ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಓಕಳಿಪುರಂನಲ್ಲಿ ರೇಷ್ಮೆ ಇಲಾಖೆಗೆ ಸೇರಿದ 4.25 ಎಕರೆ ಜಮೀನಿನಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ ಇವರಿಂದ ಸಂಪೂರ್ಣ ಬಂಡವಾಳ ಹೂಡಿಕೆಯೊಂದಿಗೆ ರೂ.527.50 ಕೋಟಿಗಳ ಅಂದಾಜು ಮೊತ್ತದಲ್ಲಿ “ರೇಷ್ಮೆ ಭವನ” ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ರಾಷ್ಟ್ರೀಯ ರೇಷ್ಮೆ ಕೃಷಿ ನೀತಿಯಡಿ ಕೇಂದ್ರ ರೇಷ್ಮೆ ಮಂಡಳಿ ಮತ್ತು ರಾಜ್ಯ ರೇಷ್ಮೆ ಇಲಾಖೆಯ ಪರಸ್ಪರ ಒಪ್ಪಂದದೊಂದಿಗೆ ಸಂಪೂರ್ಣ ನಿರ್ಮಾಣ ವೆಚ್ಚವನ್ನು ಕೇಂದ್ರ ರೇಷ್ಮೆ ಮಂಡಳಿಯು ಭರಿಸಿದ್ದು, ಈ ಕಟ್ಟಡದಲ್ಲಿ ಎರಡೂ ಕಾರ್ಯಾಲಯಗಳು ಇರುತ್ತವೆ. ಹಾಲಿ ಇರುವ ಕಟ್ಟಡವನ್ನು ಕೆಡವಿ ನೂತನ ರೇಷ್ಮೆ ಭವನವನ್ನು ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ ವತಿಯಿಂದ ಸಂಪೂರ್ಣ ವೆಚ್ಚಭರಿಸಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. 76465.26 ಚ.ಮೀ ವಿಸ್ತೀರ್ಣದ ಕಟ್ಟಡ ನಿರ್ಮಾಣ ಮಾಡಲಾಗುವುದು.
ಸದರಿ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ (ಪಿ.ಆರ್.ಎ.ಎಮ್.ಸಿ – ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣೆ ಕೇಂದ್ರ) ಮುಖಾಂತರ ಅನುಷ್ಠಾನಗೊಳಿಸುವುದು.
ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆ ನಿರ್ಮಾಣ ಕಾಮಗಾರಿ
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆಯನ್ನು ರೂ.200.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪ್ರಸ್ತುತ ಇರುವ ಮಾರುಕಟ್ಟೆ ವಿಸ್ತೀರ್ಣ 5ಎಕರೆ ವಿಸ್ತೀರ್ಣದಲ್ಲಿದ್ದು, ಹೈಟೆಕ್ ಮಾರುಕಟ್ಟೆ ಮಾಡಲು ಅಸಾಧ್ಯ. ಪ್ರತಿನಿತ್ಯ 1500 ರಿಂದ 2000 ಜನ ವಹಿವಾಟಿನಲ್ಲಿ ಭಾಗವಹಿಸುತ್ತಿ ರುವುದರಿಂದ ಹೆಚ್ಚಿನ ಜನಸಂದಣಿಯಿಂದಾಗಿ ಸುಗಮ ವಹಿವಾಟಿಗೆ ಧಕ್ಕೆಯಾಗಿದೆ.
Also read: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗುಡ್‌ನ್ಯೂಸ್ | ಪ್ರತಿ ವರ್ಷ 2 ಸೀರೆ ವಿತರಣೆ
ಮಾರುಕಟ್ಟೆಗೆ ಪ್ರತಿದಿನ ಪ್ರಸ್ತುತ ಬರುತ್ತಿರುವ 30 ರಿಂದ 35 ಟನ್ ರೇಷ್ಮೆ ಗೂಡಿನ ವಹಿವಾಟನ್ನು 80 ರಿಂದ 100 ಟನ್ಗೆ ಹೆಚ್ಚಿಸಲು ಯೋಜಿಸಲಾಗಿದೆ.
- ನಬಾರ್ಡ್ ಯೋಜನೆಯಡಿ ರೂ.75.00 ಕೋಟಿ.
- ನಬಾರ್ಡ್ ಏತರ ರೂ.125.00 ಕೋಟಿ.
- ಸದರಿ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯ ಯೋಜನೆ ಮತ್ತು ಮತ್ತು ರಸ್ತೆಗಳ ಆಸ್ತಿ ನಿರ್ವಹಣೆ ಕೇಂದ್ರ ಮುಖಾಂತರ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.
ಕೌಶಲ್ಯಾಭಿವೃದ್ಧಿ ನಿಗಮ ಸ್ಥಾಪನೆ
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹೆಸರಿನಲ್ಲಿ ಹೊಸ ಕಂಪನಿ ಸ್ಥಾಪಿಸಲು ನಿರ್ಣಯಿಸಲಾಗಿದೆ. ಈ ಕಂಪನಿಯು ರೂ.5ಕೋಟಿ ಷೇರು ಬಂಡವಾಳ ಹೊಂದಿರುತ್ತದೆ.
ಪರಿಫೆರಲ್ ರಿಂಗ್ ರಸ್ತೆ ಮಾರ್ಪಾಡಿತ ಆದೇಶಕ್ಕೆ ಒಪ್ಪಿಗೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ಪ್ರಸ್ತಾವನೆಯನ್ವಯ ಈಗಾಗಲೇ ಹೊರಡಿಸಿರುವ ಸರ್ಕಾರಿ ಆದೇಶವನ್ನು ರದ್ದುಪಡಿಸಿ ತಿದ್ದುಪಡಿ ಆದೇಶವನ್ನು ಹೊರಡಿಸಿರುವ ಕ್ರಮಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಲಾಗಿದೆ.
“ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ)ನ ಯೋಜನೆಯಲ್ಲಿ ಒಳಗೊಂಡಿರುವ ಗ್ರಾಮಗಳ ಜಮೀನಿನ ಮಾರ್ಗಸೂಚಿ ದರಗಳು ವಿಭಿನ್ನವಾಗಿರುವುದರಿಂದ ಭೂ ಸ್ವಾಧೀನ ಪಡಿಸಿಕೊಳ್ಳುವ ಜಮೀನಿನ ಭೂಮಾಲೀಕರಿಗೆ ಆಯಾ ಗ್ರಾಮವಾರು ಮಾರ್ಗಸೂಚಿ ದರವನ್ನು ಗಮನದಲ್ಲಿರಿಸಿಕೊಂಡು ಸಂಧಾನ ಸೂತ್ರ (ಸಂಧಾನಿತ ಮೊತ್ತ)ದ ಮೂಲಕ ಭೂಸ್ವಾಧೀನ ಕಾಯ್ದೆ 1894 ರಡಿ ನಿಗಧಿಪಡಿಸಬಹುದಾದ ಭೂಪರಿಹಾರ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ಮೊತ್ತವನ್ನು ನಿಗಧಿಪಡಿಸಲು ಅಥವಾ ಭೂಮಾಲೀಕರು ಒಪ್ಪಿದಲ್ಲಿ ಟಿ.ಡಿ.ಆರ್ ನೀಡಲು ಆದೇಶ ಹೊರಡಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















