಯ. ದೇವರ ಗಣಿತ ತಪ್ಪಿತೇನೋ ಅವರ ಆಯಸ್ಸು ಬಹಳ ಬರೆದೇ ಇರಲಿಲ್ಲ. ಹೀಗೆ ಗಣಿತದ ಒರತೆಯಾಗಿ, ನದಿಯಾಗಿ, ಕಡಲಾಗುವ ರಾಮಾನುಜನ್ ಎಂದೆಂದೂ ಜೀವಂತ ಸೆಲೆ.
ಇನ್ನುಳಿದಂತೆ ಚಿತ್ರ ನೋಡ ಬಯಸುವ ವಿದ್ಯಾರ್ಥಿ ಅಥವಾ ಶಿಕ್ಷಕರ ಹಾಗೂ ಪೋಷಕರ ಕುರಿತು ಹೇಳುವುದಾದರೆ ಗಣಿತ ಕಲಿಯಲು, ಉರು ಹೊಡೆಯಲು, ತಪ್ಪಿಸಿಕೊಳ್ಳಲು ಹೇಳುವ ಬದಲು ಅದನ್ನು ಪ್ರೀತಿಸಲು ಯಾಕೆ ಹೇಳಿಕೊಡಬಾರದು? ಗಣಿತವೇ ಜಗತ್ತು. ಲೆಕ್ಕ, ತೂಕ, ಅಳತೆ ಬಾರದ ಮನುಷ್ಯನೇ ಇಲ್ಲ. ಹೇಳಿಕೊಡುವ ವಿಧಾನ ಬದಲಾಗಬೇಕು ಅನ್ನಿಸುತ್ತದೆ. ‘ಓ ಗಣಿತನಾ?! ಏನಗಲ್ಲ ಬಿಡ್ರಿ, ನಮ್ಗೂ ಶಾಲೇಲಿ ಅರ್ಥ ಆಗ್ತಾ ಇರ್ಲಿಲ್ಲ. ಇನ್ನು ಇವ್ರಿಗೆ ಎಲ್ ಆಗತ್ತೆ? ಸುಮ್ನೆ ನಾನೊಂದು ಕಡೆ ಹೇಳ್ತೀನಿ ಅಲ್ಲೇ ಟ್ಯೂಷನ್ ಹಾಕ್ಬಿಡಿ ಅಷ್ಟೇ’ ಅನ್ನುವ ಮಾತು ಸಾಮಾನ್ಯ. ಅಲ್ಲಿಗೆ ಆ ವಿದ್ಯಾರ್ಥಿ ಶತಾಯ ಗತಾಯ ಉರು ಹೊಡೆದು ಪಾಸ್ ಆದರೆ ಸಾಕು. ಗಣಿತದ ಹುಚ್ಚು ಪ್ರೀತಿ ಹುಟ್ಟಿಸಿ. ಗಣಿತ ಕಲಿತು ಕೆಟ್ಟವರಿಲ್ಲ. ಜಗತ್ತಿನ ಅತಿ ಉತ್ತಮ ಗಣಿತ ವಿದ್ವಾಂಸರ ಹೆಸರು ಪಟ್ಟಿ ಮಾಡಿದರೆ ಮೊದಲ ಹತ್ತು ಜನರಲ್ಲಿ ಭಾರತೀಯರು ಐದು ಜನ ಇರಲಿಕ್ಕೂ ಸಾಕು. ಅಷ್ಟು ಗಣಿತ ಸಿರಿವಂತ ದೇಶ ಭಾರತ. ಇನ್ನು ಮೊದಲು ಅಮೆಜಾನ್ ಪ್ರೈಮ್ ನಲ್ಲಿ ಇದ್ದ ಚಿತ್ರ ಈಗ ಯೂಟ್ಯೂಬ್ ನಲ್ಲಿದೆ. ಉಚಿತವಾಗಿ ನೋಡಬಹುದು. ಮತ್ತು ನೋಡಲೇಬೇಕಾದ ಚಿತ್ರ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post