ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯಿಂದ ಫೆ.18ರಂದು ಬೆಳಿಗ್ಗೆ 10ಕ್ಕೆ ನೆಹರು ಕ್ರೀಡಾಂಗಣದಲ್ಲಿ ಪತ್ರಕರ್ತರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಹೇಳಿದರು.
ಅವರು ಇಂದು ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಪತ್ರಕರ್ತರು ಸದಾ ಒತ್ತಡದಲ್ಲಿ ಇರುತ್ತಾರೆ. ಅವರ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕ್ರೀಡಾ ಕೂಟದಲ್ಲಿ ಪತ್ರಕರ್ತರ ಕುಟುಂಬವೂ ಕೂಡ ಭಾಗವಹಿಸಬೇಕು. ಕ್ರೀಡಾ ಕೂಟದಲ್ಲಿ ಹಲವು ಕ್ರೀಡೆಗಳನ್ನು ಮಹಿಳೆಯರಿಗೆ, ಮಕ್ಕಳಿಗೆ ಮತ್ತು ವಯಸ್ಸಿನ ಆಧಾರದಲ್ಲಿ ಪತ್ರಕರ್ತರಿಗೆ ಆಯೋಜಿಸಲಾಗಿದೆ. ಈ ಕ್ರೀಡೆಗಳಲ್ಲಿ ಗೆದ್ದವರಿಗೆ ಬಹುಮಾನ ನೀಡಲಾಗುವುದು ಎಂದರು.
ಬಕೆಟ್ ಇನ್ ದ ಬ್ಲಾಲ್, ಗುಂಡು ಎಸೆತ, ವಿವಿಧ ಓಟಗಳು, ಹಗ್ಗ ಜಗ್ಗಾಟ, ಮಹಿಳೆಯರಿಗೆ ಮಡಿಕೆ ಒಡೆಯುವುದು ಸೇರಿದಂತೆ ಇತರ ಸ್ಪರ್ಧೆಗಳು, ಆಶುಭಾಷಣ ಸ್ಪರ್ಧೆ, ಮಕ್ಕಳಿಗಾಗಿ ವಿವಿಧ ಆಟಗಳನ್ನು ಆಯೋಜಿಸಲಾಗಿದೆ. ಪತ್ರಕರ್ತರು ಕುಟುಂಬ ಸಮೇತ ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಸಂತುಷ್ಟರಾಗಬೇಕು ಎಂದು ಮನವಿ ಮಾಡಿದರು.
ಕ್ರೀಡಾಕೂಟವನ್ನು ಬೆಳಿಗ್ಗೆ 10ಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್‍ಗೌಡ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‍ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಕೆ.ಯು.ಡಬ್ಲ್ಯೂ.ಜೆ.ನಿರ್ದೇಶಕ ಎನ್.ರವಿಕುಮಾರ್, ರಾಷ್ಟ್ರೀಯ ಮಂಡಳಿ ಸದಸ್ಯ ಬಂಡಿಗಡಿ ನಂಜುಂಡಪ್ಪ ಉಪಸ್ಥಿತರಿರುವರು ಎಂದರು.
ಸಂಜೆ 4.30ಕ್ಕೆ ಬಹುಮಾನ ವಿತರಣಾ ಸಮಾರಂಭವಿದ್ದು, ಮುಖ್ಯ ಅತಿಥಿಗಳಾಗಿ ಪದವಿದರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ.ಗೋಪಿನಾಥ್, ಪಾಲಿಕೆ ಆಯುಕ್ತ ಮಾಯಣ್ಣಗೌಡ, , ವಾರ್ತಾಧಿಕಾರಿ ಆರ್.ಮಾರುತಿ ಉಪಸ್ಥಿತರಿರುವರು ಎಂದರು.
Also read: ಸಿದ್ದರಾಮಯ್ಯರಿಂದ ನಾಳೆ ಜನಪರ ಬಜೆಟ್ ಮಂಡನೆ: ಆಯನೂರು ಮಂಜುನಾಥ್
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ಉಪಾಧ್ಯಕ್ಷರುಗಳಾದ ಕೆ.ಎಸ್.ಹುಚ್ಚ್ರಾಯಪ್ಪ, ಆರ್.ಎಸ್.ಹಾಲಸ್ವಾಮಿ, ಕಾರ್ಯದರ್ಶಿ ಕೆ.ಆರ್.ಸೋಮನಾಥ್, ಗಾ.ರಾ.ಶ್ರೀನಿವಾಸ್, ಖಜಾಂಚಿ ಎಸ್.ಆರ್.ರಂಜಿತ್ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯತ್ವಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದ್ದು ಫೆ.29 ಕೊನೆಯ ದಿನವಾಗಿದೆ ಎಂದು ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 7500 ಪತ್ರಕರ್ತರಿದ್ದಾರೆ. ಜಿಲ್ಲೆಯಲ್ಲಿ 240ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ ಸದಸ್ಯತ್ವ ನವೀಕರಣ ಮತ್ತು ಹೊಸದಾಗಿ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಫೆ.29 ಅಂತಿಮ ದಿನವಾಗಿದೆ. ಪತ್ರಕರ್ತರು ಅಷ್ಟರೊಳಗೆ ನಿಗಧಿತ ಅರ್ಜಿಯಲ್ಲಿ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು ಎಂದರು.
ಈ ಬಾರಿ ಹೊಸದಾಗಿ ಅರ್ಜಿ ಸಲ್ಲಿಸುವವರು ಕನಿಷ್ಠ ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು. ಆದರೆ ನವೀಕರಣಕ್ಕೆ ಇದು ಅನ್ವಯಿಸುವುದಿಲ್ಲ. ಎಂದಿನಂತೆ ಇತರೆ ಸಂಘಟನೆಗಳಲ್ಲಿ ಸದಸ್ಯತ್ವ ಹೊಂದಿರುವವರಿಗೆ ಮತ್ತು ರಾಜಕೀಯ ಪಕ್ಷಗಳಲ್ಲಿ ಸದಸ್ಯತ್ವ ಪಡೆದವರಿಗೆ ಅವಕಾಶವಿರುವುದಿಲ್ಲ. ಕಾರ್ಮಿಕ ಕಾಯ್ದೆಯಡಿಯಲ್ಲಿ ಪತ್ರಕರ್ತರ ಸಂಘ ಬರುತ್ತದೆ. ಪತ್ರಕರ್ತರ ಕ್ಷೇಮಾಭಿವೃದ್ಧಿ , ಬಸ್ ಪಾಸ್, ಆರೋಗ್ಯ ಕಾರ್ಡ್ ಹೀಗೆ ಹಲವು ಕಲ್ಯಾಣಕ್ಕಾಗಿ ಸಂಘ ಕೆಲಸ ಮಾಡುತ್ತಿದೆ. ನಾಳೆಯ ಬಜೆಟ್‍ನಲ್ಲಿ ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಘೋಷಣೆ ಆಗಲಿದೆ ಎಂದರು.
ಹೆಚ್ಚಿನ ವಿವರ ಮತ್ತು ಅರ್ಜಿಗಳಿಗಾಗಿ ಮೀಡಿಯಾ ಹೌಸ್ ಅಥವಾ ನಗರ ಕಾರ್ಯದರ್ಶಿ ಕೆ.ಆರ್. ಸೋಮನಾಥ್, ದೂ.ಸಂ.: 9448628133 ಅವರನ್ನು ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post