ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಟಿವಿಯಲ್ಲಿ ತೋರಿಸುವ ಪರೋಕ್ಷ ಮಾದಕ ದ್ರವ್ಯಗಳ ಜಾಹೀರಾತು ನೋಡಿ ಇಂದಿನ ಯುವ ಪೀಳಿಗೆ ದುಶ್ಚಟಗಳನ್ನು ಕಲಿಯಬಾರದು ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಕರೆ ನೀಡಿದರು.

ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಟಿವಿಯಲ್ಲಿ ತೋಸಿರುವ ಗುಟ್ಕಾ ಜಾಹೀರಾತುಗಳು, ಅದರಲ್ಲೂ ಪ್ರಮುಖವಾಗಿ ಕ್ರಿಕೆಟ್ ಸಮಯದಲ್ಲಿ ಅತಿ ಹೆಚ್ಚು ಪ್ರಸಾರವಾಗುವ ಇಂತಹ ಜಾಹೀರಾತುಗಳು ಯುವಸಮೂಹವನ್ನು ತಪ್ಪು ದಾರಿಗೆ ಎಳೆಯಲು ಪ್ರೇರಣೆ ನೀಡುವಂತಿರುತ್ತವೆ. ಹೀಗಾಗಿ, ಇಂತಹ ಜಾಹೀರಾತುಗಳ ಪ್ರಸಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ, ಸಂಬAಧಿಸಿದ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಗುಟ್ಕಾ ಸೇರಿದಂತೆ ಮಾದಕ ವಸ್ತುಗಳಿಗೆ ದಾಸರಾಗದಂತೆ ಯುವ ಸಮೂಹ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕೆಟ್ಟ ಸಂದೇಶ ನೀಡುವ ಇಂತಹ ಜಾಹೀರಾತು ನೀಡುವುದನ್ನು ಕಡಿಮೆ ಮಾಡಬೇಕು. ಸರ್ಕಾರ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಇಂತಹ ಜಾಹೀರಾತುಗಳನ್ನು ನೋಡಿ ಯುವಕರು ದಾರಿ ತಪ್ಪಬಾರದು. ಇದರಿಂದ ಮುಂದಾಗುವ ಅಪಾಯಗಳನ್ನು ಅರಿತು ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.
ಮಾದಕ ದ್ರವ್ಯಗಳ ಸೇವನೆಯಿಂದ ಜನರಲ್ಲಿ ಭಯ, ಆತಂಕ ಮತ್ತು ಅಭದ್ರತೆಯ ಭಾವನೆಯನ್ನು ಉಂಟುಮಾಡುತ್ತದೆ. ಇದು ಮೆದುಳು ಮತ್ತು ನರಮಂಡಲದ ಬೂದು ದ್ರವ್ಯವನ್ನು ನೇರವಾಗಿ ಪರಿಣಾಮ ಬೀರುತ್ತದೆ. ಇದು ಅವರಿಗೆ ಸರಿಯಾದ ಪ್ರತಿಕ್ರಿಯೆಯನ್ನು ನೀಡಲು ಕಷ್ಟಕರವಾಗುತ್ತದೆ. ಮಾದಕ ವ್ಯಸನವು ಹಸಿವು ಮತ್ತು ತೂಕದ ತೀವ್ರ ನಷ್ಟ, ಮಲಬದ್ಧತೆ, ಹೆಚ್ಚಿದ ಆತಂಕ ಮತ್ತು ಕಿರಿಕಿರಿ, ನಿದ್ರಾಹೀನತೆ ಮತ್ತು ಬೌದ್ಧಿಕ ಕಾರ್ಯಚಟುವಟಿಕೆಗಳ ಕ್ರಮೇಣ ದುರ್ಬಲತೆಗೆ ಕಾರಣವಾಗಬಹುದು ಎಂದರು.
Also read: ಡ್ರಗ್ಸ್ ದಾಸ್ಯದಿಂದ ಜೀವನವೇ ಸರ್ವನಾಶ | ನ್ಯಾ. ಸಂತೋಷ್ ಕಿವಿಮಾತು
ಡೀನ್ ಡಾ. ನಂದ ಕಿಶೋರ್ ಲಾಹೋಟಿ ಮಾತನಾಡಿ, ಭವಿಷ್ಯದಲ್ಲಿ ವೈದ್ಯರಾಗುವ ನೀವು ಸಮಾಜಕ್ಕೆ ವಿಶೇಷ ಸೇವೆ ಸಲ್ಲಿಸಬೇಕು. ಪ್ರಮುಖವಾಗಿ ದುಶ್ಚಟಗಳನ್ನು ಕಲಿಯದಂತೆ ಯುವಕರು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಯುವ ವೈದ್ಯರು ಕಾರ್ಯಪ್ರವೃತ್ತರಾಗುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆಯಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪಿಜಿ ಹಾಗೂ ಇಂಟರ್ನ್ ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ಆಗುವ ದುಷ್ಟಪರಿಣಾಮಗಳ ಕುರಿತಾಗಿ ಕಿರು ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಂ. ಸಿದ್ದಲಿಂಗಪ್ಪ, ಎಂಎಸ್ ಡಾ.ವಿನಾಯಕ ಭಟ್, ಮನೋವೈದ್ಯಕೀಯ ವಿಭಾಗದ ಎಚ್’ಒಡಿ ಡಾ.ಹರೀಶ್ ದೆಲಂತಬೆಟ್ಟು, ಮನೋವೈದ್ಯಕೀಯ ವಿಭಾಗದ ಡಾ.ಕೆ.ಎಸ್. ಶುಭ್ರತಾ, ಡಾ.ದಯಾನಂದ ಸಾಗರ ಎಲ್ ಸೇರಿದಂತೆ ಹಲವರು ಇದ್ದರು.
ಡ್ರಗ್ಸ್ ಸೇವನೆಯಿಂದಾಗುವ ದುಷ್ಪರಿಣಾಮಗಳು
- ಕ್ರಿಯಾಶೀಲತೆ ಕಳೆದುಕೊಳ್ಳುವುದು
- ರೋಗನಿರೋಧಕ ಶಕ್ತಿ ಕಡಿಮೆಯಾಗುವುದು
- ವಾಕರಿಕೆ, ಕಿಬ್ಬೊಟ್ಟೆ ನೋವು, ಕಡಿಮೆ ಹಸಿವು, ತೂಕ ನಷ್ಟ
- ಮೆದುಳಿನ ನರಗಳು ದುರ್ಬಲವಾಗುವುದು, ಪಾರ್ಶ್ವವಾಯು ಹೊಡೆಯುವ ಸಾಧ್ಯತೆ
- ಹೃದಯದಲ್ಲಿ ಬೊಜ್ಜು ಬೆಳವಣಿಗೆ, ರಕ್ತನಾಳಗಳು ಸರಾಗವಾಗಿ ರಕ್ತ ಪಂಪ್ ಮಾಡದೇ ಇರುವುದು
- ಹೆಪಟೋಸೆಲ್ಯುಲಾರ್ ಒತ್ತಡದಿಂದ ಯಕೃತ್ತಿನ ಹಾನಿ ಅಥವಾ ವೈಫಲ್ಯ
- ನೆನಪಿನ ಶಕ್ತಿ ಕಳೆದುಕೊಳ್ಳುವುದು
- ಪುರುಷರಲ್ಲಿ ಸ್ತನ ಬೆಳವಣಿಗೆ, ದೇಹದ ಉಷ್ಣತೆಯಲ್ಲಿ ಏರಿಕೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















