ಕಲ್ಪ ಮೀಡಿಯಾ ಹೌಸ್ | ಸೊರಬ |
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ರಥವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ರಥಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿ ತಾಲೂಕಿಗೆ ಶನಿವಾರ ಬರಮಾಡಿಕೊಂಡು ಅದ್ದೂರಿಯಾಗಿ ಸ್ವಾಗತಿಸಿದರು.
ಜಿಲ್ಲಾಡಳಿತದ ಸೂಚನೆ ಮೇರೆಗೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಎಲ್ಲ ಇಲಾಖೆಗಳ ನೇತೃತ್ವದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಕನ್ನಡ ನಾಡು ಮತ್ತು ನುಡಿಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಶ್ರಮಿಸಬೇಕು. ಕನ್ನಡ ಭಾಷೆ ನಮ್ಮೆಲ್ಲರ ಅನ್ನದ ಭಾಷೆಯಾಗಿದೆ. ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ,ಎಂದು ಹಾರೈಸಿದರು.
ರಥಯಾತ್ರೆಯನ್ನು ಉದ್ದೇಶಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಕನ್ನಡತನವನ್ನು ಬಿತ್ತುವ ಕೆಲಸ ನಮ್ಮದಾಗಿದೆ. ಕನ್ನಡವನ್ನು ಪ್ರೀತಿಸಿ, ವಿಸ್ತಾರಗೊಳಿಸುವ ಹೊಣೆ ನಮ್ಮೆಲ್ಲರದ್ದಾಗಿದೆ, ಎಂದ ಅವರು, ಕನ್ನಡ ಸಾಹಿತ್ಯದ ಮಹತ್ವವನ್ನು ಪ್ರೀತಿ ಮತ್ತು ಶ್ರದ್ಧೆಯಿಂದ ಪೋಷಿಸೋಣ ಎಂದು ಕರೆ ನೀಡಿದರು.
ಈ ಅದ್ಧೂರಿ ಸ್ವಾಗತ ಸಮಾರಂಭದಲ್ಲಿ ಪಟ್ಟಣದ ಶಾಲಾ ಮಕ್ಕಳು ಕನ್ನಡ ಗೀತೆಗಳಿಗೆ ನೃತ್ಯಮಾಡಿ ಮೆರವಣಿಗೆಗೆ ಕಳೆ ತಂದು ಜಯ ಕರ್ನಾಟಕ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬೆರಳೆಣಿಕೆ ಸಾಹಿತ್ಯಾಸಕ್ತರು, ಕಸಾಪ ಸದಸ್ಯರು ಕಾಣಿಸಿಕೊಂಡಿದ್ದು ಸಾಹಿತ್ಯ ವಲಯದ ನಿರಾಸಕ್ತಿ ಎದ್ದು ತೋರುತ್ತಿತ್ತು.
ರಥದ ವೈಶಿಷ್ಟ್ಯಗಳು
ಕನ್ನಡ ಜ್ಯೋತಿಯನ್ನು ಹೊತ್ತ ಈ ರಥದಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆ, ಕೃಷಿಯ ಸಂಕೇತವಾದ ಎತ್ತುಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳು ಕಾಣಸಿಗುತ್ತವೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಗಳು ರಥದ ಉದ್ದೇಶವನ್ನು ಸ್ಮರಿಸುತ್ತವೆ. ಅಲ್ಲದೆ, ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಚಿತ್ರಗಳು ಹಾಗೂ ಮುಖ್ಯಮಂತ್ರಿ , ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರಗಳು ರಥವನ್ನು ಅಲಂಕರಿಸಿದ್ದವು.
(ವರದಿ: ಮಧುರಾಮ್, ಸೊರಬ)
Also read: ಭದ್ರಾವತಿ | ಐತಿಹಾಸಿಕ ಪ್ರಸಿದ್ಧ ಲಕ್ಷ್ಮಿನರಸಿಂಹ ದೇಗುಲ ದುರಸ್ಥಿಗೆ ಒತ್ತಾಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post