ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ಮೋದಿಯವರಿಗೆ ದೇಶದ ನಾರಿ ಶಕ್ತಿ ಸಂಪೂರ್ಣ ಬೆಂಬಲ ನೀಡಿದೆ. ನಾರಿ ಶಕ್ತಿಯನ್ನು ರಾಷ್ಟ್ರ ಶಕ್ತಿಯನ್ನಾಗಿ ಪ್ರಧಾನಿ ರೂಪಿಸಿದ್ದಾರ ಎಂದು ರಾಜ್ಯ ಬಿಜೆಪಿ ಮಹಿಳಾ ಅಧ್ಯಕ್ಷೆ ಕುಮಾರಿ ಮಂಜುಳ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ಬೂತ್ ಮಟ್ಟದಲ್ಲಿ ನಾರಿ ಶಕ್ತಿ ವೃದ್ಧಿಯಾಗಿದೆ. ಪ್ರಧಾನಿ ಮೋದಿಯವರು ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರು ತಮ್ಮ ಕ್ಷೇತ್ರಕ್ಕೆ ಏನೇನು ಅಭಿವೃದ್ಧಿ ಮಾಡಿದ್ದಾರೆ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಏನೇನು ಕೊಡುಗೆ ನೀಡಿದೆ ಎಂಬುವುದರ ಬಗ್ಗೆ ಮನೆ ಮನೆಗೆ ತೆರಳಿ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಮಹಿಳೆಯರಿಗೆ ಅಧಿಕಾರ ಕೊಡುವ ಅಧಿನಿಯಮವನ್ನು ಪ್ರಧಾನಿಯವರು ತಂದರು. ಬಿ.ಎಸ್.ಯಡಿಯೂರಪ್ಪನವರು ಸ್ಥಳೀಯ ಸಂಸ್ಥೆಗಳಿಗೆ ಶೇ.50ರಷ್ಟು ಮಹಿಳಾ ಮೀಸಲಾತಿ ನೀಡಿದರು. ಸೈನ್ಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದ ಮೀಸಲಾತಿ ದೊರೆಯಿತು. ಹಿಂದುಳಿದ ಮಹಿಳೆ ರಾಷ್ಟ್ರಪತಿಯಾದರು. ಎಲೆಮರೆ ಕಾಯಿಯಂತೆ ದೇಶದ ಮೂಲೆ ಮೂಲೆಯಲ್ಲಿರುವ ಮಹಿಳಾ ಪ್ರತಿಭೆಗಳಿಗೆ ಪದ್ಮಶ್ರೀ ಪ್ರಶಸ್ತಿ ದೊರೆಯಿತು. ಸುಮಾರು 50 ಕೋಟಿ ಮಹಿಳೆಯರು ಜನ್‍ಧನ್ ಖಾತೆ ತೆರೆಯುವುದರ ಮೂಲಕ 3 ಮಿಲಿಯನ್ ಡಾಲರ್ ಆರ್ಥಿಕ ವ್ಯವಹಾರ ನಡೆಸಿದ್ದಾರೆ. ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಯ ಮೂಲಕ ಮಹಿಳಾ ಅಕ್ಷರತೆ ಪ್ರಮಾಣ ಜಾಸ್ತಿಯಾಗಿದೆ. ಶೇ.28ರಷ್ಟು ವಿದ್ಯಾರ್ಥಿನಿಯರು ಡ್ರಾಫ್‍ಔಟ್ ಆಗುವುದು ನಿಂತಿದೆ. ಲಕ್‍ಪತಿ ದೀದಿ ಯೋಜನೆಯಡಿ ಸಹಕಾರಿ ಸಂಘಗಳ ಮೂಲಕ ಸ್ವಂತ ಉದ್ಯೋಗ ಮಾಡುವ ಮಹಿಳೆಯರ ಸಂಖ್ಯೆ 3 ಕೋಟಿ ದಾಟಿದೆ. ಸ್ಟಾರ್ಟ್‍ಅಪ್ ಇಂಡಿಯಾ ಸಂಖ್ಯೆಯಲ್ಲಿ ವೃದ್ಧಿಯಾಗಿದೆ. ಕೃಷಿ ಕೆಲಸದಲ್ಲಿ ಶೇ.70ರಷ್ಟು ಮಹಿಳೆಯರು ಭಾಗವಹಿಸುತ್ತಿದ್ದು, ರಾಜ್ಯ ಸರ್ಕಾರ ಕೃಷಿ ಸಮ್ಮಾನ್‍ಗೆ ನೀಡುತ್ತಿದ್ದ, ನಾಲ್ಕು ಸಾವಿರವನ್ನು ನಿಲ್ಲಿಸಿ ರೈತ ಮಹಿಳೆಯರಿಗೆ ದ್ರೋಹ ಮಾಡಿದ್ದಾರೆ. ಶೇ.60ರಷ್ಟು ಮಹಿಳೆಯರು ಹೈನುಗಾರಿಕೆ ಮಾಡುತ್ತಿದ್ದು, ಅವರಿಗೆ ಬರಬೇಕಾಗಿದ್ದ ಹಾಲಿನ ಪ್ರೋತ್ಸಾಹ ಧನವನ್ನು ಕೂಡ ಕಾಂಗ್ರೆಸ್ ಸರ್ಕರ ನಿಲ್ಲಿಸಿದೆ. ಸ್ವಸಹಾಯ ಸಂಘ ಸಂಜೀವಿನಿ ಒಕ್ಕೂಟಗಳ ಮೂಲಕ ಕೇಂದ್ರದ ನೆರವು ಪಡೆದು, 500 ಕೋಟಿ ವ್ಯವಹಾರವನ್ನು ಮಹಿಳೆಯರು ಮಾಡಿದ್ದಾರೆ.
Also read: ನಾನಾಗಲೇ ಮೊದಲ ಸ್ಥಾನದಲ್ಲಿದ್ದೇನೆ, 2ನೇ ಸ್ಥಾನಕ್ಕೆ ಅವರಿಬ್ಬರಲ್ಲಿ ಪೈಪೋಟಿ: ಈಶ್ವರಪ್ಪ ಹೇಳಿದ್ದೇನು?
ಉಜಾಲ ಯೋಜನೆಯಡಿ ಜಿಲ್ಲೆಗೆ ಸಬ್ಸಿಡಿ ದರದಲ್ಲಿ 12 ಸಾವಿರ ಗ್ಯಾಸ್ ಸಂಪರ್ಕವನ್ನು ನೀಡಲಾಗಿದೆ. ಶೇ.90ರಷ್ಟು ಹಳ್ಳಿಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಕಲ್ಪಿಸಲಾಗಿದೆ. ಸ್ವನಿಧಿ ಯೋಜನೆಯಡಿ ಸಾಲ ನೀಡಲಾಗಿದ್ದು, ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗಿದೆ. ಶೇ.70ರಷ್ಟು ಮಹಿಳೆಯರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿಗೆ ಸಾಲ ನೀಡಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಜಿಲ್ಲೆಯಲ್ಲಿ ನೂರಾರು ಕೋಟಿ ರೂ.ಗಳ ಸೌಲಭ್ಯವನ್ನು ನೀಡಲಾಗಿದೆ. ಕಾಂಗ್ರೆಸ್ ತನ್ನ ಬ್ಲಾಕ್‍ಮೇಲ್ ತಂತ್ರಗಳಿಂದ ನಾರಿಯರಿಗೆ ದಿಕ್ಕುತಪ್ಪಿಸುತ್ತ ಇದೆ. ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುತ್ತ ಕಾನೂನು ಸುವ್ಯವಸ್ಥೆಯಲ್ಲಿ ಪುಂಡರ ಕೈಯಲ್ಲಿ ಸರ್ಕಾರ ನೀಡಿದೆ. ನೂರಾರು ಮಹಿಳೆಯರ ಮೇಲೆ ದೌರ್ಜನ್ಯವಾದರೂ ಕೂಡ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಶೌಚಾಲಯ ನಿರ್ಮಾಣ ಮಾಡಿ ಮಹಿಳೆಯರ ಸ್ವಾಭಿಮಾನವನ್ನು ಪ್ರಧಾನಿ ಮೋದಿಯವರು ಎತ್ತಿಹಿಡಿದಿದ್ದಾರೆ. ಮಹಿಳೆಯರಿಗೆ ಬೇಕಾದ ಅನೇಕ ಶಾಶ್ವತ ಗ್ಯಾರಂಟಿಗಳನ್ನು ಈಗಗಲೇ ಪ್ರಧಾನಿಯವರು ನೀಡಿ, ನಾರಿ ಶಕ್ತಿಗೆ ಶಕ್ತಿ ತುಂಬಿದ್ದಾರೆ ಎಂದರು.
ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಗಾಯಿತ್ರಿ ಮಲ್ಲಪ್ಪ ಮಾತನಾಡಿ, ಈಗಾಗಲೇ 18 ಮಹಾಶಕ್ತಿ ಕೇಂದ್ರಗಳಲ್ಲಿ ಯಶಸ್ವಿಯಾಗಿ ಮಹಿಳಾ ಸಮಾವೇಶ ಮಾಡಿದ್ದು, ಯುಗಾದಿಯ ನಂತರ ಉಳಿದ ಎಲ್ಲಾ ಮಹಾಶಕ್ತಿ ಕೇಂದ್ರಗಳಲ್ಲಿ ಮಹಿಳಾ ಸಮಾವೇಶ ನಡೆಯಲಿದೆ. ಪ್ರತಿ ಸಮಾವೇಶದಲ್ಲೂ ಸಾವಿರಕ್ಕೂ ಹೆಚ್ಚು ಬೂತ್ ಮಟ್ಟದ ಮಹಿಳಾ ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿ ಸಂಸದ ರಾಘವೇಂದ್ರರವರಿಗೆ ಶಕ್ತಿ ತುಂಬಿದ್ದಾರೆ. ಎರಡು ತಂಡಗಳಾಗಿ ವಿಭಜನೆ ಮಾಡಿ, ಬೆಳಿಗ್ಗೆ ಮತ್ತು ಸಂಜೆ ಮತದಾರರನ್ನು ಭೇಟಿಯಾಗಿ ಮತಗಳಾಗಿ ಪರಿವರ್ತನೆ ಮಾಡುವಲ್ಲಿ ಕಾರ್ಯತಂತ್ರ ರೂಪಿಸಿದ್ದೇವೆ ಎಂದರು.
ಮಹಿಳೆ ಅಡಿಗೆ ಮಾಡಲು ಮಾತ್ರ ಎಂಬ ಶಾಮನೂರು ಶಿವಶಂಕರಪ್ಪನವರ ಹೇಳಿಕೆಯನ್ನು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಖಂಡಿಸುತ್ತದೆ. ಮಹಿಳೆ ಅಡಿಗೆ ಮನೆಗಷ್ಟೇ ಸೀಮಿತಳ್ಳಲ್ಲ, ಅವರದೇ ಪಕ್ಷದ ಇಂದಿರಾಗಾಂಧಿ, ಸೊನಿಯಾ ಮತ್ತು ಪ್ರಿಯಾಂಕಾ ಗಾಂಧಿ ಪಕ್ಷ ಕಟ್ಟಿದ್ದನ್ನು ಅವರು ನೆನಪಿಸಿಕೊಳ್ಳಲಿ. ಅವರ ಸೊಸೆ ಕೂಡ ಚುನಾವಣೆಯಲ್ಲಿ ನಿಂತಿದ್ದನ್ನು ನಾವು ಸ್ವಾಗತಿಸುತ್ತೇವೆ. ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಅನುಷ್ಠಾನ ಮಾಡಿದವರು ಪ್ರಧಾನಿ ಮೋದಿಯವರು, ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ, ಉಜಾಲ, ಮಹಿಳಾ ಶೌಚಾಲಯ, ಸ್ವಚ್ಛ ಭಾರತ್ ಮುಂತಾದ ಯೋಜನೆಯನ್ನು ನೀಡಿದ್ದು ಬಿಜೆಪಿ ಸರ್ಕಾರ ಎಂಬುವುದನ್ನು ಮತದಾರರಿಗೆ ಮನೆ ಬಾಗಿಲಿಗೆ ತೆರಳಿ ಮನದಟ್ಟು ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಂಗಳ ನಾಗೇಂದ್ರ ವೀಣಾ ನಾಗರಾಜ್, ಸುರೇಖಾ ಮುರಳೀಧರ್, ಗೀತಾ ರವೀಂದ್ರ, ವನಜಾಕ್ಷಿ, ಪ್ರತೀಮಾ, ಜ್ಯೋತಿ, ಅಣ್ಣಪ್ಪ, ಸಂದ್ಯಾ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















