ಕಲ್ಪ ಮೀಡಿಯಾ ಹೌಸ್ | ಮೈಸೂರು |
ಆತುರ ಆತುರವಾಗಿ ಒತ್ತಡದಲ್ಲಿ ಅಧ್ಯಯನ ಮಾಡಿದರೆ, ಪರೀಕ್ಷೆಗೆ ತಾಲೀಮು ಮಾಡಿದರೆ ಆತಂಕ ಹೆಚ್ಚಾಗಿ ಕಲಿತ ಸ್ವಲ್ಪ ವಿಷಯಗಳೂ ಸಹ ಮರೆತು ಹೋಗುತ್ತವೆ ಎಂದು ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ನಗರದ ಕೃಷ್ಣಮೂರ್ತಿಪುರಂ ನಲ್ಲಿರುವ ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದಲ್ಲಿ ಆಯೋಜನೆಗೊಂಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ವಿದ್ವತ್ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕು ಎಂದರೆ ಅದು ಕೇವಲ ಒಂದು ತಿಂಗಳ ಮುಂಚೆ ತಾಲೀಮು ಮಾಡುವುದಲ್ಲ. ಹಾಗೆ ಮಾಡಿದರೆ ಆವೇಗ, ಆತಂಕಗಳು ಹೆಚ್ಚಾಗುತ್ತವೆ. ಕಲಿತ ಸ್ವಲ್ಪ ವಿಷಯಗಳೂ ಮರೆತು ಹೋಗುತ್ತವೆ ಎಂದರು.
ಸಾಧನೆ ಮಾಡಲು ಸಂಕಲ್ಪ ಮಾಡಿದವರು ವಿದ್ಯಾರ್ಥಿ ದಿಸೆಯಲ್ಲಿ ಪ್ರಾರಂಭದಿಂದಲೂ ಓದಬೇಕು. ಕೇವಲ ಸುಮ್ಮನೆ ಓದುವುದಲ್ಲ . ನಮ್ಮ ಜೀವನ ಕ್ರಮವನ್ನೂ ಚೆನ್ನಾಗಿ ಇಟ್ಟುಕೊಳ್ಳಬೇಕು. ಅತಿಯಾದ ನಿದ್ರೆ, ಮಿತಿಮೀರಿದ ಊಟ, ಗತಿಮೀರಿದ ಆಲಸ್ಯ ಇವೆಲ್ಲವೂ ವಿದ್ಯಾರ್ಥಿಗಳ ಸಾಧನೆಗೆ ಮಾರಕವಾದ ಅಂಶಗಳು ಎಂದರು.
ಪ್ರತಿನಿತ್ಯವೂ ನಮ್ಮ ದಿನಚರಿ ಮತ್ತು ಆಚರಣೆಗಳನ್ನು ಆಯಾ ಕಾಲಕ್ಕೆ ತಕ್ಕಂತೆಯೇ ಮಾಡಬೇಕು. ನಿದ್ರೆ, ಎಚ್ಚರ, ಯೋಗ, ಧ್ಯಾನ, ಪ್ರಾಣಾಯಾಮ, ಸ್ನಾನ, ಸಂಧ್ಯಾವಂದನೆ, ಪೂಜೆ, ಉಪಾಹಾರ, ವಿಹಾರ, ಬಂಧು ಮಿಲನ, ಆಟೋಟಗಳು, ಓದುವ ಸಮಯಗಳು, ಚಿಂತನಾ ವೇಳೆ, ಮೊಬೈಲ್ ಫೋನ್ ಬಳಕೆ, ಕುಟುಂಬದ ಜತೆ ಸೌಹಾರ್ದ ಮಾತು ಕತೆ ಇವೆಲ್ಲವೂ ಹಿತ ಮಿತವಾಗಿ ಇರಬೇಕು. ಆಗ ಮಾತ್ರ ನಮ್ಮ ಜೀವನ ಶಾಂತವಾಗಿ ಸಾಗುತ್ತದೆ ಎಂದು ಸಲಹೆ ನೀಡಿದರು.
ದಿನಚರಿ ಪಾಲನೆಯ ಪ್ರಯೋಜನಗಳಿವು
ದಿನಚರಿ ಪಾಲನೆಯಿಂದ ಇವುಗಳಿಂದ ನಮಗೆ ಧೈರ್ಯ, ಆತ್ಮವಿಶ್ವಾಸ, ಭರವಸೆ ಮತ್ತು ಹೊಸತನ ಪ್ರತಿನಿತ್ಯವೂ ಮೂಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗುರುಗಳು ಹೇಳಿದ ಉತ್ತಮ ಸಂಗತಿಗಳನ್ನು ನಮ್ರತೆಯಿಂದ ಸ್ವೀಕಾರ ಮಾಡಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡಿದರೆ ಮಾತ್ರ ಉನ್ನತ ಸ್ಥಾನಕ್ಕೆ ಹೋಗಬಹುದು ಎಂದರು.
ನಾವು ಕೂಡಾ ಬಾಲ್ಯ ಮತ್ತು ಯೌವ್ವನದ ಹಂತಗಳನ್ನು ದಾಟಿ ಬಂದಿದ್ದೇವೆ. ಆ ವಯಸ್ಸಿನಲ್ಲಿಹಲವು ಪ್ರಶ್ನೆಗಳು ಮೂಡುವುದು ಸಹಜ. ಆಲಸ್ಯಗಳು, ಕಾಮನೆಗಳು ಎದುರಾಗುವುದು ಸಾಮಾನ್ಯ. ಗುರುಗಳ ಮಾರ್ಗದರ್ಶನದಲ್ಲಿ ಬೆಳೆದ ವಿದ್ಯಾರ್ಥಿಗೆ ಯಾವತ್ತೂ ಇವುಗಳು ಸಮಸ್ಯೆ ಆಗದು. ಸಾಧನೆಗಳಿಗೆ ಒತ್ತು ಕೊಟ್ಟವನು ಉತ್ತುಂಗಕ್ಕೆ ಏರುತ್ತಾನೆ. ಈ ಸಂಗತಿಗಳನ್ನು ಸದಾ ನೆನಪಿರಲಿ ಇಟ್ಟುಕೊಂಡು ಜಾಗೃತನಾಗಿ ಇದ್ದರೆ ಮಾತ್ರ ಮುಂದಿನ ಬದುಕು ಬಂಗಾರವಾಗುತ್ತದೆ ಎಂದು ಗುರುಗಳು ಕಿವಿಮಾತು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post