ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ದೇಶವು ಸರ್ವತೋಮುಖ ಸಾರ್ವಕಾಲಿಕ ಅಭಿವೃದ್ಧಿಯನ್ನು ಹೊಂದಲು ಯುವ ಸಮೂಹವು ತನ್ನದೇ ಆದ ಅಸಾಧಾರಣ ಕೊಡುಗೆಗಳನ್ನು ನೀಡುವುದು ಅತ್ಯವಶ್ಯಕವಾಗಿದೆ ಎಂದು ಬೆಳಗಾವಿ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಬಿ. ಇ. ರಂಗಸ್ವಾಮಿ ನುಡಿದರು.
ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ೧೮ನೇ ಬ್ಯಾಚ್‌ನ ಪ್ರಥಮ ವರ್ಷದ ಇಂಜಿನಿಯರಿಂಗ್ ಕೋರ್ಸ್ ನ ಶಿಷ್ಯೋಪನಯನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಇಂಜಿನಿಯರಿಂಗ್ ತಾಂತ್ರಿಕ ಶಿಕ್ಷಣವು ವಿದ್ಯಾರ್ಥಿ ಸಮೂಹದಲ್ಲಿ ಸೃಷ್ಟಿಸುವ ಪ್ರಾಯೋಗಿಕ ಚಾಣಾಕ್ಷತನ, ಚಾಕಚಕ್ಯತೆ ಮತ್ತು ನವ ನವೀನ ರೀತಿಯಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಾರ್ಯಗತರೂಪಕ್ಕೆ ತರುವ ಮನಸ್ಥಿತಿಯನ್ನು ತ್ವರಿತ ಗತಿಯಲ್ಲಿ ಸೃಷ್ಟಿಸುವ ಕಾರ್ಯತತ್ಪರತೆಯ ಬಗ್ಗೆ ಪ್ರಯತ್ನಿಸಬೇಕೆಂದು ವಿದ್ಯಾರ್ಥಿ ಹಾಗೂ ಪೋಷಕರಿಗೆ ಸಲಹೆ ನೀಡಿದರು.
ಪ್ರಸಕ್ತ ಕಾಲಘಟ್ಟದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇಂಟರ್ನೆಟ್ ಕ್ಷೇತ್ರದ ಹಾನಿಕಾರಕ ತಂತ್ರಜ್ಞಾನಗಳ ವಿಷವರ್ತುಲದಲ್ಲಿ ಸಿಲುಕಿಕೊಂಡು ಶೈಕ್ಷಣಿಕವಾಗಿ ಉನ್ನತ ಮಟ್ಟದಲ್ಲಿ ಸಾಧನೆಗಳನ್ನು ಮಾಡುವ ಪ್ರಯತ್ನಗಳ ಕಡೆಗೆ ಗಮನಹರಿಸುವುದನ್ನು ಕಡಿಮೆ ಮಾಡಿರುವುದು ಉತ್ತಮವಾದ ಬೆಳವಣಿಗೆಯಲ್ಲ ಎಂದು ನುಡಿದರು.
ಭಾರತ ದೇಶದಲ್ಲಿ ಕೇಂದ್ರ ಸರ್ಕಾರವು ಕಾರ್ಯಗತರೂಪಕ್ಕೆ ತಂದ ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ ಈ ಬಗೆಯ ಹಲವು ವಿನೂತನ ಪರಿಕಲ್ಪನೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ದೇಶದ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಯಶಸ್ಸನ್ನು ಸಾಧಿಸುವಂತೆ ಕೆಲವು ಐತಿಹಾಸಿಕ ಉದಾಹರಣೆಗಳನ್ನು ಉದಾಹರಿಸುವ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ಸೂಚ್ಯವಾಗಿ ನುಡಿದರು.
ಪಿಇಎಸ್ ಟ್ರಸ್ಟ್ ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ನಾಗರಾಜ ಆರ್ ಪಿಇಎಸ್ ಟ್ರಸ್ಟ್ ನ ಸ್ಥಾಪನೆ, ನಡೆದು ಬಂದ ಹಾದಿ ಹಾಗೂ ವಿದ್ಯಾರ್ಥಿಗಳು ಅಸಾಧಾರಣ ಸಾಧನೆಯನ್ನು ಮಾಡಲು ಹಲವು ಬಗೆಯ ವ್ಯಕ್ತಿತ್ವಗಳು ತಮ್ಮದೇ ಆದ ಪಾತ್ರವನ್ನು ನಿರ್ವಹಿಸಲಿವೆ ಎಂದು ನುಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ವೈವಿಧ್ಯಪೂರ್ಣ ಕಲಾಕುಶಲತೆಗಳನ್ನು ಕರಗತ ಮಾಡಿಕೊಳ್ಳುವಲ್ಲಿ ಪ್ರಯತ್ನಿಸಬೇಕೆಂದು ಮನಮುಟ್ಟುವಂತೆ ನುಡಿದರು.
Also read: ಹದಿಹರಿಯದ ಚಂಚಲ ಮನಸ್ಸನ್ನು ದಾಟಿ ಓದುವ ಕಡೆ ಗಮನಹರಿಸಿ: ನಟಿ ಉಮಾಶ್ರೀ ಕಿವಿಮಾತು
ಶೈಕ್ಷಣಿಕವಾಗಿ ತಂತ್ರಜ್ಞಾನಗಳ ಸಂಪೂರ್ಣ ಮಾಹಿತಿ, ಕಲಿಕಾ ಮನೋಭಾವ ಮತ್ತು ಅದ್ವಿತೀಯ ಸಾಧನೆಗಳನ್ನು ಮಾಡಲು ಅತ್ಯವಶ್ಯವಿರುವ ದೈಹಿಕ ಹಾಗೂ ಮಾನಸಿಕ ಪರಿಪೂರ್ಣತೆ, ಸಕ್ರಿಯತೆಯನ್ನು ಕರಗತ ಮಾಡಿಕೊಳ್ಳುವಲ್ಲಿ ಅನವರತ ಶ್ರಮಿಸಬೇಕೆಂದು ವಿದ್ಯಾರ್ಥಿಗಳ ಮನಮುಟ್ಟುವಂತೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಯುವರಾಜು ಬಿ ಎನ್ ಉಪಸ್ಥಿತರಿದ್ದ ಅತಿಥಿಗಳು ಹಾಗೂ ಸಭಿಕ ವೃಂದವನ್ನು ಸ್ವಾಗತಿಸಿದರು. ಪ್ರಾಂಶುಪಾಲರು ತಮ್ಮ ಸ್ವಾಗತ ಭಾಷಣದಲ್ಲಿ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ೨೦೦೭ ನೇ ಇಸವಿಯಲ್ಲಿ ಉದ್ಘಾಟನೆಗೊಂಡ ಸುಸಂದರ್ಭವನ್ನು ನೆನಪಿಸಿಕೊಳ್ಳುತ್ತಾ ೧೮ ವರ್ಷಗಳ ಯಶಸ್ವಿ ಪೂರ್ಣ ಪಯಣದ ವಿಶ್ಲೇಷಣಾತ್ಮಕ ವರದಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಪಿಇಎಸ್‌ಐಟಿಎಂನಲ್ಲಿ ಇರುವ ಇಂಜಿನಿಯರಿಂಗ್ ಪದವಿಗಳ ಮುಖ್ಯಸ್ಥರು ಹಾಗೂ ಬೋಧಕ ಸಿಬ್ಬಂದಿಗಳ ಪಕ್ಷಿ ನೋಟ ವಿವರಣೆಯ ಜೊತೆ ಜೊತೆಗೆ ಸಾಧನಾತ್ಮಕ ಪ್ರಯತ್ನಗಳ ಕಿರು ಪರಿಚಯವನ್ನು ಉಪಸ್ಥಿತರಿದ್ದ ವಿದ್ಯಾರ್ಥಿ ಹಾಗೂ ಪೋಷಕವೃಂದಕ್ಕೆ ನೀಡಿದರು. ಶೈಕ್ಷಣಿಕವಾಗಿ ಪ್ರಚಲಿತದಲ್ಲಿರುವ ಮೆಂಟರಿಂಗ್ ಸಿಸ್ಟಮ್, ವಿದ್ಯಾರ್ಥಿಗಳ ಹಾಜರಾತಿ ಪರಿವೀಕ್ಷಣಾ ವ್ಯವಸ್ಥೆ ಮತ್ತು ವಿವಿಧ ರೀತಿಯ ಸೌಲಭ್ಯಗಳ ಬಗೆಗಿನ ಹಲವು ಉಪಯುಕ್ತ ಮಾಹಿತಿಯನ್ನು ಪೋಷಕ ವೃಂದಕ್ಕೆ ನೀಡುವುದರ ಜೊತೆ ಜೊತೆಗೆ; ವಿದ್ಯಾರ್ಥಿಗಳ ಅದ್ವಿತೀಯ ಬೆಳವಣಿಗೆಯಲ್ಲಿ ಪೋಷಕರು ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ಕೊಡುಗೆಗಳನ್ನು ನೀಡುವಂತೆ ಪ್ರೇರೇಪಿಸಿದರು.
ಈ ಸುಸಂದರ್ಭದಲ್ಲಿ ಶೈಕ್ಷಣಿಕವಾಗಿ ಅಸಾಧಾರಣ ಸಾಧನೆಗಳನ್ನು ಮಾಡಿದ ಪ್ರತಿಯೊಂದು ವಿಭಾಗದ ವಿದ್ಯಾರ್ಥಿಗಳನ್ನು ಮುಖ್ಯ ಅತಿಥಿಗಳು ಸನ್ಮಾನಿಸುವ ಮೂಲಕ ಉಪಸ್ಥಿತರಿದ್ದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದರು.
ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ್ ಹೆಚ್ ಆರ್ ವಂದಿಸಿದರು. ಪಿಇಎಸ್‌ಐಟಿಎಂನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಶ್ರೀಗೌರಿ ಪ್ರಾರ್ಥಿಸಿದರು. ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಮತ್ತು ಮಷೀನ್ ಲರ್ನಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಲೈಕ್ವಿನ್ ಥಾಮಸ್ ನಿರೂಪಿಸಿದರು. ಈ ಪ್ರಾರಂಭೋತ್ಸವ ಸಮಾರಂಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಸಿವಿಲ್, ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಮತ್ತು ಮಷೀನ್ ಲರ್ನಿಂಗ್, ಕಂಪ್ಯೂಟರ್ ಸೈನ್ಸ್ – ಡಿಸೈನ್, ಕಂಪ್ಯೂಟರ್ ಸೈನ್ಸ್ ಇನ್ ಡೇಟಾ ಸೈನ್ಸ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗಗಳ 1400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕ ವೃಂದ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post