ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾಸಂಸ್ಥೆಗಳಲ್ಲಿ ಪ್ರಯೋಗಶೀಲ ವಾತಾವರಣ ನಿರ್ಮಾಣ ಮಾಡುವತ್ತ ಉಪನ್ಯಾಸಕ ಸಮೂಹ ಹೆಚ್ಚು ಒತ್ತು ನೀಡಬೇಕಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವರಾದ ಡಾ.ಬಿ.ಈ. ರಂಗಸ್ವಾಮಿ ಕರೆ ನೀಡಿದರು.
ನಗರದ ಜೆಎನ್’ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ #JNNCE ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ #VTU ಸಂಯುಕ್ತಾಶ್ರಯದಲ್ಲಿ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಉಪನ್ಯಾಸಕರಿಗಾಗಿ ಏರ್ಪಡಿಸಿದ್ದ ಸಂಶೋಧನಾ ಪ್ರಕ್ರಿಯೆಗೆ ಆರ್ಥಿಕ ಸಹಕಾರ – ಸಮಗ್ರ ಅರಿವು ಕಾರ್ಯಾಗಾರ ಉದ್ದೇಶಿಸಿ ಆನ್ಲೈನ್ ಮೂಲಕ ಮಾತನಾಡಿದರು.
ಭಾರತ ಸರ್ಕಾರವು ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೂಲಕ ನಾವೀನ್ಯಯುತ ಪ್ರಯೋಗಗಳಿಗೆ ಪ್ರೇರಕ ವೇದಿಕೆಗಳನ್ನು ನೀಡುತ್ತಿದೆ. ಸಂಶೋಧನಾ ಪ್ರಬಂಧಗಳ ಮಂಡನೆಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದ್ದು, ಕಳೆದ ಐದು ವರ್ಷದಲ್ಲಿ 1.5 ದಶಲಕ್ಷ ಪ್ರಬಂಧಗಳು ಮಂಡನೆಯಾಗಿವೆ. ಅಂತಹ ನಾವೀನ್ಯ ಯೋಜನೆಗಳು ವಾಣಿಜ್ಯೀಕರಣಗೊಳ್ಳಬೇಕಿದೆ.
Also read: ಮಸೀದಿ ಒಳಗೆ ಪಾಳಿಯಲ್ಲಿ ನಮಾಜ್ ಮಾಡಿ, ರಸ್ತೆಯಲ್ಲಿ ಮಾಡಿದರೆ ಹುಷಾರ್: ಸಿಎಂ ಯೋಗಿ ಎಚ್ಚರಿಕೆ
ಹೊಸತನದ ಚಿಂತನೆಗಳ ಮೂಲಕ ಅಗತ್ಯ ಕೌಶಲ್ಯತೆಗಳನ್ನು ಬೆಳೆಸಿಕೊಳ್ಳಿ, ದೇಶದ ಆರ್ಥಿಕ ವೃದ್ದಿಗೆ ಕೊಡುಗೆಗಳನ್ನು ನೀಡಿ. ಈ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆಗಳಲ್ಲಿ ಪ್ರಯೋಗಾತ್ಮಕ ವಾತಾವರಣ ನಿರ್ಮಾಣ ಮಾಡುವತ್ತ ಉಪನ್ಯಾಸಕ ಸಮೂಹ ಹೆಚ್ಚು ಕೇಂದ್ರಿಕರಿಸಬೇಕಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ನಾವು ನಡೆಸುವ ಪ್ರಯೋಗಗಳು ಹಾಗೂ ಆವಿಷ್ಕಾರಗಳು ಪರಿಸರಕ್ಕೆ ಹಾನಿಯಾಗದಂತಿರಬೇಕು. ನಾವೀನ್ಯತೆಯೊಂದಿಗೆ ಆರೋಗ್ಯಕರ ಪರಿಸರವನ್ನು ಮುಂದಿನ ತಲೆಮಾರಿಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ.
ಸಂಶೋಧನಾ ಪ್ರಕ್ರಿಯೆಗೆ ಆರ್ಥಿಕ ಸಹಕಾರ ನೀಡುವ ಅನೇಕ ವೇದಿಕೆಗಳು ನಮ್ಮ ಮುಂದಿದೆ. ಅಂತಹ ಸೌಲಭ್ಯಗಳನ್ನು ಪಡೆಯುವಾಗ ನಮ್ಮ ನಾವೀನ್ಯ ಯೋಚನೆಗಳನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಬೇಕು. ಸಂಶೋಧನೆಯ ಪ್ರಸ್ತಾವನೆಗಳು ಹೊಸ ಅವಕಾಶಗಳನ್ನು ಸೆಳೆಯುವಂತಿರಬೇಕು ಎಂದು ಸಲಹೆ ನೀಡಿದರು.
ವಿಟಿಯು ಗ್ಲೋಬಲ್ ಕ್ಯಾಂಪಸ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಡಾ.ಬಸವ ಕುಮಾರ್.ಕೆ.ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೆಎನ್’ಎನ್’ಸಿಇ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕಿ ಉಜ್ವಲ ರವಿಕುಮಾರ್ ಪ್ರಾರ್ಥಿಸಿ, ಡಾ.ಶ್ವೇತ ನಿರೂಪಿಸಿದರು. ವಿಟಿಯು ಮೈಸೂರು ವಿಭಾಗದ 23 ಎಂಜಿನಿಯರಿಂಗ್ ಕಾಲೇಜುಗಳ 110 ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post