ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿಎಂ ಸಿದ್ಧರಾಮಯ್ಯ #CM Siddaramaiah ನೇತೃತ್ವದ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ಜನ ಸಾಮಾನ್ಯರ ಗಮನ ಬೇರೆಡೆಗೆ ಸೆಳೆಯಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ #B S Yadiyurappa ಪತ್ನಿಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ತನಿಖೆ ಆಗಬೇಕು ಎಂದು ತನ್ನ ಎಲುಬಿಲ್ಲದ ನಾಲಿಗೆ ಹರಿಬಿಟ್ಟಿರುವ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಅವರ ಹೇಳಿಕೆಗೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಕಂಡು ಕೇಳರಿಯದ ಸಾವಿರಾರು ಕೋಟಿಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ನಿವೇಶನ ಹಂಚಿಕೆ ಹಗರಣ, ಪರಿಶಿಷ್ಟ ಜಾತಿ ಸಮುದಾಯ ಬಂಧುಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಮೀಸಲಿಟ್ಟ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ಹಗರಣ ಹಾಗೂ ವರ್ಗಾವಣೆ ದಂಧೆ, ಸಾರ್ವಜನಿಕ ಹಿತಾಸಕ್ತಿ ಬದಿಗೆ ಸರಿಸಿ ಅಭಿವೃದ್ಧಿ ಶೂನ್ಯ ಆಡಳಿತ ವೈಖರಿ ಸೇರಿದಂತೆ ಅತೀವ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯಿಂದ ಈಗಾಗಲೇ ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ. ಯಾವುದೇ ಹೊಸ ಯೋಜನೆಗಳಿಗೆ ಚಾಲನೆ ಕೊಡುವುದಾಗಲಿ, ಹಳೇಯ ಕಾಮಗಾರಿಗಳಿಗೆ ಅನುದಾನ ಒದಗಿಸುವುದಾಗಲಿ ಸಂಪೂರ್ಣ ಸ್ಥಬ್ದವಾಗಿದೆ. ಅತಿವೃಷ್ಟಿ – ಅನಾವೃಷ್ಟಿ ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪದಂತ ದುರ್ಘಟನೆಗಳಿಗೆ ತತ್ತರಿಸಿರುವ ಜನ ಸಾಮಾನ್ಯರಿಗೆ ಹಾಗೂ ರೈತರಿಗೆ ಪರಿಹಾರ ಒದಗಿಸುವುದು ಬದಿಗಿರಲಿ, ಕನಿಷ್ಟ ಸಾಂತ್ವನ ಹೇಳುವ ಮನಸ್ಥಿತಿ ಕಳೆದುಕೊಂಡಿರುವ ಈ ಸರ್ಕಾರದಿಂದ ನೀಚ ಮನಸ್ಥಿತಿಯ ರಾಜಕಾರಣ ನಿರೀಕ್ಷೆ ಮಾಡಬಹುದೇ ವಿನಹ ಬೇರೆ ಏನೂ ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಭೈರತಿ ಸುರೇಶ್ ತಮ್ಮ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಲು ಈಗಾಗಲೇ ವಿಫಲರಾಗಿದ್ದಾರೆ. ನಗರಾಭಿವೃದ್ಧಿ ಎಂತ ಬೃಹತ್ ಖಾತೆ ನೀಡಿದರು ಅದರಲ್ಲಿ ಪ್ರಗತಿ ನೀಡಲು ಅಸಮರ್ಥರಾಗಿದ್ದಾರೆ ಎಂಬುದು ಈಗಾಗಲೇ ಸಾಬೀತಾಗಿದೆ. ಮೇಲಾಗಿ ಸ್ವತಹ ಮುಖ್ಯಮಂತ್ರಿಗಳು ತಾವಿರುವ ಜವಾಬ್ದಾರಿ ಸ್ಥಾನವನ್ನು ಮರೆತು ಕುಟುಂಬದ ಸ್ವಹಿತಾಸಕ್ತಿಗಾಗಿ ಅಕ್ರಮವಾಗಿ 14 ನಿವೇಶನವನ್ನು ಪಡೆದಿರುವುದಲ್ಲದೇ, ಈಗಾಗಲೇ ನಿವೇಶನ ಹಿಂತಿರುಗಿಸುವುದಾಗಿ ಪ್ರಾಧಿಕಾರಕ್ಕೆ ಪತ್ರ ಬರೆದು ಅಕ್ರಮ ನಡೆದಿದೆ ಎಂದು ಒಪ್ಪಿಕೊಂಡಿರುವ ನೀವು ಸಾರ್ವಜನಿಕವಾಗಿ ಅಕ್ರಮ ಮಾಡಿಲ್ಲ ಎಂದು ಹೇಳಿಕೆ ನೀಡುತ್ತಾ ಭಂಡತನ ಪ್ರದರ್ಶಿಸುತ್ತಿರುವುದು ತೀವ್ರ ನಾಚಿಕೆಗೆಡಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಇಷ್ಟೆಲ್ಲಾ ಆರೋಪ ಹಾಗೂ ಭ್ರಷ್ಟಾಚಾರ ಹಗರಣಗಳ ಸರಮಾಲೆಯೇ ನಿಮ್ಮ ಇಲಾಖೆ ಹೊದ್ದುಕೊಂಡಿದ್ದು ಈ ಕೂಡಲೇ ಭೈರತಿ ಸುರೇಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕವಾಗಿ ಹಾಗೂ ಯಡಿಯೂರಪ್ಪ ಅವರ ಕುಟುಂಬಕ್ಕೆ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post