ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಮ್ಮಲ್ಲಿರುವ ಜ್ಞಾನವನ್ನು ಹಂಚುವುದರ ಮೂಲಕ ಸಮಾಜಕ್ಕೆ ನಾವು ಉಪಕಾರಿಯಾಗಬೇಕು. ನಮ್ಮ ಸಾಧನೆಯ ಜೊತೆಜೊತೆಗೆ ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನವನ್ನು ನಾವು ಹಂಚಬೇಕು ಹಾಗೂ ನಮ್ಮ ಅನುಭವಗಳನ್ನು ನಾವು ದಾಖಲಿಸಬೇಕು ಎಂದು ಡಾ. ಪಾದೇಕಲ್ಲು ವಿಷ್ಣುಭಟ್ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ 81 ನೇ ವರ್ಷದ ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದ ಹಿರಿಯ ವಿದ್ವಾಂಸ ಹಾಗೂ ಭಾಷಾಶಾಸ್ತ್ರಜ್ಞರಾದ ಡಾ. ಪಾದೇಕಲ್ಲು ವಿಷ್ಣುಭಟ್ , ಹವ್ಯಕ ಮಹಾಸಭೆ ಸಾಧಕರನ್ನು ಸನ್ಮಾನಿಸುತ್ತಿರುವುದು ಈ ಸಾಧಕ ನಮ್ಮವ ಎಂದು ಸಮಾಜಕ್ಕೆ ಪರಿಚಯಿಸುವ ಕಾರ್ಯ. ಪ್ರತಿಭೆಯನ್ನು ಗೌರವಿಸುವುದು ಇನ್ನಷ್ಟು ಸಾಧನೆಗಳಿಗೆ ಪ್ರೇರಣೆಯಾಗಲಿದೆ. ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ನಾವೆಲ್ಲ ಮಹಾಸಭೆಯ ಜೊತೆಯಾಗೋಣ ಎಂದರು.

ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಮಾತನಾಡಿ, ಹವ್ಯಕ ಸಮಾಜ ಯಾವುದೋ ಘರ್ಷಣೆ ಇತ್ಯಾದಿಗಳ ಕಾರಣದಿಂದ ಹುಟ್ಟುಕೊಂಡಿದ್ದಲ್ಲ. ಲೋಕಕಲ್ಯಾಣದ ಕಾರಣಕ್ಕಾಗಿಯೇ ಹುಟ್ಟಿಕೊಂಡವರು ಹವ್ಯಕರು. ಸ್ವಾತಂತ್ರ್ಯ ಪೂರ್ವದಲ್ಲೇ ಸಂಘಟಿತರಾಗಿ ಈ ಮಹಾಸಭೆಯನ್ನು ಹವ್ಯಕರು ಸಂಘಟಿಸದರು ಎಂದರೆ ನಮ್ಮ ಸಮಾಜದ ಮುಂದಾಲೋಚನೆಯನ್ನು ಗುರುತಿಸಲು ಸಾಧ್ಯ. ಹವ್ಯಕ ಮಹಾಸಭೆಯು 81 ನೇ ಸಂಸ್ಥಾಪನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇಷ್ಟು ವರ್ಷಗಳಲ್ಲಿ ಮಹಾಸಭೆ ಎಷ್ಟು ಆಸ್ತಿಯನ್ನುಗಳಿಸಿದೆ ಎಂದು ಆಲೋಚಿಸುವುದಕ್ಕಿಂತ, ಪ್ರತಿಭಾವಂತ ಹವ್ಯಕ ಸಮಾಜವೇ ಮಹಾಸಭೆಯ ಆಸ್ತಿ ಎಂದು ಅಭಿಪ್ರಾಯ ಪಟ್ಟರು.

Also read: ತೀರ್ಥಹಳ್ಳಿ: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲು
ಹವ್ಯಕ ವಿಭೂಷಣ ಪ್ರಶಸ್ತಿ ಸ್ವೀಕರಿಸಿ ಹೆಚ್.ಎಂ ತಿಮ್ಮಪ್ಪ ಕಲಸಿ ಮಾತನಾಡಿ, ನಮ್ಮವರು ನಮಗೆ ಕೊಡುವ ಪ್ರಶಸ್ತಿ ಅವಿಸ್ಮರಣೀಯವಾದುದು. ನೈಜವಾಗಿ ನೋಡಿದರೆ ನಾವು ಅಲ್ಪಸಂಖ್ಯಾತರಾಗಿದ್ದೇವೆ. ಆದರೆ ನಮಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಆದರೆ ನಮ್ಮಲ್ಲಿರುವ ಪ್ರತಿಭೆಯಿಂದ ನಾವು ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದೇವೆ ಎಂದರು.

ಹವ್ಯಕ ಭೂಷಣ ಪ್ರಶಸ್ತಿ ಸ್ವೀಕರಿಸಿ ಗಣೇಶ್ ಎಲ್ ಭಟ್ ಮಾತನಾಡಿ, ಅಯೋಧ್ಯೆಯ ರಾಮಲಲಾ ಮೂರ್ತಿಯನ್ನು ಕೆತ್ತುವಾಗಿನ ಕುರಿತಾದ ಅನುಭವವನ್ನು ಹಂಚಿಕೊಂಡ ಇವರು, ಹವ್ಯಕರು ಮೂರ್ತಿ ಪೂಜಕರು. ನಾವು ಶಿಲ್ಪಶಾಸ್ತ್ರದ ಕುರಿತಾಗಿಯೂ ಬಲ್ಲವರಾದರೆ ಇನ್ನೂ ಹೆಚ್ಚಿನ ಅಧ್ಯಾತ್ಮ ಸಾಧನೆ ಸಾಧ್ಯ ಎಂದರು.

ಇದಕ್ಕೂ ಮೊದಲು, ಹವ್ಯಕ ವಿಭೂಷಣ, ಹವ್ಯಕ ಭೂಷಣ, ಹವ್ಯಕ ಶ್ರೀ ಹಾಗೂ ಹವ್ಯಕ ಸೇವಾಶ್ರೀ ಪ್ರಶಸ್ತಿಯನ್ನು ಆಯ್ಕೆಯಾದ ಸಾಧಕರಿಗೆ ನೀಡಿ ಮಹಾಸಭೆಯ ಗೌರವ ಸಲ್ಲಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 13 ಜನರಿಗೆ ಪಲ್ಲವಪುರಸ್ಕಾರ ನೀಡಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಕುಮಾರಿ ತುಳಸಿ ಹೆಗಡೆ ಅವರಿಂದ ನಡೆದ ಯಕ್ಷನೃತ್ಯ ರೂಪ ಸಭಾಸದರ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಶಸ್ತಿ ಪುರಸ್ಕೃತರು:
ಹವ್ಯಕ ವಿಭೂಷಣ
- ಹೆಚ್. ಎಂ. ತಿಮ್ಮಪ್ಪ ಕಲಸಿ – ಸಾಹಿತ್ಯ
ಹವ್ಯಕ ಭೂಷಣ
- ಗಣೇಶ್ ಎಲ್ ಭಟ್ – ಶಿಲ್ಪಶಾಸ್ತ್ರ
- ಶಿವಾನಂದ ಕಳವೆ – ಪರಿಸರ
- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ – ಯೋಗ
ಹವ್ಯಕ ಶ್ರೀ
- ಗಿರಿಧರ್ ದಿವಾನ್ – ಛಾಯಾಗ್ರಹಣ, ಸಂಗೀತ ನಿರ್ದೇಶನ
- ಗಣೇಶ್ ದೇಸಾಯಿ – ಸಂಗೀತ
- ಮಂಗಳ ಬಾಲಚಂದ್ರ – ಕಥಾಕೀರ್ತನಕಾರರು
ಹವ್ಯಕ ಸೇವಾಶ್ರೀ
- ಶ್ರೀಕಾಂತ ಹೆಗಡೆ ಅಂತ್ರವಳ್ಳಿ, ವಿಶ್ರಾಂತ ಸಂಪಾದಕರು ‘ಹವ್ಯಕ’ ಪತ್ರಿಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post