ಕಲ್ಪ ಮೀಡಿಯಾ ಹೌಸ್ | ಸೊರಬ |
ಮಕ್ಕಳಲ್ಲಿ ವ್ಯವಹಾರ ಕೌಶಲ್ಯವನ್ನು ವೃದ್ಧಿಸುವುದರ ಜೊತೆಗೆ ಗಣಿತದ ಮೂಲ ಕಲ್ಪನೆಗಳನ್ನು ಮೂಡಿಸುವ ಉದ್ದೇಶದಿಂದ ತಾಲೂಕಿನ ಗೆಂಡ್ಲ ಗ್ರಾಮದ ಸ.ಕಿ.ಪ್ರಾ ಶಾಲೆಯ ಆವರಣದಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು.
ಸಂತೆಯಲ್ಲಿ ಮಕ್ಕಳು ತಾವು ಮನೆಯಲ್ಲಿ ಬೆಳೆದು ತಂದಿದ್ದ ತಾಜಾ ತರಕಾರಿಗಳನ್ನು ಅತ್ಯಂತ ಉತ್ಸಾಹದಿಂದ ಮಾರಾಟ ಮಾಡುವಲ್ಲಿ ನಿರತರಾಗಿದ್ದು ಕಂಡು ಬಂದಿತು. ಪೋಷಕರು, ಸಾರ್ವಜನಿಕರು ಮಕ್ಕಳ ಸಂತೆಗೆ ಆಗಮಿಸಿ ವಸ್ತುಗಳನ್ನು ಖರೀದಿಸಿ ಮಕ್ಕಳನ್ನು ಹುರಿದುಂಬಿಸಿದರು.
ತರಕಾರಿ, ಸೊಪ್ಪು, ಹಣ್ಣುಗಳು, ದಿನಸಿ ವಸ್ತು, ಸ್ವಚ್ಛ ಹಾಗೂ ಪರಿಶುದ್ಧ ತಿಂಡಿ-ತಿನಿಸುಗಳು ಸೇರಿದಂತೆ ಹಲವು ಬಗೆಯ ವಸ್ತುಗಳನ್ನು ತಂದು ಅವುಗಳ ಪ್ರಚಾರ ಮಾಡುತ್ತಾ ಬಿರುಸಿನ ವ್ಯಾಪಾರದ ಅನುಭವ ಪಡೆದರು.
ವಿದ್ಯಾರ್ಥಿಗಳು ಸಂತೆ ಮೇಳದಲ್ಲಿ ವಿಶೇಷವಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಟ್ಟಿರುವುದು ಗಮನಾರ್ಹವಾಗಿತ್ತು. ಇದನ್ನು ಗಮನಿಸಿದ ಪೋಷಕರು, ಗ್ರಾಮಸ್ಥರು, ಸಂತೆ ಮೇಳದಲ್ಲಿ ಖರೀದಿಗೆ ಬಂದ ಸಾರ್ವಜನಿಕರು ಮಕ್ಕಳ ಉತ್ತಮ ಬೆಳವಣಿಗೆ ನೋಡಿ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೆ ಅನೇಕ ಪೋಷಕರು ಈ ಚಟುವಟಿಕೆಗೆ ಪೂರಕವಾಗಿ ಸಹಕರಿಸಿದ್ದು ಕಂಡುಬoದಿತು.
ಈ ವೇಳೆ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಜಿ. ಜೆ. ಯಶೋಧ, ಮುಖ್ಯೋಪಾಧ್ಯಯ ಬಸವರಾಜಪ್ಪ, ಸಹ ಶಿಕ್ಷಕ ಸಿದ್ದಪ್ಪ, ಅರಣ್ಯ ಇಲಾಖೆ ನಿವೃತ್ತ ಅರಣ್ಯ ರಕ್ಷಕ ರಾಮಪ್ಪ ಜಡ್ಡಳ್ಳಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜಪ್ಪ, ಗ್ತಾಮಸ್ಥರಾದ ವಿರೇಶ್, ವೀರಭದ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















