ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತರ, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ 12 ಜಿಲ್ಲೆಗಳನ್ನೊಳಗೊಂಡಂತೆ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾದಿತು ಎಂದು ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಶಿವಮೊಗ್ಗ ಜಿಲ್ಲೆಯ ಚಕ್ರ, ಸಾವೇಹಕ್ಲು, ಶರಾವತಿ, ಲಿಂಗನಮಕ್ಕಿ, ತುಂಗಾ ಹಾಗೂ ಭದ್ರಾ ಅಣೆಕಟ್ಟಿನ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಸರ್ಕಾರದ ಧೋರಣೆ ವಿರುದ್ದ ಸಿಡಿದೆದ್ದಿರುವ ಮಲೆನಾಡಿನ ವಿವಿಧ ಸಂಘಟನೆಗಳು ಇಂದು ಸುದ್ದಿಗೋಷ್ಠಿ ನಡೆಸುವ ಮೂಲಕ ಮಲೆನಾಡು ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟಿವೆ.
ಜಿಲ್ಲೆಯ ಜನರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಆದ್ದರಿಂದ ಬೇಡಿಕೆಗಳನ್ನು ಈಡೇರಿಸುವ ತನಕ ಅ.21ರಿಂದ ಸಾಗರದ ಎಸಿ ಕಚೇರಿ ಆವರಣದಲ್ಲಿ ಬೃಹತ್ ಅನಿರ್ಧಿಷ್ಟಾವಧಿ ಧರಣಿ ಮತ್ತು ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ.ನಾ.ಶ್ರೀನಿವಾಸ್ ಮಾತನಾಡಿ, ಡಾ.ಹೆಚ್.ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘ, ಮಲೆನಾಡು ರೈತರ ಹೋರಾಟ ಸಮಿತಿ, ಮುಳುಗಡೆ ಸಂತ್ರಸ್ತ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ, ಜಿಲ್ಲಾ ವಂಚಿತರ ಭೂಹಕ್ಕು ವಂಚಿತರು, ಮುಳುಗಡೆ ಸಂತ್ರಸ್ತರ ಪರ ಹೋರಾಡುತ್ತಿರುವ ಸಂಘಟನೆಗಳೆಲ್ಲ ಸೇರಿ ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ರಚಿಸಿಕೊಂಡು ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹಕ್ಕುಪತ್ರಗಳನ್ನ ವಜಾ ಮಾಡಲು ಸರ್ಕಾರ ಕ್ರಮ ಕೈಗೊಂಡಿರುವ ಆದೇಶ ಹಿಂಪಡೆಯಬೇಕು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಲ್ಲಂದೂರು ಗ್ರಾಮದ ಹಕ್ಕುಪತ್ರ ನೀಡದಂತೆ ಸೂಚನೆ ಮಾಡಲಾಗಿದೆ. ಇದನ್ನ ವಜಾಗೊಳಿಸಿ 80 ಸಾವಿರ ಅರ್ಜಿಯನ್ನ ಪುನರ್ ಪರಿಶೀಲಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ನ.1ರೊಳಗೆ ಈಡೇರಿಸದಿದ್ದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
Also read: ಜಾತಿ ಪ್ರಮಾಣ ಪತ್ರದ ಗೊಂದಲ ನಿವಾರಿಸಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಹೋರಾಟಕ್ಕೆ ಬೆಂಬಲಿಸಿರುವ ಸಾಮಾಜಿಕ ಸೇವಾ ಕಾರ್ಯಕರ್ತ ವಿ.ಜಿ.ಶ್ರೀಕರ್ ಮಾತನಾಡಿ, ಸಾಗರ ತಾಲೂಕು, ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಹಾಗೂ ನಗರ ಹೋಬಳಿಯಲ್ಲಿ 15 ಸಾವಿರಕ್ಕೂ ಹೆಚ್ಚು ಕುಟುಂಬಗಳು ಕೆಪಿಸಿ ಭೂಮಿಯಲ್ಲಿ ಮನೆಕಟ್ಟಲು ವಾಸಿಸುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಈ ಎಲ್ಲಾ ಜಮೀನನ್ನು ರೈತರಿಗೆ ವಾಪಾಸ್ ನೀಡಲು ಆದೇಶಿಸಿದ್ದರು. ಇದನ್ನು ತಕ್ಷಣ ರೈತರಿಗೆ ವಾಪಾಸ್ ನೀಡಬೇಕು ಹಾಗೂ 14 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯ ವೇಳೆ ಬೇಡಿಕೆ ಈಡೇರದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು 9 ರೈತರ ಸಂಘಟನೆಗಳು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತ ಸಂಘಟನೆ ಮುಖಂಡದಿನೇಶ್ ಶಿರವಾಳ ಮಾತನಾಡಿ, ಅ. 21 ರಂದು ಸಾಗರದ ಪಟ್ಟಣ ಗಣಪತಿ ದೇವಸ್ಥಾನದಿಂದ ಕಾಲ್ನಡಿಗೆ ಮೆರವಣಿಗೆ ಮೂಲ ಧರಣಿ ಸ್ಥಳಕ್ಕೆ ತೆರಳಲಿದ್ದೇವೆ. ಈ ಸಭೆಗೆ ಗಣ್ಯಾತಿಗಣ್ಯರೂ, ರಾಜ್ಯ ಮಟ್ಟದ ಹೋರಾಟಗಾರರು, ವಿವಿಧ ಮಠಪತಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದ ಅವರು, ಸಚಿವರು, ಶಾಸಕರು ಯಾವುದೇ ಭರವಸೆ ನೀಡಿದರೂ ಜಗ್ಗದೆ ಮುಖ್ಯಮಂತ್ರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಆದೇಶ ಪತ್ರ ನೀಡಿದ್ದಲ್ಲಿ ಮಾತ್ರ ಹೋರಾಟವನ್ನು ನಿಲ್ಲಿಸಲಾಗುವುದು. ಇಲ್ಲದಿದ್ದಲ್ಲಿ ಅಮರಣಾಂತ ಉಪವಾಸ ಹೋರಾಟವನ್ನು ಮುಂದುವರಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡರಾದ ಶಿವಾನಂದ ಕುಗ್ವೆ, ಮಂಜುನಾಥ್, ಹೆಚ್.ಎಂ.ರಾಘವೇಂದ್ರ, ಹೆಚ್.ಕೆ.ಸ್ವಾಮಿ, ರಾಜೇಶ್ ಶೆಟ್ಟಿ. ಆರ್ಮುಗಂ ದಂಡಪಾಣಿ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post