ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ #Kolkata doctor murder ಮಾಡಿದ ಪ್ರಕರಣ ಮತ್ತು ನಂತರ ಪ್ರತಿಭಟನಾನಿರತ ವೈದ್ಯ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಇಂದು ಐಎಂಎ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ಇಂದು ನಗರದಲ್ಲಿ ವೈದ್ಯರ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸಿಮ್ಸ್ ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದ್ದು, ನಗರದ ಗೋಪಿವೃತ್ತದಲ್ಲಿ ಮಾನವ ಸರಪಳಿ ರಚಿಸಿ ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿ ಮನವಿ ಸಲ್ಲಿಸಿದರು.
ಭಾರತೀಯ ವೈದ್ಯಕೀಯ ಸಂಘ ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘ ಕರೆ ನೀಡಿದ್ದ ಮುಷ್ಕರದ ಹಿನ್ನಲೆಯಲ್ಲಿ ನಗರದಲ್ಲಿ ವೈದ್ಯರು ಒಪಿಡಿ ಬಂದ್ ಮಾಡಿದ್ದರು. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹೊರತಾಗಿ ಬೇರೆ ಸೇವೆ ಇಲ್ಲದ ಕಾರಣ ರೋಗಿಗಳಿಗೆ ತೊಂದರೆಯಾಗಿತ್ತು.
Also read: ಕಾರ್ಕಳ | ಕ್ರೈಸ್ಟ್ ಕಿಂಗ್ | ಕರಾಟೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಾವನ್ ವರ್ಮಾ
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ವೈದ್ಯರಿಗೆ ಮತ್ತು ವೈದ್ಯ ವಿದ್ಯಾರ್ಥಿಗಳು ದಿನದ 24 ಗಂಟೆಯೂ ತುರ್ತು ಸೇವೆ ಮಾಡಬೇಕಿರುತ್ತದೆ. ಆದರೆ, ವೈದ್ಯರಿಗೆ ಇತ್ತೀಚಿನದ ದಿನಗಳಲ್ಲಿ ರಕ್ಷಣೆ ಇಲ್ಲದಂತಾಗಿದೆ. ಮಹಿಳಾ ವೈದ್ಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ. ಇಂತಹ ಘಟನೆಗಳು ಸಂಭವಿಸಿದ ತಕ್ಷಣ ಮುಚ್ಚಿಡಲು ಪ್ರಯತ್ನ ಕೂಡ ನಡೆಯುತ್ತಿದೆ. ಕೂಡಲೇ ಇಂತಹ ಪ್ರಕರಣ ಸಂಭವಿಸಿದಾಗ ಸರ್ಕಾರ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಬೇಕು. ಕಾಲಹರಣ ಮಾಡದೇ ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ವೈದೋ ನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ, ವೈದ್ಯರ ಮೇಲೆಯೇ ಹಲ್ಲೆ ನಡೆಯುತ್ತಿದೆ. ಇದನ್ನು ಸರ್ಕಾರಗಳು ತಪ್ಪಿಸಬೇಕು. ಮಹಿಳಾ ವೈದ್ಯರಿಗೆ ಸೂಕ್ತರ ರಕ್ಷಣೆ ನೀಡಬೇಕು. ಕೂಡಲೇ ಅತ್ಯಾಚಾರ ಎಸಗಿದ ಆರೋಪಿಗಳನ್ನು ಬಂಧಿಸಿ, ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
2020ರ ವೈದ್ಯಕೀಯ ನಿಯಮಾವಳಿಗಳನ್ನು ಕೂಡಲೇ ಜಾರಿಗೊಳಿಸಬೇಕು. ನೊಂದ ಕುಟುಂಬಕ್ಕೆ ಎಲ್ಲಾ ರೀತಿಯ ನೆರವಿನ ಜೊತೆಗೆ ಅವರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಡಾ. ಶ್ರೀಧರ್, ಡಾ. ಸುರೇಶ್, ಡಾ. ಸತೀಶ್ ಕುಮಾರ್, ಡಾ. ಸಂಜಯ್, ಡಾ. ಹೇಮಂತ್, ಡಾ. ರಮ್ಯಾ, ಡಾ. ಜಿತೇಂದ್ರಕುಮಾರ್, ಡಾ. ಶ್ರೀಕಾಂತ್ ಶೆಟ್ಟಿ, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ವೈದ್ಯಕೀಯ ವಿದ್ಯಾರ್ಥಿಗಳು, ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post