ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಉಪ ರಾಷ್ಟ್ರಪತಿ ಜಗದೀಪ್ ಧನಕರ್ #VicePresident Jagadeep Dhanakar ಹಾಗೂ ಅವರ ಧರ್ಮಪತ್ನಿ ಸುದೇಶ್ ಧನಕರ್ ಅವರೊಂದಿಗೆ ಶನಿವಾರ ಬೆಳಗ್ಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೆಗೌಡ #H D Devegowda ಅವರ ನಿವಾಸಕ್ಕೆ ಭೇಟಿ ನೀಡಿದರು.
ಬೆಳಗ್ಗೆ 9 ಗಂಟೆಗೆ ಮಾಜಿ ಪ್ರಧಾನಿಗಳ ನಿವಾಸಕ್ಕೆ ಆಗಮಿಸಿದ ಉಪ ರಾಷ್ಟ್ರಪತಿಗಳು, ಒಂದು ಗಂಟೆಗೂ ಹೆಚ್ಚು ಕಾಲ ಇದ್ದು, ಚನ್ನಮ್ಮ ಅವರ ಆರೋಗ್ಯದ ಬಗ್ಗೆ ದೇವೇಗೌಡರಲ್ಲಿ ವಿಚಾರಿಸಿದರು.
ಚನ್ನಮ್ಮ ಅವರು ಆದಷ್ಟು ಬೇಗ ಗುಣಮಖರಾಗಲಿ, ಆ ನಂತರ ಅವರನ್ನು ತಾವು ದೆಹಲಿಗೆ ಕರೆದುಕೊಂಡು ಬನ್ನಿ ಎಂದು ಉಪ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳಿಗೆ ತಿಳಿಸಿದರು. ಇದಕ್ಕೆ ಮಾಜಿ ಪ್ರಧಾನಿಗಳು ಸಮ್ಮತಿಸಿ, ತಮ್ಮ ಮೇಲೆ ತಾವು ಇರಿಸಿರುವ ಪ್ರೀತಿ ವಿಶ್ವಾಸ, ಅಭಿಮಾನಕ್ಕೆ ನನ್ನ ಹೃದಯ ತುಂಬಿ ಬಂದಿದೆ. ತಮ್ಮ ಆಗಮನ ನಮ್ಮ ಇಡೀ ಕುಟುಂಬಕ್ಕೆ ಬಹಳ ಸಂತೋಷ ಉಂಟು ಮಾಡಿದೆ ಎಂದು ಉಪ ರಾಷ್ಟ್ರಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಉಪ ರಾಷ್ಟ್ರಪತಿಗಳು, ಸುದೇಶ್ ಧನಕರ್ ಅವರುಗಳು ಮಾಜಿ ಪ್ರಧಾನಿಗಳು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಜತೆಯಲ್ಲಿಯೇ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಅವರೆಲ್ಲರೂ ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು.
ಬಳಿಕ ಕುಟುಂಬದ ಎಲ್ಲಾ ಸದಸ್ಯರ ಕುಶಲೋಪರಿ ವಿಚಾರಿಸಿದರು. ವಿಶೇಷವಾಗಿ ಪುಟ್ಟ ಮಕ್ಕಳ ಜತೆ ಉಪ ರಾಷ್ಟ್ರಪತಿಗಳು ಕೆಲ ಕಾಲ ಕಳೆದರು. ಮಾಜಿ ಪ್ರಧಾನಿಗಳ ನಿವಾಸಕ್ಕೆ ಆಗಮಿಸಿದ ಉಪ ರಾಷ್ಟ್ರಪತಿಗಳನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬರಮಾಡಿಕೊಂಡರು.
ಉಪ ರಾಷ್ಟ್ರಪತಿಗಳನ್ನು ಬೀಳ್ಕೊಟ್ಟ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಉಪ ರಾಷ್ಟ್ರಪತಿಗಳು ಹಾಗೂ ಮಾಜಿ ಪ್ರಧಾನಿಗಳ ನಡುವೆ ಸ್ನೇಹಪೂರ್ವಕ ಬಾಂಧವ್ಯ ಇದೆ. ಇಬ್ಬರೂ ಪರಸ್ಪರ ಗೌರವಭಾವ ಇರಿಸಿಕೊಂಡಿದ್ದು, ಅದರಲ್ಲಿಯೂ ಉಪ ರಾಷ್ಟ್ರಪತಿಗಳು ಮಾಜಿ ಅತ್ಯಂತ ಗೌರವ ಇರಿಸಿಕೊಂಡಿದ್ದೇನೆ. ಇದನ್ನು ಆನೇಕ ಸಲ ಕಣ್ಣಾರೆ ಕಂಡಿದ್ದೇನೆ ಎಂದರು.
ಇಬ್ಬರೂ ನಾಯಕರು ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು. ಹೀಗಾಗಿ ಅವರಿಬ್ಬರ ಚರ್ಚೆ ಬಹುತೇಕ ಕೃಷಿ ಕೇಂದ್ರಿತವಾಗಿತ್ತು. ರೈತರ ಅಭಿವೃದ್ಧಿಯ ಬಗ್ಗೆ ಅವರು ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಕೇಂದ್ರ ಸಚಿವರು ಮಾಹಿತಿ ಹಂಚಿಕೊಂಡರು.
ಅಲ್ಲದೆ, ಉಪ ರಾಷ್ಟ್ರಪತಿಗಳು ಅನೇಕ ಸಲ ಬೆಂಗಳೂರಿಗೆ ಬಂದಾಗ ದೇವೇಗೌಡರ ನಿವಾಸಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಇವತ್ತು ಭೇಟಿ ನೀಡಿದ್ದಾರೆ. ಇನ್ನೂ ನಮ್ಮ ತಾಯಿ ಅವರು ಆಸ್ಪತ್ರೆಯಲ್ಲೇ ಇದ್ದಾರೆ. ವಿಶೇಷವಾಗಿ ಉಪ ರಾಷ್ಟ್ರಪತಿಗಳು ನಮ್ಮ ತಾಯಿಯವರ ಆರೋಗ್ಯ ವಿಚಾರಿಸಿ, ಆದಷ್ಟು ಬೇಗ ಗುಣಮುಖರಾಗಬೇಕು ಎಂದು ಹಾರೈಸಿದರು. ಅವರು ತೋರಿದ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ನಮ್ಮ ಕುಟುಂಬ ಚಿರಋಣಿ ಆಗಿರುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post